ದುನಿಯಾ ವಿಜಿ ಪತ್ನಿ ನಾಗರತ್ನಗೆ ನಿರೀಕ್ಷಣಾ ಜಾಮೀನು
ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿ ಅವರ ಮೊದಲ ಪತ್ನಿ ನಾಗರತ್ನಗೆ ಸೆಷನ್ಸ್ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಸೆಪ್ಟೆಂಬರ್ 23 ರಂದು ಬೆಳಗ್ಗೆ 9 ಗಂಟೆಗೆ ಕೀರ್ತಿ ಗೌಡ ಮನೆಗೆ ಹೋಗಿದ್ದ ನಾಗರತ್ನ, ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಈ ದೃಶ್ಯಾವಳಿಯ ಸಮೇತ ಗಿರಿನಗರ ಪೊಲೀಸ್ ಠಾಣೆಯಲ್ಲಿ ನಾಗರತ್ನ ವಿರುದ್ಧ ಕೀರ್ತಿಗೌಡ ದೂರು ದಾಖಲಿಸಿದ್ದರು.
ಕೀರ್ತಿ ಗೌಡ ದೂರಿನ ಅನ್ವಯ ಗಿರಿನಗರ ಪೊಲೀಸರು ನಾಗರತ್ನ ವಿರುದ್ಧ ಎಫ್.ಐ.ಆರ್ ದಾಖಲು ಮಾಡಿದ್ದರು. ನಾಗರತ್ನ ಅವರನ್ನ ಬಂಧಿಸಲು ಜಾಮೀನು ರಹಿತ ವಾರೆಂಟ್ ಕೂಡ ಜಾರಿಯಾಗಿತ್ತು. ಆದ್ರೆ, ತಲೆಮರಿಸಿಕೊಂಡಿದ್ದ ನಾಗರತ್ನ ಇದುವರೆಗೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

ಅಂತಿಮವಾಗಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ನಾಗರತ್ನ ಯಶಸ್ವಿಯಾಗಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ. ಮುಂದಿನ ವಿಚಾರಣೆ ನವೆಂಬರ್ 12ಕ್ಕೆ ಮುಂದೂಡಿದ್ದು, ಅಷ್ಟರೊಳಗೆ ಮತ್ತ್ಯಾವ ಬೆಳವಣಿಗೆಗಳು ನಡೆಯುತ್ತೆ ಎಂಬುದನ್ನ ಕಾದುನೋಡಬೇಕಿದೆ.
ಮತ್ತೊಂದೆಡೆ ಕ್ರೌರ್ಯದ ಕಾರಣ ನೀಡಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಮತ್ತೊಂದು ಬಾರಿಗೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.


Click it and Unblock the Notifications











