Landlord Trailer: ಬದಲಾಗಿ.. ಇಲ್ಲ ಬದಲಾಯಿಸ್ತಾನೆ; 'ಲ್ಯಾಂಡ್‌ಲಾರ್ಡ್' ಜಬರ್ದಸ್ತ್ ಟ್ರೈಲರ್ ರಿಲೀಸ್
ದುನಿಯಾ ವಿಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಲ್ಯಾಂಡ್‌ಲಾರ್ಡ್' ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಹೊರಬಂದಿದೆ. ಖಡಕ್ ಡೈಲಾಗ್ಸ್, ಮಾಸ್ ಪರ್ಫಾಮರ್ನ್ಸ್ ಮಿಕ್ಸ್ ಮಾಡಿ ಸ್ಪೆಷಲ್ ಝಲಕ್ ಕಟ್ ಮಾಡಿದ್ದಾರೆ. ಹಳ್ಳಿ ಜನರ ನೋವು ನಲಿವಿನ ಕಥೆ ಚಿತ್ರದಲ್ಲಿದ್ದು ಮೊದಲ ನೋಟದಲ್ಲೇ ಟ್ರೈಲರ್ ಗಮನ ಸೆಳೆಯುತ್ತಿದೆ.
ಜನವರಿ 23ಕ್ಕೆ 'ಲ್ಯಾಂಡ್‌ಲಾರ್ಡ್' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ದುನಿಯಾ ವಿಜಯ್ ಹಾಗೂ ರಾಜ್ ಬಿ ಶೆಟ್ಟಿ ನಡುವಿನ ಸಂಘರ್ಷ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ. 'ಕಾಟೇರ' ರೀತಿ ಮತ್ತೊಂದು ಹಳ್ಳಿ ಜನರ ಬಂಡಾಯದ ಕಥೆಯನ್ನು ಜಡೇಶ್ ಕಟ್ಟ್ಟಿಕೊಟ್ಟಿದ್ದಾರೆ. ದರ್ಶನ್ ನಟಿಸಿದ್ದ 'ಕಾಟೇರ' ಚಿತ್ರಕ್ಕೆ ಜಡೇಶ್ ಕಥೆ ಒದಗಿಸಿದ್ದರು. ತನ್ನವರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಾಗುವ ರಾಚಯ್ಯ ಎಂಬ ಹಳ್ಳಿ ಕೂಲಿಕಾರ್ಮಿಕನ ಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಿದ್ದಾರೆ.

ರಾಚಯ್ಯನ ಪತ್ನಿ ನಿಂಗವ್ವ ಪಾತ್ರದಲ್ಲಿ ರಚಿತಾ ರಾಮ್ ಮಿಂಚಿದ್ದಾರೆ. ಆತನ ತಾಯಿ ಪಾತ್ರದಲ್ಲಿ ಹಿರಿಯ ನಟ ಉಮಾಶ್ರೀ ಆರ್ಭಟ ಜೋರಾಗಿದೆ. ದುನಿಯಾ ವಿಜಯ್ ಪುತ್ರಿ ರಿತನ್ಯಾ ಚಿತ್ರದಲ್ಲಿ ರಾಚಯ್ಯನ ಮಗಳು ಭಾಗ್ಯ ಆಗಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಕಾನ್ಸ್‌ಸ್ಟೇಬಲ್ ಪಾತ್ರ ಅದು. ಇಡೀ ಕಥೆಗೆ ಇದೇ ಪಾತ್ರ ತಿರುವು ಕೊಡುವಂತೆ ಕಾಣುತ್ತಿದೆ. ಇಷ್ಟು ಹೀರೊ ಆಗಿಯೇ ನಟಿಸುತ್ತಿದ್ದ ರಾಜ್. ಬಿ ಶೆಟ್ಟಿ ಈ ಚಿತ್ರದಲ್ಲಿ ಖಳನಾಗಿ ಅಬ್ಬರಿಸಿದ್ದಾರೆ.
ವಿಜಯ್ ಹಾಗೂ ರಾಜ್ ಜಿದ್ದಾಜಿದ್ದಿನ ಹೋರಾಟ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ. ಎಸ್ ಹಾಗೂ ಕೆ. ವಿ ಪ್ರಕಾಶ್ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ಹಣ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಬಿಜಿಎಂ ಹೈಲೆಟ್ ಎನಿಸಿಕೊಂಡಿದೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಸ್ತಿ ಡೈಲಾಗ್ಸ್ ಒಂದೊಂದಾಗಿ ಸಿಡಿದಿದೆ. "ನಮ್ಮ ಹಕ್ಕುಗಳನ್ನ ಪಡ್ಕೊಳ್ಳಕ್ಕ ಭಿಕ್ಷೆ ಬೇಡ್ಕೂದ್ದು ಎದ್ಗಳಿಗೆ ಒದ್ದು ಕಿತ್ಕೊಬೇಕು" ಹೀಗೆ ಸಾಗುತ್ತದೆ.

