'ಸಾವಿರ ದೇವರಿಗೂ ಮಿಗಿಲಿವಳು ನಮ್ಮಮ್ಮ': ತಾಯಿಯಲ್ಲಿ ದೇವರ ಕಂಡಿದ್ದ ವಿಜಯ್
''ಮಕ್ಕಳಿಗೆ ಮೊದಲು ಜಗತ್ತು ತೋರಿಸುವವಳು ತಾಯಿ. ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳ ಜಗತ್ತು ಬೇರೆಯೇ ಆಗುತ್ತದೆ. ಅದು ಸಹಜ. ಆದರೆ ಆ ಜಗದೊಳಗೂ ಅಮ್ಮನನ್ನು ಜತೆಗಿರಿಸುವವರೇ ನಿಜವಾದ ಮಕ್ಕಳು. ಆ ಅದೃಷ್ಟ ನನ್ನದು'' ನಟ ದುನಿಯಾ ವಿಜಯ್ ಈ ಹಿಂದೆ ತಮ್ಮ ತಾಯಿಯ ಕುರಿತು ಹೇಳಿದ ಮಾತಿದೆ.
ತಮ್ಮ ತಾಯಿಯ ಬಗ್ಗೆ ದುನಿಯಾ ವಿಜಯ್ ಬಹಳ ಪ್ರೀತಿ, ಹೆಮ್ಮೆ, ಗೌರವ ಎಲ್ಲವೂ. ಯಾವುದೇ ಕ್ಷಣದಲ್ಲೂ ತಾಯಿಯನ್ನು ಬಿಟ್ಟುಕೊಡದ ಮಗ ವಿಜಯ್. ದುನಿಯಾ ವಿಜಯ್ ಜೀವನದಲ್ಲಿ ಏನೇ ಆಗಿರಬಹುದು. ಆದರೆ, ಅಮ್ಮ-ಮಗ ಅಂತ ಬಂದ್ರೆ ವಿಜಯ್-ನಾರಾಯಣಮ್ಮ ಎಲ್ಲರಿಗೂ ಮಾದರಿ. ಇವರಿಬ್ಬರ ಬಾಂಧವ್ಯ ಎಂತಹದ್ದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿತ್ತು.
ದುರಾದೃಷ್ಟವಶಾತ್, ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಇಂದು ನಿಧನರಾಗಿದ್ದಾರೆ. ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸಿದ ಕೊನೆಯುಸಿರೆಳೆದರು. ಈ ಮೂಲಕ ಜೀವನದಲ್ಲಿ ಬಹುದೊಡ್ಡ ಶಕ್ತಿ ಕಳೆದುಕೊಂಡರು ಎನ್ನಬಹುದು. ಮುಂದೆ ಓದಿ...

ಅಮ್ಮನ ಬಗ್ಗೆ ದುನಿಯಾ ಮಾತು
''ಸರ್ಕಾರಿ ಕೆಲಸದಲ್ಲಿದ್ದರೂ ನಮ್ಮನ್ನೆಲ್ಲ ಬೆಳೆಸಲು ನಾರಾಯಣ (ನನ್ನಮ್ಮ) ಪಟ್ಟ ಪಾಡು ಅಷ್ಟಿಷ್ಟಲ್ಲ.. ಸ್ಕೂಲ್ ಫೀಸು, ಹಬ್ಬ ಹರಿದಿನ, ಬಟ್ಟೆ, ನೆಂಟರು, ಹೆಣ್ಣುಮಕ್ಕಳ ಮದುವೆ. ಎಷ್ಟೋ ದಿನ ತಾನು ಒಪ್ಪತ್ತು ತಿಂದು ನಮ್ಮ ಹೊಟ್ಟೆ ತುಂಬಿಸಿದ್ದಾಳೆ. ''ಹಣವಿರುವ ಹೆಣ್ಣು ಮಕ್ಕಳ ಮೈತುಂಬ ಬಂಗಾರವಾದರೆ. ಮಧ್ಯಮ ಹಾಗು ಬಡ ತಾಯಂದಿರ ಮೈತುಂಬ ಚಿಲ್ಲರೆ ಸಾಲಗಳು...!!'' ಏನೇ ಆದರೂ ಎಲ್ಲರಂತೆ ತನ್ನ ಮಕ್ಕಳೂ ಒಳ್ಳೆ ಶಾಲೆಗೇ ಹೋಗಬೇಕು, ಒಳ್ಳೆ ಬಟ್ಟೇನೇ ಹಾಕಬೇಕು ಎನ್ನುವ ನಿಸ್ವಾರ್ಥದ ಸ್ವಾರ್ಥ ತಾಯಿಗೆ ಮಾತ್ರ ಆ ದೇವರು ಕೊಟ್ಟ ವರ..'' - ದುನಿಯಾ ವಿಜಯ್ ಈ ಹಿಂದೆ ತಾಯಿಯ ಬಗ್ಗೆ ಬರೆದುಕೊಂಡಿದ್ದರು.

