ಐಂದ್ರಿತಾ-ಇಮ್ರಾನ್ ವಿವಾದ: ವಿಜಯ್ ಹೇಳಿದ್ದೇನು?
ಬರೋಬ್ಬರಿ ಎರಡು ತಿಂಗಳುಗಳ ಹಿಂದೆ ನಡೆದ ಘಟನೆಯೀಗ ಮತ್ತೆ ಮತ್ತೆ ಮರುಜೀವ ಪಡೆಯುತ್ತಿದೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಟಿ ಐಂದ್ರಿತಾ ನಡುವೆ ವಿದೇಶದಲ್ಲಿ ನಡೆಯಿತು ಎನ್ನಲಾದ ವಿವಾದ ಇಷ್ಟು ದಿನಗಳ ಮೇಲೆ ಹೊಸ ಹೊಸ ತಿರುವು ಪಡೆಯುತ್ತಿದೆ. ಇತ್ತೀಚಿಗೆ ನಡೆದ 'ಜಯಮ್ಮನ ಮಗ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ದುನಿಯಾ ವಿಜಯ್ ಮಾತನಾಡಿರುವುದು ಲೇಟೆಸ್ಟ್ ಬೆಳವಣಿಗೆ.
ದುನಿಯಾ ವಿಜಯ್ ಪತ್ರಿಕಾಗೋಷ್ಠಿಯಲ್ಲಿ "ರಜನಿಕಾಂತ್ ಚಿತ್ರೀಕರಣದ ವೇಳೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮತ್ತು ನಟಿ ಐಂದ್ರಿತಾ ರೇ ನಡುವೆ ಅದೇನು ನಡೆಯಿತು ಎನ್ನುವುದು ನನಗೆ ಗೊತ್ತಿಲ್ಲ. ಐಂದ್ರಿತಾ ಒಳ್ಳೆ ನಟಿ, ಇಮ್ರಾನ್ ಸರ್ದಾರಿಯಾ ಕೂಡ ಅತ್ಯುತ್ತಮ ನೃತ್ಯ ನಿರ್ದೇಶಕರು. ಇಮ್ರಾನ್ ಜೊತೆ ಐಂದ್ರಿತಾ ಕೆಟ್ಟದಾಗಿ ವರ್ತಿಸಿದ್ದು ನನಗೆಲ್ಲೂ ಕಂಡು ಬರಲಿಲ್ಲ. ಹಾಗೇ ಇಮ್ರಾನ್ ಶೂಟಿಂಗ್ ವೇಳೆ ಐಂದ್ರಿತಾಗೆ ಬೈಯ್ದಿದ್ದು ಕೂಡ ನನಗೆ ಗೊತ್ತಿಲ್ಲ.
ನೃತ್ಯ ನಿರ್ದೇಶಕರು ಹೇಳಿದಂತೆ ಕಲಾವಿದರು ಕೇಳದೇ ಇರುವುದು ಸರಿಯಲ್ಲ. ಐಂದ್ರಿತಾ ನನ್ನ ಜತೆಗಿನ ನಿರ್ದಿಷ್ಟ ದೃಶ್ಯವೊಂದರಲ್ಲಿ ನಟಿಸಲು ನಿರಾಕರಿಸಿದರು ಎನ್ನುವ ಸಂಗತಿ ನನಗೇನೂ ನೋವುಂಟುಮಾಡಿಲ್ಲ. ಆದರೆ ಅದು ವೃತ್ತಿಪರತೆ ಅಲ್ಲ ಎನ್ನುವುದನ್ನು ಐಂದ್ರಿತಾ ಅರ್ಥ ಮಾಡಿಕೊಂಡರೆ ಸಾಕು. ಆದರೆ ಈ ವಿಷಯಕ್ಕೆ ಐಂದ್ರಿತಾರಂತ ನಟಿಯನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ" ಎಂದಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ನಡೆದ ವಿವಾದದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವಿವಾದಾತ್ಮಕ ನಟಿ ಎಂಬ ಹೆಸರು ಪಡೆದ ಐಂದ್ರಿತಾ ಆಮೇಲೆ ಎಲ್ಲೂ ಕಿರಿಕ್ ಮಾಡಿಕೊಂಡ ಉದಾಹರಣೆಯಿಲ್ಲ. ಇನ್ನು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಮೊದಲು ಎಲ್ಲೂ ಗಲಾಟೆ ಮಾಡಿಕೊಂಡ ಸುದ್ದಿಯಿಲ್ಲ. ಹೀಗಿದ್ದೂ ಯಾಕೆ ವಿದೇಶದಲ್ಲಿ ಅವರಿಬ್ಬರೂ ಗಲಾಟೆ ಮಾಡಿಕೊಂಡರು ಎಂಬುದು ಇಡೀ ಸಿನಿಮಾ ಉದ್ಯಮ ಹಾಗೂ ಪ್ರೇಕ್ಷಕರಿಗೆ ಕಾಡುತ್ತಿರುವ ಯಕ್ಷಪ್ರಶ್ನೆ.