"ಕೂಲಿಯವ್ರು ಅಲ್ವಾ.. ಆ ದ್ಯಾವ್ರು ಬರ್ದಿಕೋದು ಈ ಬೇವ್ರಲ್ಲಿ ಅಳ್ಸೋಗದೆ" ಎನ್ನುವ ವಿಜಯ್ ಡೈಲಾಗ್ ಮನಮುಟ್ಟುವಂತಿದೆ. 20 ವರ್ಷಗಳ ಬೆಂಕಿ ಆರಬೇಕು ಅಂದ್ರೆ, ರಕ್ತದ ಕೋಡಿ ಹರಿಯಲೇಬೇಕು" ಎಂದು ಉಮಾಶ್ರೀ ಖಡಕ್ ಡೈಲಾಗ್ ಗಮನ ಸೆಳೆಯುತ್ತದೆ. ವಿಜಯ್ ಮಾತ್ರವಲ್ಲ ಉಮಾಶ್ರೀ, ರಚಿತಾ ರಾಮ್, ರಿತನ್ಯಾ ಹೀಗೆ ಎಲ್ಲರ ಪಾತ್ರಗಳು ಬಹಳ ಪವರ್‌ಫುಲ್ ಆಗಿದೆ. ವಿಜಯ್ ಆಕ್ಷನ್ ಮಾಸ್ ಪ್ರಿಯರಿಗೆ ಹಬ್ಬವೇ ಸರಿ. ಕ್ರೂರ ಜಮೀನ್ದಾರನಾಗಿ ರಾಜ್. ಬಿ ಶೆಟ್ಟಿ ವಿಲಕ್ಷಣ ನಟನೆ ಬಿಗ್ ಸರ್‌ಪ್ರೈಸ್..
80-90ರ ದಶಕದಲ್ಲಿ ಕೋಲಾರ ಸುತ್ತಮುತ್ತಲ ಭಾಗದಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು 'ಲ್ಯಾಂಡ್‌ಲಾರ್ಡ್' ಚಿತ್ರ ಕಟ್ಟಿಕೊಡಲಾಗಿದೆ. ಅದಕ್ಕೆ ತಕ್ಕಂತೆ ಅಲ್ಲಿನ ಭಾಷೆಯ ಸೊಗಡನ್ನು ಬಳಸಿಕೊಂಡು ಸಿನಿಮಾ ಮಾಡಿದ್ದಾರೆ. ಅದು ಇಡೀ ಕಥೆಗೆ ಹೊಸ ಫೀಲ್ ಕೊಡುವಂತಿದೆ. ಈ ಹಿಂದೆ 'ಜಂಟಲ್‌ಮನ್' ಹಾಗೂ 'ಗುರು-ಶಿಷ್ಯರು' ಚಿತ್ರಗಳನ್ನು ಜಡೇಶ್ ಕಟ್ಟಿಕೊಟ್ಟಿದ್ದರು. ಎರಡೂ ಸಿನಿಮಾಗಳು ಗೆದ್ದಿತ್ತು. ಹಾಗಾಗಿ ಸಹಜವಾಗಿಯೇ 3 ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.
40 ವರ್ಷಗಳ ಹಿಂದಿನ ಕಾಲಘಟ್ಟವನ್ನು ತೆರೆಗೆ ತರಲು ಚಿತ್ರತಂಡ ಬಹಳ ಶ್ರಮಿಸಿದೆ. ಟ್ರೈಲರ್ ನೋಡಿದರೆ ಅದು ಅರ್ಥವಾಗುತ್ತದೆ. ಸದ್ಯ ಸಿನಿಮಾ ಬಗ್ಗೆ ಕುತೂಹಲ ಮೂಡಿದ್ದು ಈ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.


Click it and Unblock the Notifications











