ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಅದ್ದೂರಿ ಸಂಭ್ರಮ: ಉತ್ತರ ಕರ್ನಾಟಕ ಕಡೆ ಹೊರಟ 'ಸಲಗ' ತಂಡ
ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಯುವರತ್ನ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದು, ಏಪ್ರಿಲ್ 1ಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.
ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ದುನಿಯಾ ವಿಜಯ್ ನಟನೆಯ ಮತ್ತು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಹಾಡುಗಳು ಮತ್ತು ಮೇಕಿಂಗ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಲಗ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದೆ.
ಇದಕ್ಕೂ ಮೊದಲು ಸಿನಿಮಾತಂಡ ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಏಪ್ರಿಲ್ 10ಕ್ಕೆ ಸಲಗ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ವಿಶೇಷ ಎಂದರೆ ಸಲಗ ತಂಡ ಕೂಡ ಉತ್ತರ ಕರ್ನಾಟಕ ಕಡೆ ಹೊರಟಿದ್ದು, ಹೊಸಪೇಟೆಯಲ್ಲಿ ಕಾರ್ಯಕ್ರಮ ಮಾಡಲು ಸಿನಿಮಾತಂಡ ನಿರ್ಧರಿಸಿದೆ.

ಈಗಾಗಲೇ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ. ಏಪ್ರಿಲ್ 5 ಚಿತ್ರದ ರಿಲೀಸ್ ಡೇಟ್ ಕೂಡ ಅಧಿಕೃತವಾಗಿ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಹೊಸಪೇಟೆ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಸಂಭ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪ್ರಿ ಕಾರ್ಯಕ್ರಮ ರದ್ದಾಗಲಿದೆಯಾ ಎನ್ನುವ ಆತಂಕ ಎಲ್ಲರಲ್ಲಿತ್ತು. ಆದರೆ ಕೊರೊನಾ ನಿರ್ಬಂಧಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.
ಸಲಗ ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಇನ್ನು ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಸಲಗ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.


Click it and Unblock the Notifications











