ಮಾಸ್ತಿ ಗುಡಿ ಶೂಟಿಂಗ್ ದುರಂತ: ಸಿಕ್ಸ್ ಫ್ಯಾಕ್ ತೋರಿಸಲು ಅನಿಲ್-ಉದಯ್ ಸೇಫ್ಟಿ ಜಾಕೆಟ್ ಧರಿಸಲಿಲ್ಲ?
ದುನಿಯಾ ವಿಜಯ್ ನಟನೆಯ 'ಮಾಸ್ತಿಗುಡಿ' ಸಿನಿಮಾ ದುರಂತ ಗೊತ್ತೇ ಇದೆ. ಈ ಸಿನಿಮಾದ ಶೂಟಿಂಗ್ ವೇಳೆ ಸಹ ನಟರಾದ ಅನಿಲ್ ಹಾಗೂ ಉದಯ್ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
'ಮಾಸ್ತಿ ಗುಡಿ' ಸಿನಿಮಾದ ಸಾಹಸ ದೃಶ್ಯಗಳನ್ನು ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ದುನಿಯಾ ವಿಜಯ್, ಖಳನಟರಾಗಿ ನಟಿಸುತ್ತಿದ್ದ ಅನಿಲ್ ಹಾಗೂ ಉದಯ್ ಈ ಮೂವರು ಮಂದಿ ಹೆಲಿಕಾಪ್ಟರ್‌ನಿಂದ ಧುಮುಕಿದ್ದರು. ಈ ವೇಳೆ ಈಜಿ ದಡ ಸೇರಲಾರದೆ ಅನಿಲ್ ಹಾಗೂ ಉದಯ್ ಇಬ್ಬರೂ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸಾವನಪ್ಪಿದ ಖಳ ನಟರಾದ ಉದಯ್ ಹಾಗೂ ಅನಿಲ್ ತಮ್ಮ ಸಿಕ್ಸ್ ಪ್ಯಾಕ್ ಪ್ರೇಕ್ಷಕರು ನೋಡಬೇಕೆಂದು ಬಯಸಿದ್ದರು. ಈ ಕಾರಣಕ್ಕೆ ಅವರು ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು. ಅವರೇ ಸೇಫ್ಟಿ ಜಾಕೆಟ್ ಧರಿಸುವುದಿಲ್ಲ ಎಂದು ಹೇಳಿದ್ದರು ಎಂಬ ವಾದ ಮಂಡನೆಯಾಗಿದೆ.
ಸಿಕ್ಸ್ ಪ್ಯಾಕ್ ತೋರಿಸಲು ಸೆಫ್ಟಿ ಜಾಕೆಟ್ ಧರಿಸಲಿಲ್ಲ
ಸಿಕ್ಸ್‌ಪ್ಯಾಕ್ ತೋರಿಸಲು ಅನಿಲ್ ಹಾಗು ಉದಯ್ ಸೆಫ್ಟಿ ಜಾಕೆಟ್ ಧರಿಸದೆ ಸಾವನ್ನಪ್ಪಿದ ಆಘಾತಕಾರಿ ಅಂಶವನ್ನು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾರೆ. ಈ ಪ್ರಕರಣದ ಸಂಬಂಧ ಸಾಹಸನ ನಿರ್ದೇಶಕ ರವಿವರ್ಮ ವಿರುದ್ಧ ದೂರು ದಾಖಲಾಗಿತ್ತು.

ಈ ಸಂಬಂಧ ಸಾಹಸ ನಿರ್ದೇಶಕ ರವಿವರ್ಮ ವಿರುದ್ಧ ಉದ್ದೇಶ ಪೂರ್ವಕವಲ್ಲದ ಕೊಲೆ ಎಂಬ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಆರೋಪವನ್ನು ಕೈಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಶ್ರೀಧರ ಈ ಪ್ರಕರಣದ ವಿಚಾರಣೆ ನಡೆಸಿದರು.
ರವಿವರ್ಮ ಪರ ವಕೀಲರು ವಾದವೇನು?
