ಮಧ್ಯಸ್ಥಿಕೆ ಕೇಂದ್ರದಲ್ಲಿ ದುನಿಯಾ ವಿಜಿ ಗಲಾಟೆ ಸಂಸಾರ

ಮಧ್ಯಸ್ಥಿಕೆ ಕೇಂದ್ರಕ್ಕೆ ನಾಗರತ್ನ ಅವರು ಆಟೋದಲ್ಲಿ ತಮ್ಮ ತಂದೆಯವರ ಸಂಗಡ ಬಂದರೆ, ವಿಜಿ ಕಾರಿನಲ್ಲಿ ತಮ್ಮ ಆಪ್ತರೊಂದಿಗೆ ಆಗಮಿಸಿದರು. ಇಬ್ಬರೂ ತಮ್ಮ ತಮ್ಮ ಪರ ವಕೀಲರನ್ನು ಕರೆತಂದಿದ್ದರು. ಮಧ್ಯಸ್ಥಿಕೆದಾರರಾದ ಶೋಭಾ ಪಾಟೀಲ್ ಅವರು ಇಬ್ಬರ ಮನವೊಲಿಸಲು ಪ್ರಯತ್ನಿಸಿದರು.
ಆದರೆ ದುನಿಯಾ ವಿಜಯ್ ತಮ್ಮ ಪಟ್ಟನ್ನು ಬಿಡಲಿಲ್ಲ ಎನ್ನಲಾಗಿದೆ. ಆದರೆ ನಾಗರತ್ನ ಅವರು ಸಂಸಾರದಲ್ಲಿ ಪತಿಯೊಂದಿಗೆ ಹೊಂದಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಆಪ್ತಸಮಾಲೋಚನೆ ನಡೆಸಲಾಯಿತು.
ಇಬ್ಬರೂ ನಗುನಗುತ್ತಲೇ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದರು. ಅವರ ನಡುವೆ ಯಾವುದೇ ವೈಮನಸ್ಯ ಕಂಡುಬರಲಿಲ್ಲ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬಂತೆ ಕಂಡುಬಂತು.
ಇಬ್ಬರ ನಡುವಿನ ವೈಮನಸ್ಯಕ್ಕೆ ಏನು ಕಾರಣ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಶೋಭಾ ಪಾಟೀಲ್ ಅವರು ಮಾಡಿದರು. ಇಬ್ಬರೊಂದಿಗೂ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ನಾಗರತ್ನ ಅವರು ತಮ್ಮಿಬ್ಬರ ನಡುವೆ ವೈಮಸ್ಸಿಗೆ ಕಾರಣವಾದ ಘಟನೆಗಳನ್ನು ಹೇಳಿಕೊಂಡಿದ್ದಾರೆ.
ಇಬ್ಬರಿಗೂ ಹಲವು ಸಲಹೆಗಳನ್ನು ನೀಡಲಾಗಿದ್ದು, ಪ್ರಕರಣವನ್ನು ಮಾರ್ಚ್ 18ಕ್ಕೆ ಮುಂದೂಡಲಾಯಿತು. ಮತ್ತೊಮ್ಮೆ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ಕಡೆಗೆ ವಿವಾಹ ವಿಚ್ಛೇದನವೇ ತಮ್ಮ ಕಟ್ಟಕಡೆಯ ಆಯ್ಕೆ ಎನ್ನುವುದಾದರೆ ಮತ್ತೆ ಕೋರ್ಟ್ ಅಂಗಳಕ್ಕೆ ಪ್ರಕರಣ ಬರುತ್ತದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