"ರಜನಿ ಕಾಂತ್' ಚಿತ್ರದ ಹಾಡೊಂದರ ಶೂಟಿಂಗ್ ಗಾಗಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ವಿಜಯ್ ಹಾಗೂ ಐಂದ್ರಿತಾ ರೇ ಜೊತೆ ಸಿಂಗಾಪುರಕ್ಕೆ ಹೋಗಿದ್ದರು. "ಇಲ್ಲಿಂದ ಜೊತೆಯಲ್ಲಿ ಮೇಕಪ್ ಮ್ಯಾನ್ ಬದಲು ತಮ್ಮ ತಾಯಿಯನ್ನು ಕರೆದುಕೊಂಡು ಹೋಗಿದ್ದರು. ವೇಳೆಗೆ ಸರಿಯಾಗಿ ಐಂದ್ರಿತಾ ರೇ ಶೂಟಿಂಗ್ ಗೆ ಬರುತ್ತಿರಲಿಲ್ಲ, ಕ್ಲೋಸಪ್ ಶಾಟ್ ಬೇಡ ಎನ್ನುತ್ತಿದ್ದರು. ಅಷ್ಟೇ ಅಲ್ಲ, ದುನಿಯಾ ವಿಜಯ್ ಜೊತೆಗಿನ ಕೆಲವು ಡ್ಯುಯೆಟ್ ದೃಶ್ಯಗಳಿಗೆ ಐಂದ್ರಿತಾ ಸಹಕರಿಸಲಿಲ್ಲ.
ಹೀಗಾಗಿ ಆ ಕ್ಷಣದಲ್ಲಿ 'ಅನ್ ಪ್ರೊಫೆಶನಲ್' ಎಂದು ಬೈಯ್ದು ಆನಂತರ 'ಕ್ಷಮೆ' ಕೇಳಿದ್ದೇನೆ. ಅಲ್ಲಿ ಎಲ್ಲವೂ ಆಗ ಸರಿಹೋಗಿತ್ತು. ಇಲ್ಲಿಗೆ ಬಂದ ಮೇಲೆ, ಅದೂ ಎರಡು ತಿಂಗಳ ಮೇಲೆ ಈ ವಿವಾದವೇಕೆ ಮತ್ತೆ ಮತ್ತೆ ಜೀವ ಪಡೆಯುತ್ತಿದೆ ಎಂಬುದು ನನಗೂ ಅರ್ಥವಾಗುತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಒಟ್ಟಿನಲ್ಲಿ, ಐಂದ್ರಿತಾ ಮತ್ತು ಇಮ್ರಾನ್ ಅವರಿಬ್ಬರೂ ಈಗ ಅನಾವಶ್ಯಕವಾಗಿ ಸುದ್ದಿಯಾಗುವುದು ಮಾತ್ರ ತಪ್ಪಿಲ್ಲ. ಸದ್ಯದಲ್ಲೇ 'ಶುಭಂ' ಆಗಬಹುದೇ...? (ಒನ್ ಇಂಡಿಯಾ ಕನ್ನಡ)


Click it and Unblock the Notifications