ಖಳ ನಟರಿಬ್ಬರ ಸಾವು ಆಕಸ್ಮಿಕವಾಗಿ ಜರುಗಿದೆ. ಹೆಲಿಕಾಫ್ಟರ್‌ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ದೃಶ್ಯದ ಚಿತ್ರೀಕರಣವಿತ್ತು. ಈ ವೇಳೆ ಅನಿಲ್ ಹಾಗೂ ಉದಯ್ ಇಬ್ಬರು ತಮ್ಮ ದೇಹದ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ತೋರಿಸಲು ಅನುವು ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರು. ಈ ಸಂಬಂಧ ಸೇಫ್ಟಿ ಜಾಕೆಟ್ ಧರಿಸಲು ಮೃತರು ಒಪ್ಪಿರಲಿಲ್ಲ. ಅಲ್ಲದೆ,ತಮಗೆ ಈಜು ಬರುವುದಾಗಿಯೂ ತಿಳಿಸಿದ್ದರು. ಅವರ ಒಪ್ಪಿಗೆ ಮೇರೆಗೆ ಚಿತ್ರೀಕರಣ ನಡೆಸಲಾಗಿತ್ತು. ಈ ಅಂಶ ಪೋಲಿಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ" ಎಂದು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು.
ಈಜು ಬರುವುದಾಗಿ ಮೃತರು ಹೇಳಿದ್ದರೂ, ಅವರ ಹಿತ ದೃಷ್ಟಿಯಿಂದ ಶೂಟಿಂಗ್ ವೇಳೆ ರವಿವರ್ಮ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಈಜುಗಾರರು ಮತ್ತು ಮೋಟಾರ್ ಬೋಟ್ ಅನ್ನು ಸ್ಥಳದಲ್ಲಿ ನಿಗದಿಪಡಿಸಿದ್ದರು. ಆದರೆ, ಮೋಟಾರ್ ಬೋಟ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಖಳನಾಯಕರು ನೀರಿಗೆ ಧುಮುಕಿದ್ದ ಸ್ಥಳಕ್ಕೆ ಕ್ರಮಿಸಲು ಸಾಧ್ಯವಾಗಲಿಲ್ಲ" ಎಂದು ವಾದ ಮಂಡಿಸಿದ್ದಾರೆ.
ಉದ್ದೇಶ ಪೂರ್ವಕವಾಗಿ ಅಪರಾಧವೆಸಗಿಲ್ಲ
'ಮಾಸ್ತಿಗುಡಿ' ದುರಂತಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಉದ್ದೇಶಪೂರ್ವಕವಾಗಿ ಯಾವುದೇ ಶಿಕ್ಷಾರ್ಹ ಅಪರಾಧ ಎಸಗಿಲ್ಲ. ಅವರ ವಿರುದ್ಧದದ ಆರೋಪವನ್ನು ಕೈಬಿಡಬೇಕು ಎಂದು ರವಿವರ್ಮ ಪರ ವಕೀಲರು ನ್ಯಾಯಾಲಯದ ವಾದ ಮಂಡಿಸಿದ್ದರು. ಮುಂದಿನ ವಾದ ಮಂಡನೆಗೆ ಮೇ 30ರಂದು ನಿಗದಿಪಡಿಸಲಾಗಿದೆ.
'ಮಾಸ್ತಿಗುಡಿ' ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ 2016 ನವೆಂಬರ್ 7ರಂದು ಜರುಗಿತ್ತು. ಆ ವೇಳೆ ಖಳ ನಟರಾದ ಉದಯ್, ಅನಿಲ್ ಹಾಗೂ ನಾಯಕ ನಟ ದುನಿಯಾ ವಿಜಯ್ ಮೂವರು ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿಗೆ ಧುಮುಕಿದ್ದರು. ಆದರೆ, ಈಜಿ ದಡ ಸೇರಲು ಸಾಧ್ಯವಾಗದೆ ಖಳ ನಟರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ದುರಂತ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿತ್ತು. ಈ ಪ್ರಕರಣ ಸಂಬಂಧ ತಾವರೆಕೆರೆ ಪೊಲೀಸರು ಸಿನಿಮಾದ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಇತರೆ ಐವರ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ದುಡುಕಿನ ಮತ್ತು ನಿರ್ಲಕ್ಷ್ಯದಿಂದ ಇಬ್ಬರ ಸಾವಿಗೆ ಕಾರಣ ಅನ್ನುವ ಪ್ರಕರಣದಡಿ ದೂರ ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು.


Click it and Unblock the Notifications











