"ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ"; 'ಕಾಂತಾರ-1' ಬಗ್ಗೆ ದುನಿಯಾ ವಿಜಿ ಪೋಸ್ಟ್ ವೈರಲ್
ಆಡಿಕೊಂಡವರ ಬಾಯಿ ಮುಚ್ಚಿಸುವಲ್ಲಿ 'ಕಾಂತಾರ- 1' ಸಿನಿಮಾ ಸಕ್ಸಸ್ ಕಂಡಿದೆ. ಎಲ್ಲೆಲ್ಲೂ ಚಿತ್ರಕ್ಕೆ ಅಭೂತಪರ್ವ ಪ್ರತಿಕ್ರಿಯೆ ಸಿಕ್ಕಿದೆ. ನಿರ್ದೇಶನದಲ್ಲಿ ಮಾತ್ರವಲ್ಲದೇ ನಟನೆಯಲ್ಲಿ ಕೂಡ ರಿಷಬ್ ಶೆಟ್ಟಿ ಆರ್ಭಟಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಸಾಕಷ್ಟು ತಾರೆಯರು ಸಿನಿಮಾ ನೋಡಿ ತಂಡದ ಶ್ರಮಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೀಗ ನಟ, ನಿರ್ದೇಶಕ ದುನಿಯಾ ವಿಜಯ್ ಪ್ರತಿಕ್ರಿಯಿಸಿದ್ದಾರೆ.
'ಕಾಂತಾರ- 1' ಚಿತ್ರದ ಬಗ್ಗೆ ಕೆಲವರು ಆಡಿಕೊಂಡಿದ್ದರು. ಬಾಲಿವುಡ್ ವಿಮರ್ಶಕರು ನೆಗೆಟಿವ್ ರಿವ್ಯೂ ಮಾಡಿದ್ದರು. ಸಿನಿಮಾ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದರು. ಅದೆಲ್ಲವೂ ಸುಳ್ಳಾಗಿದೆ. ನೆಗೆಟಿವ್ ರಿವ್ಯೂ ಹಾಕಿದವರೆ ಸಿನಿಮಾ ಕಲೆಕ್ಷನ್ ಲೆಕ್ಕ ಹಾಕುತ್ತಾ ಸುಸ್ತಾಗುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ, ಕೇರಳ, ಓವರ್‌ಸೀಸ್, ಉತ್ತರ ಭಾರತ ಎಲ್ಲೆಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ಫಸ್ಟ್ ವೀಕೆಂಡ್ ಆಹಾ ಓಹೋ ಎಂದು ಸದ್ದು ಮಾಡುತ್ತದೆ. ಸೋಮವಾರ ಅಸಲಿ ಅಗ್ನಿಪರೀಕ್ಷೆ ಎದುರಾಗುತ್ತದೆ. ವಾರದ ದಿನದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ತಮಾಷೆ ಮಾತಲ್ಲ. ಆ ಪ್ರಯತ್ನದಲ್ಲೂ 'ಕಾಂತಾರ- 1' ಸಿನಿಮಾ ಗೆದ್ದಿದೆ. ಮೊದಲ 4 ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗಿತ್ತು. ಸೋಮವಾರ ಕೂಡ ಗಂಟೆಗೆ 30ರಿಂದ 40 ಸಾವಿರ ಟಿಕೆಟ್ ಬುಕ್ ಆಗುತ್ತಿದೆ. ಆ ಮೂಲಕ 5 ದಿನಕ್ಕೆ 60 ಲಕ್ಷ ಟಿಕೆಟ್ ಬರೀ ಆನ್‌ಲೈನ್‌ನಲ್ಲೇ ಸೇಲ್ ಆಗಿದೆ.
'ಕಾಂತಾರ- 1' ಸಕ್ಸಸ್ ಬಗ್ಗೆ ನಟ ದುನಿಯಾ ವಿಜಯ್ ಟ್ವೀಟ್ ಮಾಡಿದ್ದಾರೆ. ಬಹಳ ವಿಭಿನ್ನವಾಗಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಅಭಿನಂದನೆ ತಿಳಿಸಿದ್ದಾರೆ. "ಸೋಮವಾರದ್ ಮೇಲ್ ನೋಡ್ರೀ... ಹೆಂಗ್ ಬಿದ್ದೋಗುತ್ತೆ ಅಂದೋರಿಗೆ.. ವರ್ಷಪೂರ್ತಿ ನೋಡ್ತಾಯಿರಿ.. ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ... ಎಂದು ಸಾರಿ.. ಮತ್ತೆ ಇಡೀ ದೇಶ ಹೆಮ್ಮ ಪಡುವಂತಹ ಯಶಸ್ವಿ ಚಿತ್ರ ಕೊಟ್ಟ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಯಾವುದೇ ಸಿನಿಮಾ ಬಂದರೂ ಇಂಡಸ್ಟ್ರಿಯಲ್ಲಿ ಕೂಡ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಕೆಲವರು ಹೊಗಳಿದರೆ ಮತ್ತೆ ಕೆಲವರು ಕಾಲೆಳೆಯುತ್ತಾರೆ. ಅಂತಹವರ ಬಗ್ಗೆ ದುನಿಯಾ ವಿಜಯ್ ಮಾರ್ಮಿಕವಾಗಿ ಟಾಂಗ್ ಕೊಟ್ಟಂತೆ ಕಾಣುತ್ತಿದೆ. 'ಕಾಂತಾರ- 1' ಸಿನಿಮಾ ಗೆಲುವನ್ನು ಇಡೀ ಚಿತ್ರತಂಡ ಸಂಭ್ರಮಿಸುತ್ತಿದೆ. ಶೀಘ್ರದಲ್ಲೇ ತಾರೆಯರಿಗೆ ಸ್ಪೆಷಲ್ ಶೋ ಆಯೋಜಿಸುವ ಸಾಧ್ಯತೆಯಿದೆ.


Click it and Unblock the Notifications











