ಪೋಲಿತನ, ತುಂಟತನ ತುಂಬಿದ ನಿಂಗವ್ವ- ರಾಚಯ್ಯನ ಡ್ಯುಯೆಟ್ ಸಾಂಗ್ ವೈರಲ್
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಬಿಡುಗಡುಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಸದ್ಯ ಚಿತ್ರದ 'ನಿಂಗವ್ವ ನಿಂಗವ್ವ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ವಯಸ್ಸಾದ ಗಂಡ, ಹೆಂಡತಿಯ ಪ್ರೀತಿ, ಸರಸ ಸಲ್ಲಾಪವನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.
ವಿಜಯ ಪ್ರಕಾಶ್ ಹಾಗೂ ಅನನ್ಯಾ ಭಟ್ ಹಾಡಿರುವ ಹಾಡಿಗೆ ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಹಳ್ಳಿ ಸೊಗಡಿನ ಚಿತ್ರದಲ್ಲಿ ಬಹಳ ಸೊಗಸಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ವಿಜಯ್ ಹಾಗೂ ರಚ್ಚು ಕೆಮೆಸ್ಟ್ರಿ ಸಿನಿರಸಿಕರ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ಇಡೀ ಸಿನಿಮಾ ಚಿತ್ರೀಕರಣ ಮಾಡಿದ್ದಾಗಿ ರಚಿತಾ ರಾಮ್ ಹೇಳಿದ್ದಾರೆ.

ಅದ್ಧೂರಿ ಕಾರ್ಯಕ್ರಮ ಮಾಡಿ 'ನಿಂಗವ್ವ ನಿಂಗವ್ವ' ಸಾಂಗ್ ರಿಲೀಸ್ ಮಾಡಲಾಗಿದೆ. ಯೋಗರಾಜ್ ಭಟ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗಳು ಇರುವಾಗ ವಯಸ್ಸಾದ ಗಂಡ- ಹೆಂಡತಿ ನಡುವಿನ ಸಲ್ಲಾಪವನ್ನು ಭಟ್ರು ತಮ್ಮ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಡ್ಯಾನ್ಸ್ ಇಲ್ಲದೇ ಮಾಂಟೇಜ್ ರೀತಿ ಹಾಡನ್ನು ಶೂಟ್ ಮಾಡಿದ್ದಾರೆ. ರಾಚಯ್ಯನ ಮನೆ, ದನಕ ಕೊಟ್ಟಿಗೆ, ಕೆರೆ ಕಟ್ಟೆ, ಎತ್ತಿನ ಬಂಡಿ, ನಾಟಕದ ವೇದಿಕೆ ಮುಂಭಾಗ, ಮದುವೆ ಮನೆ, ಸಂತೆ, ಊರ ದೇವರ ಮೆರವಣಿಗೆ ದಾರಿ, ಭತ್ತದ ಕಣ ಹೀಗೆ ಬೇರೆ ಬೇರೆ ಬ್ಯಾಕ್‌ಡ್ರಾಪ್‌ನಲ್ಲಿ ಸಾಂಗ್ ಶೂಟ್ ಮಾಡಲಾಗಿದೆ.
ನಿಂಗವ್ವ ನಿಂಗವ್ವ ಎಂದು ದುಂಬಾಲು ಬೀಳುವ ಗಂಡ, ಮಾವ ಮಾವ ಎನ್ನುತ್ತದೇ ಕಾಡಿಸುವ ಹೆಂಡತಿ ಹೀಗೆ ಇಡೀ ಹಾಡು ಸಾಗುತ್ತದೆ. ಎಲ್ಲಾ ದಂಪತಿಗಳಿಗೆ ಈ ಹಾಡನ್ನು ಚಿತ್ರತಂಡ ಅರ್ಪಿಸಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ 'ಲ್ಯಾಂಡ್‌ಲಾರ್ಡ್' ಸಿನಿಮಾ ಮೂಡಿ ಬರ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಜನವರಿ 23ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

'ಜಂಟಲ್‌ಮನ್' ಹಾಗೂ 'ಗುರು-ಶಿಷ್ಯರು' ಚಿತ್ರಗಳ ಸಾರಥಿ ಜಡೇಶ್ ಈ ಬಾರಿ ಕೋಲಾರ ಭಾಗದ ಹಳ್ಳಿಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲು ಹೊರಟ್ಟದ್ದಾರೆ. ಅಲ್ಲಿನ ಪರಿಸರದಲ್ಲೇ ಸಿನಿಮಾ ಚಿತ್ರೀಕರಣವಾಗಿದೆ. ದುನಿಯಾ ವಿಜಯ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಕೂಡ ಇದೇ ಮೊದಲ ಬಾರಿಗೆ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.
ದುನಿಯಾ ವಿಜಯ್ ಮಗಳು ರಿತನ್ಯಾ ಚಿತ್ರದಲ್ಲಿ ಕೂಡ ಮಗಳ ಪಾತ್ರದಲ್ಲೇ ನಟಿಸಿರುವುದು ವಿಶೇಷ. ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ ಎಸ್ ಮತ್ತು ಕೆ ವಿ ಸತ್ಯಪ್ರಕಾಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ರವಿವರ್ಮಾ, ರಿಯಲ್ ಸತೀಶ್, ವಿನೋದ್ ಹಾಗೂ ನರಸಿಂಹ ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ರಾಚಯ್ಯ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲಿಗೆ ರಾಚಯ್ಯ ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲು ಚಿತ್ರತಂಡ ಮುಂದಾಗಿತ್ತು. ಕೊನೆಗೆ ಬದಲಾಯಿತು.
ಧರ್ಮ ಅಧರ್ಮದ ನಡುವೆ ಯುದ್ಧ 'ಲ್ಯಾಂಡ್‌ಲಾರ್ಡ್' ಚಿತ್ರದ ಥೀಮ್. ತನಗೆ ತನ್ನವರಿಗೆ ಆದ ಅನ್ಯಾಯಕ್ಕೆ ನಾಯಕ ಬಂಡಾಯ ಏಳುವ ಕಥೆ ಚಿತ್ರದಲ್ಲಿದೆ. ಈ ಹಿಂದೆ 'ಕಾಟೇರ' ಚಿತ್ರಕ್ಕೂ ಜಡೇಶ್ ಕಥೆ ಕೊಟ್ಟಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. 'ಭೀಮ' ಸಕ್ಸಸ್ ಬಳಿಕ ರಾಚಯ್ಯನಾಗಿ ವಿಜಯ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 'ಜಾನಿ ಜಾನಿ ಎಸ್ ಪಪ್ಪಾ' ಬಳಿಕ ವಿಜಿ ಜೊತೆ ರಚಿತಾ ಮತ್ತೆ ನಾಯಕಿಯಾಗಿ ಮಿಂಚಿದ್ದಾರೆ.


Click it and Unblock the Notifications











