Mother's Day 2024: ಅಮ್ಮನ ಮಡಿಲು ಕರುಣೆಯ ಕಡಲು; ತಾಯಿಗೆ ಶಿರಬಾಗಿದ ತಾರೆಯರು
ತಾಯಿಯ ಪ್ರೀತಿ ಕಾಳಜಿ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು, ಅಮ್ಮನ ಮಮತೆಯನ್ನು ಸ್ಮರಿಸಲು ಹಲವು ವರ್ಷಗಳಿಂದ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ಮದರ್ಸ್ ಡೇ. ನಾಡಿಗೆ ರಾಜನಾದರೂ ತಾಯಿಗೆ ಮಗ ಎನ್ನುವ ಮಾತಿನಂತೆ ತಾರೆಯರಿಗೂ ಅಮ್ಮನೇ ಸರ್ವಸ್ವ.
ತಾಯಂದಿದ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 3 ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ನಾರಾಯಣಮ್ಮ ನಿಧನರಾಗಿದ್ದರು. ತಾಯಿ ಜೊತೆಗಿನ ಫೋಟೊ ಹಂಚಿಕೊಂಡು "ಈ ಉಸಿರು ಕೊಟ್ಟ ನಿನಗೆ ನನ್ನ ಉಸಿರಿರೊವರೆಗೂ
ಪ್ರತಿ ದಿನ ಆಚರಣೆಯೇ ಅಮ್ಮ" ಎಂದು ಅವರು ಬರೆದುಕೊಂಡಿದ್ದಾರೆ.

ನಟ ಜಗ್ಗೇಶ್ ಸಾಕಷ್ಟು ಬಾರಿ ತಮ್ಮ ತಾಯಿ ಬಗ್ಗೆ ಮಾತನಾಡಿದ್ದಾರೆ. ಆಕೆಯ ಪ್ರೀತಿ ತ್ಯಾಗದ ಬಗ್ಗೆ ನೆನೆದಿದ್ದಾರೆ. ಈ ವಿಶೇಷ ದಿನದಂದು "ನಾನು ಇಂದು 61 ವರ್ಷವಾದರು ಅಮ್ಮನ ನೆನೆದಾಗ ಮಗುವಾಗುವೆ ಅಂತ ಶಕ್ತಿಯಿದೆ ಅಮ್ಮನ ಎರಡಕ್ಷರಕ್ಕೆ... ಕಾರುಣ್ಯ ಸೆಲೆಯ ಓ ಅಮ್ಮಂದಿರೆ. ನೀವುಗಳು ಇರಬೇಕು ಶಾಶ್ವತ ದೃವನಕ್ಷತ್ರದಂತೆ ಮರೆಯಾಗದೆ ಮಕ್ಕಳ ಮುಂದೆ" ಎಂದು ಟ್ವೀಟ್ ಮಾಡಿದ್ದಾರೆ.
ನಟ ಧನಂಜಯ್ ಬಡವ ರಾಸ್ಕಲ್ ಚಿತ್ರದ ವೀಡಿಯೋ ಹಂಚಿಕೊಂಡು "ಕಸರತ್ತು ಮಾಡಿ ಬೆಳೆಸಿದ ದಪ್ಪ ತೋಳಿನ ಸಾರ್ಥಕತೆ ಗೊತ್ತಾದದ್ದು ನನ್ನಮ್ಮ ನನ್ನ ತೋಳಿಗೊರಗಿ ನಿದ್ರಿಸಿದಾಗ. ಬದುಕ ಸಾರ್ಥಕತೆ ಕೂಡ. ಜಗದ ಎಲ್ಲ ಅಮ್ಮಂದಿರಿಗು "ಕೋಟಿ" ಶುಭಾಶಯಗಳು" ಪೋಸ್ಟ್ ಮಾಡಿದ್ದಾರೆ.
"ಮೊದಲು ಹೇಳಿದ ಪದ.. ಭಯವಾದಾಗ.. ಬಿದ್ದಾಗ.. ಹೋಗುವಾಗ.. ಮನೆಗೆ ಬಂದಾಗ.. ಪೇರೆಂಟ್ಸ್ ಮೀಟಿಂಗ್ ಕರೆದಾಗ.. extra ಹಣ ಬೇಕಾದಾಗ.. ಬೈಕ್ ಕೇಳುವಾಗ.. ಹೀಗೆ ನೂರಾರು ಸಲ ನಮಗೆ ಗೊತ್ತಿಲ್ಲದಂತೆ ಬರುವ ಸ್ವರವೇ ಅಮ್ಮ.. ಸೃಷ್ಟಿಸಿ ಜೀವ ಆಗಿ ಜಗಕೆ ದೈವ ಸಾಮಾನ್ಯಳಂತೆ ಬದುಕುವ ಎಲ್ಲಾ ತಾಯಂದಿರಿಗೂ ಈ ದೇವರ ದಿನದ ಶುಭಾಶಯಗಳು" ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.
"ನನ್ನ ಬಾಳಿನ ಮಿನುಗು ತಾರಗೆ ಎಷ್ಟು ಕೈಮುಗಿದರು ಸಾಲದು! ಅಮ್ಮಂದಿರ ದಿನದ ಪ್ರೀತಿಯ ಶುಭಾಶಯಗಳು ಅಮ್ಮ" ಎಂದು ನಿರ್ದೇಶಕ ತರುಣ್ ಸುಧೀರ್ ಬರೆದುಕೊಂಡಿದ್ದಾರೆ. 'ದಿ ವಿಲನ್' ಚಿತ್ರದ ಮದರ್ ಸೆಂಟಿಮೆಂಟ್ ದೃಶ್ಯ ಹಂಚಿಕೊಂಡು ನಿರ್ದೇಶಕ ಪ್ರೇಮ್ "ಬಾಳಿಗೆ ಒಂದೇ ಮನೆ, ಬಾಳೆಗೆ ಒಂದೇ ಗೊನೆ, ಭೂಮಿಗೆ ದೈವ ಒಂದೇನೆ ತಾಯಿ.. ಎಲ್ಲಾ ನನ್ನ ತಾಯಂದಿರಿಗೂ ಹ್ಯಾಪಿ ಮದರ್ಸ್ ಡೇ" ಎಂದು ಪೋಸ್ಟ್ ಮಾಡಿದ್ದಾರೆ.

