ಸೆನ್ಸಾರ್ ಮುಗಿಸಿದ 'ಭೀಮ' ಹಾಗೂ 'ಪೆಪೆ'; ಎರಡೂ ಚಿತ್ರಗಳ ರನ್ ಟೈಮ್ ರಿವೀಲ್
ಈ ವರ್ಷ ಕನ್ನಡದ ದೊಡ್ಡ ಸಿನಿಮಾಗಳ ಬಿಡುಗಡೆ ಸನಿಹವಾಗುತ್ತಿದೆ. ದುನಿಯಾ ವಿಜಯ್ ನಟನೆಯ 'ಭೀಮ' ಹಾಗೂ ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಸಿನಿಮಾಗಳು ಸೆನ್ಸಾರ್ ಮುಗಿಸಿವೆ.
ಆಗಸ್ಟ್ 9ಕ್ಕೆ 'ಭೀಮ'ನಾಗಿ ವಿಜಯ್ ತೆರೆಮೇಲೆ ಅಬ್ಬರಿಸುವುದು ಪಕ್ಕಾ ಆಗಿದೆ. ಆದರೆ 'ಪೆಪೆ' ರಿಲೀಸ್ ಡೇಟ್ ಇನ್ನಷ್ಟೆ ಘೋಷಣೆ ಆಗಬೇಕಿದೆ. ಎರಡೂ ಸಿನಿಮಾಗಳು ಕುತೂಹಲ ಮೂಡಿಸಿರುವುದು ಸುಳ್ಳಲ್ಲ. 'ಪೆಪೆ' ಸಣ್ಣ ಟೀಸರ್‌ಗಳಿಂದ ಸದ್ದು ಮಾಡಿದರೆ 'ಭೀಮ' ಚಿತ್ರದ ಸಾಂಗ್ಸ್ ಹಿಟ್ ಆಗಿದೆ. ಇದೇ ಮೊದಲ ಬಾರಿಗೆ ವಿನಯ್ ಔಟ್ ಅಂಡ್ ಔಟ್ ಮಾಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ. ಬ್ಯಾಕ್‌ಬಾಯ್ಸ್, ಡೋಂಟ್‌ವರಿ ಬೇಬಿ ಚಿನ್ನಮ್ಮ, ಬೂಮ್ ಬೂಮ್ ಬೆಂಗಳೂರು, ಐ ಲವ್ ಯು ಕಣೇ ಹೀಗೆ ಪಕ್ಕಾ ಲೋಕಲ್ ಸ್ಟೈಲ್ ಸಾಂಗ್ಸ್ ಕೇಳುಗರ ಗಮನ ಸೆಳೆದಿದೆ. 'ಸಲಗ' ಬಳಿಕ ವಿಜಯ್ ನಟಿಸಿದ ಯಾವುದೇ ಸಿನಿಮಾ ಬಂದಿರಲಿಲ್ಲ. ನಡುವೆ ತೆಲಗು ಚಿತ್ರದಲ್ಲಿ ನಟಿಸಿ ಬಂದಿದ್ದರು. ಇದೀಗ 'ಭೀಮ'ನಾಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
'ಭೀಮ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಹೇಳಿ ಕೇಳಿ ಮಾಸ್ ಎಂಟರ್‌ಟೈನರ್ ಸಿನಿಮಾ. ವೈಲೆನ್ಸ್ ಜಾಸ್ತಿ ಇರುವುದರಿಂದ 'ಎ' ಸಿಕ್ಕಿದೆ ಎನ್ನಲಾಗ್ತಿದೆ. ಅಂದಹಾಗೆ ಚಿತ್ರದ ರನ್‌ಟೈಮ್ 2 ಗಂಟೆ 28 ನಿಮಿಷ ಎನ್ನುವುದು ರಿವೀಲ್ ಆಗಿದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಹೊಸ ಪ್ರತಿಭೆ ಅಶ್ವಿನಿ 'ಭೀಮ'ನಿಗೆ ನಾಯಕಿ ಆಗಿದ್ದಾರೆ. ಕಲ್ಯಾಣಿ ರಾಜು, ಮಂಜು, ಚಂದ್ರು ಚಿತ್ರದ ತಾರಾಗಣದಲ್ಲಿದ್ದಾರೆ. ಶಿವ ಸೇನಾ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಅಂದಾಜು 400 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕಥೆ ಇದೆ. ಯುವ ಜನತೆ ಡ್ರಗ್ಸ್ ಚಟಕ್ಕೆ ಬಿದ್ದು ಹೇಗೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದು ಬದಲಾಗಬೇಕು ಎನ್ನುವ ಸಂದೇಶ ಇರಲಿದೆ.

ಇನ್ನು ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಚಿತ್ರಕ್ಕೆ ಶ್ರೀಲೇಶ್ ಎಸ್. ನಾಯರ್ ಆಕ್ಷನ್ ಕಟ್ ಹೇಳಿದ್ದಾರೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೂ 'ಎ' ಸರ್ಟಿಫಿಕೇಟ್ ಕೊಟ್ಟಿದೆ. ಚಿತ್ರದ ಟೀಸರ್‌ಗಳನ್ನು ನೋಡಿದರೆ ಯಾಕೆ ಎನ್ನುವುದು ಅರ್ಥವಾಗುತ್ತದೆ. ಇನ್ನು 2 ಗಂಟೆ 6 ನಿಮಿಷದ ಚಿಕ್ಕ ಸಿನಿಮಾ ಇದಾಗಿದ್ದು ಕಾಜಲ್ ಕುಂದರ್ ನಾಯಕಿಯಾಗಿ ಮಿಂಚಿದ್ದಾರೆ. ಟೀಸರ್, ಪೋಸ್ಟರ್‌ಗಳಿಂದ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಸದ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವುದು ಸಮಾಧಾನಕರ ಸಂಗತಿ.
ಮಲೆನಾಡ ಭಾಗದ ಹಳ್ಳಿಯೊಂದರಲ್ಲಿ ನಡೆಯುವ ಕಥೆ 'ಪೆಪೆ' ಚಿತ್ರದಲ್ಲಿದೆ. ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ. ರವಿವರ್ಮ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.
ಮೈಸೂರು, ಬೆಂಗಳೂರು, ಕೊಡಗು, ಸಕಲೇಶಪುರದಲ್ಲಿ 'ಪೆಪೆ' ಸಿನಿಮಾ ಚಿತ್ರೀಕರಣ ನಡೆದಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ವಿನಯ್ ಲವರ್ ಬಾಯ್ ಆಗಿ ನಟಿಸಿರುವುದೇ ಹೆಚ್ಚು. ಇದೇ ಮೊದಲ ಬಾರಿಗೆ ಇಷ್ಟೊಂದು ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಈ ವರ್ಷ ವಿನಯ್ ನಟಿಸಿದ 'ಒಂದು ಸರಳ ಪ್ರೇಮಕಥೆ' ಸಿನಿಮಾ ತೆರೆಕಂಡು ಹಿಟ್ ಲಿಸ್ಟ್ ಸೇರಿತ್ತು. ಇದೀಗ 'ಪೆಪೆ' ಸಿನಿಮಾ ತೆರೆಗೆ ಬರಬೇಕಿದೆ.


Click it and Unblock the Notifications











