ಸ್ಯಾಂಡಲ್ ವುಡ್ ಗೆ 'ಲಕ್ಕಿ' ನಾಯಕನನ್ನು ಪರಿಚಯಿಸಿದ ನಟ ದುನಿಯಾ ವಿಜಯ್
ಸ್ಯಾಂಡಲ್ ವುಡ್ ನಟ ದುನಿಯಾ ಸದ್ಯ ಸಲಗ ಸಿನಿಮಾದ ಮುಗಿಸಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ತಾವೆ ನಿರ್ದೇಶನ ಮಾಡಿ ನಟಿಸಿರುವ ಸಲಗ ಸಿನಿಮಾ ಸದ್ಯ ರಿಲೀಸ್ ಗೆ ಸಿದ್ಧವಾಗಿದೆ. ದುನಿಯಾ ವಿಜಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾವಿದು.
Recommended Video

ಮೊದಲ ನಿರ್ದೇಶನದ ಸಿನಿಮಾ ಮುಗಿಸಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಿಜಯ್ ಕೆಲವು ಕಥೆಗಳನ್ನು ಬರೆದಿದ್ದು, ಇದರಲ್ಲಿ ಒಂದು ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದು, ಇದೀಗ ಹೊಸ ನಾಯಕನ್ನು ಪರಿಚಿಯಿಸಿದ್ದಾರೆ.
ಚಿತ್ರರಂಗಕ್ಕೆ ಹೊಸ ನಾಯಕನನ್ನು ಪರಿಚಯಿಸುವುದಾಗಿ ವಿಜಯ್ ಹೇಳಿದ್ದರು. ಅದರಂತೆ ಈಗ ವಿಜಯದಶಮಿ ದಿನ ಹೊಸ ನಾಯಕನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಲಕ್ಕಿ ಎನ್ನುವ ಹೊಸ ನಾಯಕನನ್ನು ವಿಜಿ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಅಂದ್ಹಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಶೀರ್ವಾದದೊಂದಿಗೆ ಸಿನಿಮಾ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

"ನಟನಾಗಬೇಕು ಎಂಬ ಹಂಬಲದಿಂದ ಅಭಿನಯ ಕಲಿತಿದ್ದ ನನಗೆ ಚಿತ್ರರಂಗ ಪ್ರವೇಶಿಸುವುದು ಕೊಂಚ ಕಷ್ಟದ ಕೆಲಸವಾಗಿತ್ತು. ಆ ಕಷ್ಟವನ್ನು ಮತ್ತೊಂದು ಕಷ್ಟದ ಮೂಲಕವೇ ಜಯಿಸಬೇಕು ಎಂದು ತೀರ್ಮಾನಿಸಿ ಸ್ಟಂಟ್ ಕಲಿತು, ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಬಂದೆ. ನಂತರದ ದಿನಗಳಲ್ಲಿ ಸಾಹಸದ ಜತೆಯಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲೂ ನಟಿಸಲು ಆರಂಭಿಸಿದೆ. ಒಂದಷ್ಟು ದಿನಗಳ ನಂತರ 'ದುನಿಯಾ' ಸಿನಿಮಾದ ಮೂಲಕ ನಾಯಕನಾದೆ." ಎಂದು ಬರೆದುಕೊಂಡಿದ್ದಾರೆ.
"ಕನ್ನಡಿಗರು ಅಭಿಮಾನದಿಂದ ತಮ್ಮೆರೆಡು ಕೈಗಳಿಂದ ನನ್ನನ್ನು ಬಾಚಿ ತಬ್ಬಿಕೊಂಡು ಸಿನಿಮಾ ಗೆಲ್ಲಿಸಿದರು. ಜತೆಗೆ ಈ ಹುಡುಗನಲ್ಲಿ ಪ್ರತಿಭೆ ಇದೆ ಎಂದು ಅವರ ಮನಸ್ಸಿನಲ್ಲಿ ನನಗೊಂದು ಸ್ಥಾನವನ್ನು ನೀಡಿದರು. ಇದೆಲ್ಲವೂ ಒಂದು ಹಂತವಾದರೆ ಕೆಲ ದಿನಗಳ ಹಿಂದೆ ಅಭಿಮಾನಿಗಳ ಆಶೀರ್ವಾದಿಂದಾಗಿ ಸಲಗ ಸಿನಿಮಾವನ್ನು ನಿರ್ದೇಶನ ಮಾಡಲು ನಿರ್ಧಾರ ಮಾಡಿದೆ. ಕೆ ಪಿ ಶ್ರೀಕಾಂತ್, ನಾಗಿ ಮತ್ತು ನನ್ನ ತಂಡ ನೀಡಿದ ಸಾಥ್ ನಿಂದಾಗಿ ಸಲಗ ಬಿಡುಗಡೆಗೆ ಸಿದ್ಧವಾಗಿದೆ."

"ಈ ನಡುವೆ ಹೊಸ ಆಲೋಚನೆಗಳೊಂದಿಗೆ ಹೊಸ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇನೆ. ನಾಯಕನಾಗಿದ್ದವನು ನಿರ್ದೇಶಕನಾದೆ, ಈಗ ಹೊಸಬರೊಂದಿಗೆ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದೇನೆ. ನನ್ನ ಹೊಸ ಕಥೆಗೆ ಲಕ್ಕಿ ಎಂಬ ಹೊಸ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯದಲ್ಲೇ ನಾಯಕಿ ಮತ್ತು ನಿರ್ಮಾಪಕರ್ಯಾರು ಎಂಬುದನ್ನು ಹೇಳುತ್ತೇವೆ. ನನ್ನ ಈ ಪ್ರಯತ್ನಕ್ಕೆ ಹಿರಿಯರು ನನ್ನ ಸೋದರ ಸಮಾನರಾದ ಶಿವಣ್ಣ, ಗೀತಕ್ಕ ಮನಃ ಪೂರ್ವಕವಾಗಿ ಹಾರೈಸಿದ್ದಾರೆ. ನನಗೆ ಬೆನ್ನೆಲುಬಾಗಿ ಸಲಗ ಸಿನಿಮಾದ ನಿರ್ಮಾಪಕರಾದ ಶ್ರೀಕಾಂತ್ ಮತ್ತು ನಾಗಿ ಇದ್ದಾರೆ. ಇವರೆಲ್ಲರ ಜತೆ ನಿಮ್ಮ ಹಾರೈಕೆ , ಆಶೀರ್ವಾದ ನನ್ನ ಪ್ರಯತ್ನಕ್ಕೆ ಬೇಕೇ ಬೇಕು. ವಿಜಯ ದಶಮಿಯಂದು ನಾಯಕನಾರು ಎಂಬುದನ್ನು ಅನೌನ್ಸ್ ಮಾಡುತ್ತಿದ್ದೇನೆ. ನಮ್ಮ ಇಡೀ ತಂಡಕ್ಕೆ ವಿಜಯ ಸಿಗಲಿ ಎಂದು ನೀವು ಹಾರೈಸಬೇಕು." ಎಂದು ಬರೆದುಕೊಂಡಿದ್ದಾರೆ.
ಶಿವಣ್ಣ ಜೊತೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಸದ್ಯದಲ್ಲೇ ನಾಯಕಿಯನ್ನು ಪರಿಚಿಯಿಸಲಿದ್ದಾರೆ.


Click it and Unblock the Notifications











