Puneeth Rajkumar: ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಗಲಾಟೆ, ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ವಿರುದ್ಧ FIR
ರಾಯಚೂರಿನ ಸಿಂಧನೂರು ನಗರದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪುತ್ಥಳಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಮುಖಂಡರು, ಪುನೀತ್ ಅಭಿಮಾನಿಗಳು ಹಾಗೂ ಪೊಲೀಸರ ನಡುವೆ ಕಿತ್ತಾಟ ನಡೆದಿತ್ತು. ಇದೇ ವೇಳೆ ಸಿಂಧನೂರಿನ ಪಿಎಸ್‌ಐ ಮಣಿಕಂಠ ಮೇಲೆ ಹಲ್ಲೆಯಾಗಿತ್ತು. ಈ ಸಂಬಂಧ ಅಪ್ಪು ಅಭಿಮಾನಿಗಳು ಸೇರಿದಂತೆ 24 ಮಂದಿ ವಿರುದ್ಧ FIR ದಾಖಲಾಗಿದೆ.
ಸಿಂಧನೂರಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ರಂಗಮಂದಿರದ ಮುಂದೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಸ್ಥಾಪನೆ ಮಾಡಲು ಫ್ಯಾನ್ಸ್ ಹಾಗೂ ಜೆಡಿಎಸ್ ಮುಖಂಡರು ನಿರ್ಧರಿಸಿದ್ದರು. ಹೀಗಾಗಿ ಟ್ರಾಕ್ಟರ್‌ನಲ್ಲಿ ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ ಗೌಡ ನೇತೃತ್ವದಲ್ಲಿ ಅಪ್ಪು ಫ್ಯಾನ್ಸ್ ಮೆರವಣಿಗೆಯ ಮೂಲಕ ಪುತ್ಥಳಿ ತರಲು ನಿರ್ಧರಿಸಿದ್ದರು.

ಡಾ.ಪುನೀತ್ ರಾಜಕುಮಾರ್ ಪ್ರತಿಮೆಯನ್ನು ಅನಾವರಣ ಮಾಡಲು ನಗರದ ಗಣೇಶ ಗುಡಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ತೆಗೆದುಕೊಂಡು ಹೊರಟಿದ್ದರು. ಆಗ ಪೋಲಿಸರು ನಿರಾಕರಿಸಿದರಿಂದ ಪೋಲಿಸರು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ನಡುವೆ ಗಲಾಟೆ ನಡೆದಿತ್ತು. ನೀತಿ ಸಂಹಿತೆ ಇದ್ದಿದ್ದರಿಂದ ಪುತ್ಥಳಿ ಸ್ಥಾಪನೆ ಅವಕಾಶ ನೀಡಿರಲಿಲ್ಲ. ಈ ವೇಳೆ ನಗರಸಭೆ ಪೌರಾಯುಕ್ತರು, ತಹಸೀಲ್ದಾರ್ ಮನವೋಲಿಸಲು ಮುಂದಾದರೂ, ಅಭಿಷೇಕ ಗೌಡ, ಅಪ್ಪು ಅಭಿಮಾನಿಗಳು ಒಪ್ಪಲಿಲ್ಲ.
ಈ ವೇಳೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಮಣಿಕಂಠ, ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ ಗೌಡ ಹಾಗೂ ಅಪ್ಪು ಫ್ಯಾನ್ಸ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗಾಗಿ ಈ ಘಟನೆಗೆ ಕಾರಣವಾದ 24 ಮಂದಿಗೆ ಮೇಲೆ ಎಫ್‌ಐಆರ್ ದಾಖಲಾಗಿದೆ. ಇವರಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕೂಡ ಸೇರಿದ್ದಾರೆ.

ನಿನ್ನೆ (ಮಾರ್ಚ್ 14) ಸಂಜೆ ನಡೆದ ಘಟನೆ ಬಗ್ಗೆ ಶಾಸಕ ವೆಂಟರಾವ್ ನಾಡಗೌಡ, ಬಸವರಾಜ ನಾಡಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೆಚ್ಚುವರಿ ಎಸ್.ಪಿ ಶಿವಕುಮಾರ್, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ನಗರ ಠಾಣೆಯಲ್ಲಿ ಸಭೆ ನಡೆಸಿ ನಡೆದ ಗಲಾಟೆ ಬಗ್ಗೆ ಚರ್ಚಿಸಿದರು. ಅಕ್ರಮ ಗುಂಪು ಕಟ್ಟಿಕೊಂಡು ಬಂದು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಅಭಿಷೇಕ್ ನಾಡಗೌಡ ಸೇರಿದಂತೆ ಸುಮಾರು 24 ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಮಣಿಕಂಠ ವಿರುದ್ಧ ಇಲಾಖೆ ವತಿಯಿಂದ ವಿಚಾರಣೆ ನಡೆಸಲಾಗುವುದು ಎಂದು ಎಸ್‌ಪಿ ನಿಖಿಲ್ ಬಿ. ಮಾಹಿತಿ ನೀಡಿದ್ದಾರೆ.


Click it and Unblock the Notifications











