'''ಕಾಂತಾರ-1' vs 'ಇಡ್ಲಿ ಕಡೈ' vs 'ಓಜಿ'; ಬಾಕ್ಸಾಫೀಸ್‌ನಲ್ಲಿ ದಸರಾ ದಂಗಲ್ ಹೇಗಿರುತ್ತೆ?
ದಸರಾ ಹಬ್ಬದ ಸಡಗರ ಶುರುವಾಗುತ್ತಿದೆ. ಈ ಬಾರಿ ದಸರಾ ಸಂಭ್ರಮ ಚಿತ್ರರಂಗದಲ್ಲೂ ಜೋರಾಗಿದೆ. ಅದಕ್ಕೆ ಕಾರಣ 3 ಬಹುನಿರೀಕ್ಷಿತ ಚಿತ್ರಗಳು ನಾಲ್ಕು ದಿನಗಳ ಅಂತರದಲ್ಲಿ ತೆರೆಗೆ ಬರ್ತಿದೆ. ದಸರಾ ರಜೆಯನ್ನೇ ಟಾರ್ಗೆಟ್ ಮಾಡಿ ಸಿನಿಮಾಗಳನ್ನು ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಯಾರು ಗೆಲ್ತಾರೋ ಸೋಲ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.
ಅಕ್ಟೋಬರ್ 2ರಂದು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸುತ್ತಿದೆ. ಅದಕ್ಕಿಂತ ಒಂದು ದಿನ ಮುನ್ನ ಧನುಷ್ ನಿರ್ದೇಶಿಸಿ ನಟಿಸಿರುವ 'ಇಡ್ಲಿ ಕಡೈ' ಸಿನಿಮಾ ಬಿಡುಗಡೆ ಆಗ್ತಿದೆ. ಮುಂದಿನ ವಾರವೇ ಪವಣ್ ಕಲ್ಯಾಣ್ ನಟನೆಯ 'OG' ಸಿನಿಮಾ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಹೌದು ಈ ಬಾರಿ ಬಾಕ್ಸಾಫೀಸ್‌ನಲ್ಲಿ ದಸರಾ ದಂಗಲ್ ಸಿಕ್ಕಾಪಟ್ಟೆ ಜೋರಾಗಿ ಇರಲಿದೆ.

ದೊಡ್ಡ ಸಿನಿಮಾಗಳನ್ನು ಹಬ್ಬದ ಸಂಭ್ರಮದಲ್ಲಿ ತೆರೆಗೆ ತರುವುದು ಹೊಸದೇನು ಅಲ್ಲ. ಬಾಕ್ಸಾಫೀಸ್ ಕ್ಲ್ಯಾಶ್ ಭಯ ಇಲ್ಲದೇ ಹಬ್ಬದ ರಜೆಗಳನ್ನು ನೆನಪಿನಲ್ಲಿಟ್ಟುಕೊಂಡು ಒಟ್ಟೊಟ್ಟಿಗೆ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ. ಗಾಂಧಿ ಜಯಂತಿ, ದಸರಾ ಹಬ್ಬದ ರಜೆ 3 ಚಿತ್ರಗಳಿಗೆ ವರವಾಗುವ ಸಾಧ್ಯತೆಯಿದೆ. ಪವನ್ ಕಲ್ಯಾಣ್ ನಟನೆಯ ಗ್ಯಾಂಗ್‌ಸ್ಟರ್ ಸಿನಿಮಾ 'OG' ಕೂಡ ಬಹಳ ಕುತೂಹಲ ಮೂಡಿಸಿದೆ.
ಈಗಾಗಲೇ 3 ಸಿನಿಮಾಗಳ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 3 ದಿನದ ಅಂತರದಲ್ಲಿ ಒಂದೊಂದೇ ಸಿನಿಮಾ ಝಲಕ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇಂದು(ಸೆಪ್ಟೆಂಬರ್ 20) ಸಂಜೆ ಧನುಷ್ ನಟನೆಯ 'ಇಡ್ಲಿ ಕಡೈ' ಸಿನಿಮಾ ಟ್ರೈಲರ್ ಹೊರಬರಲಿದೆ. ಕೋಯಂಬತ್ತೂರಿನಲ್ಲಿ ಅದ್ಧೂರಿಯಾಗಿ ಈವೆಂಟ್ ಮಾಡಲಾಗುತ್ತಿದೆ. ಸ್ವತಃ ಧನುಷ್ ಚಿತ್ರಕ್ಕೆ ಬಂಡವಾಳ ಸಹ ಹೂಡಿದ್ದಾರೆ. ನಾಯಕಿಯಾಗಿ ನಿತ್ಯಾ ಮೆನನ್ ಸಾಥ್ ಕೊಟ್ಟಿದ್ದಾರೆ.

