ಪ್ರಚಂಡ ಕುಳ್ಳ ದ್ವಾರಕೀಶ್ ಅಗಲಿಕೆಗೆ ರಜನಿಕಾಂತ್, ದರ್ಶನ್, ಸುದೀಪ್, ಶಿವಣ್ಣ ಸಂತಾಪ
ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅಗಲಿಕೆ ಚಿತ್ರರಂಗಕ್ಕೆ ದಿಗ್ಭ್ರಮೆ ಉಂಟುಮಾಡಿದೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ದ್ವಾರಕೀಶ್ ಬಣ್ಣದಲೋಕಕ್ಕೆ ಕೊಡುಗೆ ನೀಡಿದ್ದಾರೆ. ರಜನಿಕಾಂತ್, ದರ್ಶನ್, ಸುದೀಪ್ ಸೇರಿದಂತೆ ಹಲವರು ಮೇರು ಪ್ರತಿಭೆಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಏಪ್ರಿಲ್ 16ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ದ್ವಾರಕೀಶ್ ಇಹಲೋಕ ತ್ಯಜಿಸಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಗ ಯೋಗೀಶ್ ದ್ವಾರಕೀಶ್ ವಾಸವಿದ್ದರು. ಸ್ಮೈಲ್ ಗ್ರೀನ್ಸ್ ವಿಲ್ಲಾ ನಿವಾಸದಲ್ಲೇ ಪಾರ್ಥೀವ ಶರೀರದದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನ್ ಸೇರಿದಂತೆ ಸಾಕಷ್ಟು ಜನ ಸಿನಿಮಾ ತಾರೆಯರು ಈಗಾಗಲೇ ದ್ವಾರಕೀಶ್ ಅವರಿಗೆ ಅಂತಿಮ ನಮನ ಸಲ್ಲಿದ್ದಾರೆ.

ರಜನಿಕಾಂತ್, ಸುಮಲತಾ ಅಂಬರೀಶ್, ದರ್ಶನ್, ಸುದೀಪ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ದ್ವಾರಕೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ನಟ ರಜನಿಕಾಂತ್ ಜೊತೆ ದ್ವಾರಕೀಶ್ 3 ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ರಜನಿಕಾಂತ್ ಟ್ವೀಟ್ ಮಾಡಿ "ನನ್ನ ಆತ್ಮೀಯ ಮಿತ್ರನ ಅಗಲಿಕೆ ನನಗೆ ಅತೀವ ನೋವು ತಂದಿದೆ. ಹಾಸ್ಯನಟನಾಗಿ ಅವರು ವೃತ್ತಿಜೀವನ ಆರಂಭಿಸಿದ್ದರು. ನಂತರ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಳೆದರು. ಅವರೊಟ್ಟಿಗಿನ ನೆನಪುಗಳು ಕಣ್ಮುಂದೆ ಬರುತ್ತಿದೆ. ಅವರ ಆಪ್ತರು ಮತ್ತು ಕುಟುಂಬದವರಿಗೆ ನನ್ನ ಸಂತಾಪಗಳು" ಎಂದು ಬರೆದಿದ್ದಾರೆ.
"ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

"ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.
ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ" ಎಂದು ಸುದೀಪ್ ಬರೆದುಕೊಂಡಿದ್ದಾರೆ.
ನಟಿ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ "ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅವರು ಇಡೀ ನಾಡಿಗೆ ಸಂತೋಷವನ್ನು ನೀಡಿದ ಪ್ರತಿಭಾವಂತ ಕಲಾವಿದರು. ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ-ಹಿತೈಷಿ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ. ಓಂ ಶಾಂತಿ" ಎಂದು ಪೋಸ್ಟ್ ಮಾಡಿದ್ದಾರೆ.
"ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ" ಎಂದು ಶಿವಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಳಿಕ ವೀಡಿಯೋ ಸಂದೇಶದ ಮೂಲಕ ದ್ವಾರಕೀಶ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಧನಂಜಯ್, ಗಣೇಶ್, ನೀನಾಸಂ ಸತೀಶ್, ನಿರ್ದೇಶಕ ಸುನಿ ಸೇರಿದಂತೆ ಹಲವರು ದ್ವಾರಕೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಈಗಾಗಲೇ ಕೆಲ ಕಲಾವಿದರು ಹಿರಿತ ಚೇತನ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ನಾಳೆ ಬೆಳಿಗ್ಗೆ 7.30ರ ನಂತರ ರವೀಂದ್ರ ಕಲಾಕ್ಷೆತ್ರದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಕೂಡ ಹಲವರು ಅಂತಿಮ ದರ್ಶನ ಪಡೆಯಲಿದ್ದಾರೆ. 11:30ಕ್ಕೆ ಚಾಮರಾಜಪೇಟೆಯ ಟಿಆರ್ ಮೀಲ್‌ನಲ್ಲಿ ಅಂತ್ಯಕ್ರಿಯೆಗೆ ನಡೆಯಲಿದೆ.


Click it and Unblock the Notifications