"ಅಮ್ಮ.. ಒಂದು ಪದವು ಹೌದು, ಒಂದು ಶಕ್ತಿಯು ಹೌದು, ಇಡೀ ಪ್ರಪಂಚವು ಹೌದು. ವಿಶ್ವ ತಾಯಂದಿರ ದಿನದ ಶುಭಾಶಯಗಳು" ಎಂದು ನಟ ಶಿವರಾಜ್‌ಕುಮಾರ್ ಬರೆದುಕೊಂಡಿದ್ದಾರೆ. ಇನ್ನುಳಿದಂತೆ ಸುಮಲತಾ ಅಂಬರೀಶ್, ಅಜನೀಶ್ ಲೋಕನಾಥ್, ಸೋನು ಗೌಡ ಸೇರಿದಂತೆ ಸಾಕಷ್ಟು ಜನ ನಟ-ನಟಿಯರು ತಮ್ಮ ತಾಯಿ ಜೊತೆಗಿನ ಫೋಟೊ ಹಂಚಿಕೊಂಡು ಮದರ್ಸ್ ಡೇ ವಿಶ್ ಮಾಡುತ್ತಿದ್ದಾರೆ.
ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ತಾಯಿ-ಮಗ ಅಥವಾ ತಾಯಿ- ಮಗಳ ಬಾಂಧವ್ಯದ ಕಥೆಗಳಿವೆ. ಸನ್ನಿವೇಶಗಳಿವೆ. ಇನ್ನು ಹಾಡುಗಳಿಗಂತೂ ಲೆಕ್ಕವೇ ಇಲ್ಲ. ತಾರೆಯರು ಈ ವಿಶೇಷ ದಿನ ತಾಯಿಗೆ ವಿಶೇಷ ಉಡುಗೊರೆಗಳನ್ನು ಕೊಡುತ್ತಿದ್ದಾರೆ.


Click it and Unblock the Notifications