ಅರುಣ್ ವಿಜಯ್, ಸತ್ಯರಾಜ್, ಪಾರ್ಥಿಬನ್, ಶಾಲಿನಿ ಪಾಂಡೆ, ಸಮುದ್ರ ಖನಿ ಈ ಚಿತ್ರದಲ್ಲಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಅಕ್ಟೋಬರ್ 1ರಂದು ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. 'ರಾಯನ್' ಬಳಿಕ ಧನುಷ್ ನಿರ್ದೇಶನದ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
ನಾಳೆ(ಸೆಪ್ಟೆಂಬರ್ 21) ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಈ ಹಿಂದೆ ಪ್ರಭಾಸ್ ನಟಿಸಿದ್ದ 'ಸಾಹೋ' ಚಿತ್ರವನ್ನು ಕಟ್ಟಿಕೊಟ್ಟಿದ್ದ ಸುಜಿತ್ ಈ ಗ್ಯಾಂಗ್‌ಸ್ಟರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪವನ್ ಕಲ್ಯಾಣ್ ರಾಜಕೀಯರಂಗಕ್ಕೆ ಬಂದು ಆಂಧ್ರ ಡಿಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಇದೀಗ ಬಿಡುಗಡೆ ಆಗುತ್ತಿದೆ. ಎರಡು ತಿಂಗಳ ತೆರೆಗೆ ಬಂದಿದ್ದ 'ಹರಿಹರ ವೀರಮಲ್ಲು' ಸಿನಿಮಾ ಸೋತಿತ್ತು. ಹಾಗಾಗಿ 'OG' ಚಿತ್ರಕ್ಕೆ ಹೆಚ್ಚು ಪ್ರಚಾರ ಮಾಡ್ತಿಲ್ಲ. ಮುಂದಿನ ಗುರುವಾರ ಸಿನಿಮಾ ತೆರೆಗಪ್ಪಳಿಸುತ್ತಿದೆ.
ವಿದೇಶಗಳಲ್ಲಿ 'ಕಾಂತಾರ-1' ಚಿತ್ರಕ್ಕಿಂತ 'OG' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿದೆ ಎನ್ನಲಾಗ್ತಿದೆ. 'ಕಾಂತಾರ-1' ಟ್ರೈಲರ್ ಬಂದ ಬಳಿಕ ಎಲ್ಲರ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ. ಇನ್ನು 'OG' ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಪ್ರಿಯಾಂಕ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಗಣ ಚಿತ್ರದಲ್ಲಿದೆ. 'RRR' ಚಿತ್ರದ ನಿರ್ಮಿಸಿದ್ದ ಡಿವಿವಿ ದಾನಯ್ಯ ಈ ಚಿತ್ರಕ್ಕೂ ಹಣ ಹೂಡಿದ್ದಾರೆ.
ನವರಾತ್ರಿ ಶುರುವಾಗುವುದನ್ನೇ ಹೊಂಬಾಳೆ ಫಿಲ್ಮ್ಸ್ ಕಾಯುತ್ತಿತ್ತು. ಸೆಪ್ಟೆಂಬರ್ 22ರಂದು ಮಧ್ಯಾಹ್ನ 12.45ಕ್ಕೆ 'ಕಾಂತಾರ- 1' ಟ್ರೈಲರ್ ಬಿಡುಗಡೆ ಆಗಲಿದೆ. ಹೃತಿಕ್ ರೋಷನ್, ಪ್ರಭಾಸ್, ಶಿವ ಕಾರ್ತಿಕೇಯನ್ ಬೇರೆ ಬೇರೆ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಮಾಡಿ ತಂಡದ ಜೊತೆ ಕೈ ಜೋಡಿಸುತ್ತಿದ್ದಾರೆ.


Click it and Unblock the Notifications