ಅಮ್ಮನನ್ನು ಜತೆಗಿರಿಸುವವರೇ ನಿಜವಾದ ಮಕ್ಕಳು
''ಮಕ್ಕಳಿಗೆ ಮೊದಲು ಜಗತ್ತು ತೋರಿಸುವವಳು ತಾಯಿ. ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳ ಜಗತ್ತು ಬೇರೆಯೇ ಆಗುತ್ತದೆ. ಅದು ಸಹಜ. ಆದರೆ ಆ ಜಗದೊಳಗೂ ಅಮ್ಮನನ್ನು ಜತೆಗಿರಿಸುವವರೇ ನಿಜವಾದ ಮಕ್ಕಳು. ಆ ಅದೃಷ್ಟ ನನ್ನದು. ತಂದೆ ತಾಯಿ ವಯಸ್ಸಾಗುತ್ತಾ ಹೋದಂತೆ ಮಕ್ಕಳಂತಾಗುತ್ತಾರೆ ಎನ್ನುವ ಮಾತಿದೆ. ಆ ಮಗು ಮನದ ಮುಂದೆ ಜಗವೇ ಸೋತಿದೆ. ಬಾಲ್ಯದ ಅಂಬೆಗಾಲು, ಹಠ ಎಲ್ಲವನ್ನು ಮತ್ತೆ ಅವರಲ್ಲಿ ಕಾಣ ಬಲ್ಲೆ. ಅವರ ಸೇವೆಯ ಭಾಗ್ಯ ಅದೃಷ್ಟವೆಂದುಕೊಳ್ಳಬಲ್ಲೆ. ಇದು ಒಂದು ದಿನದ ಮಾತಲ್ಲ; ದಿನವೂ ನೋಡಿ ಕೊಂಡಾಗಲೇ ದಿನಾಚರಣೆ ಅರ್ಥಪೂರ್ಣ'' ಎಂದು ಪೋಸ್ಟ್ ಹಾಕಿದ್ದ ವಿಜಯ್ ಅಮ್ಮಂದಿರ ದಿನಕ್ಕೆ ಶುಭಕೋರಿದ್ದರು.

ಸಾವಿರ ದೇವರಿಗೂ ಮಿಗಿಲಿವಳು
''ಪದಗಳಿಗೆ ಸಿಗದ ಅಪರೂಪದ ಗುಣದವಳು ಸಾವಿರ ದೇವರಿಗೂ ಮಿಗಿಲಿವಳು ಅಮ್ಮಾ... ನಮ್ಮಮ್ಮ'' ಎಂದು ವಿಜಯ್ ತಮ್ಮ ತಾಯಿಯ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದರು.
Recommended Video

ನಮ್ಮಪ್ಪ ಅಮ್ಮನೇ ನನ್ನ ಮೊದಲ ಗುರು
ಬದುಕಿನುದ್ದಕ್ಕೂ ನನ್ನ ಕಷ್ಟ ಸುಖಗಳಲ್ಲಿ ಜೊತೆಯಾಗಿ ಕೈ ಹಿಡಿದು ನಡೆಸುತ್ತಿರುವ ನಮ್ಮಪ್ಪ ಅಮ್ಮನೇ ನನ್ನ ಮೊದಲ ಗುರುಗಳು.! ತಮ್ಮ ಮಕ್ಕಳಿಗೆ ದಾರಿ ತಪ್ಪದಂತೆ ಎಚ್ಚರಿಸಿ, ಜಗತ್ತಿನ ಅರಿವು ಮೂಡಿಸಿ, ಜ್ಞಾನ ತುಂಬುತ್ತಿರುವ ಪ್ರತಿಯೊಬ್ಬ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದರು.


Click it and Unblock the Notifications











