ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
ಅನೇಕ ಅಸಾಧ್ಯಗಳನ್ನೆಲ್ಲ ಸಾಧಿಸಿ-ಭೇದಿಸಿ ಬದುಕಿನ ಯಾತ್ರೆಯನ್ನ ಮುಗಿಸಿದ ದ್ವಾರಕೀಶ್ ಇಂದು ಪಂಚಭೂತಗಳಲ್ಲಿ ಲೀನರಾದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ದ್ವಾರಕೀಶ್ ಅವರ ಹಿರಿಯ ಪುತ್ರ ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡಿದರು. ಈ ವೇಳೆ ಕುಟುಂಬದವರು ಹಾಗೂ ಆಪ್ತರು ಹಾಜರಿದ್ದರು. ಬ್ರಾಹ್ಮಣ ಪದ್ಧತಿಯಂತೆ, ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ , ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಮಾಡಲಾಯಿತು
ಅಂತಿಮ ಸಂಸ್ಕಾರಕ್ಕೂ ಮೊದಲು ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವವಂದನೆ ನೀಡಿದರು. ಇನ್ನೂ ಇದಕ್ಕೂ ಮುನ್ನ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಗುಳಿಮಂಗಳದಲ್ಲಿನ ಮನೆಯಲ್ಲಿದ್ದ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸುದೀಪ್, ಯಶ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿ ಕನ್ನಡ ಚಿತ್ರರಂಗದ ಅನೇಕ ತಾರೆಯರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು. ಭಾವುಕರಾದರು.

ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, 'ನಾನು ದ್ವಾರಕೀಶ್ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್ನಲ್ಲಿ ಹೋಗಿದ್ವಿ, ಆ ಸಮಯದಲ್ಲಿ ಅನೇಕ ವಿಚಾರಗಳನ್ನ ಚರ್ಚೆ ಮಾಡಿದ್ವಿ ಎಂದು ಸಿಎಂ ಸಿದ್ದರಾಮಯ್ಯ ದ್ವಾರಕೀಶ್ ನೆನೆದು ಭಾವುಕರಾದರು.
ಸಾಮಾಜಿಕ ಜಾಲತಾಣದಲ್ಲಿಯೂ ದ್ವಾರಕೀಶ್ ಅವರ ಜೊತೆ ಇದ್ದ ಒಡನಾಟವನ್ನ ಮೆಲುಕು ಹಾಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಹಾಸ್ಯನಟನಾಗಿ ಮಾತ್ರವಲ್ಲ, ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದ್ದರು. ಡಾ. ರಾಜ್ ಕುಮಾರ್ ಮತ್ತು ದ್ವಾರಕೀಶ್ ಜೋಡಿ ಬಹಳ ಚೆನ್ನಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು ಎಂದು ದ್ವಾರಕೀಶ್ ಅವರ ಕಲಾಸೇವೆಯನ್ನ ಮೆಚ್ಚಿಕೊಂಡು ಮನದ ಮಾತನ್ನ ಹಂಚಿಕೊಂಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಇನ್ನೂ ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೂ ಕನ್ನಡ ಚಿತ್ರ ನಿರ್ಮಾಣ, ನಟನೆಯನ್ನು ಬಿಟ್ಟಿರಲಿಲ್ಲ. ಕಷ್ಟಗಳನ್ನು ಸಹಿಸಿ ಕನ್ನಡ ಚಿತ್ರರಂಗ ಬೆಳೆಯಲು ಕೊಡುಗೆ ನೀಡಿದ್ದಾರೆ. ದ್ವಾರಕೀಶ್ ಮೈಸೂರಿನ ಹುಣಸೂರಿನಲ್ಲಿ ಹುಟ್ಟಿದವರು. ತವರಿನ ಬಗ್ಗೆ ಬಹಳ ಪ್ರೇಮವಿತ್ತು. ಒಮ್ಮೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರಾಜಕೀಯ, ಸಿನಿಮಾ, ಸಾಮಾಜಿಕ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದ್ದೆ.ಕೆಲ ವರ್ಷಗಳ ಹಿಂದೆ ಅವರ ಧರ್ಮಪತ್ನಿಯವರು ಮೃತಪಟ್ಟ ದಿನವೇ ದ್ವಾರಕೀಶ್ ಅವರೂ ಮೃತಪಟ್ಟಿದ್ದಾರೆ. ಇಬ್ಬರ ಆತ್ಮಕ್ಕೂ ಚಿರಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದ್ವಾರಕೀಶ್ ಅವರು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಎರಡು ಕಣ್ಣುಗಳನ್ನು ದಾನಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಕರುನಾಡು ಬಡವಾಗಿದೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯ
ಈ ನಡುವೆ ರವೀಂದ್ರ ಕಲಾಕ್ಷೇತ್ರದಿಂದ ಮೆರವಣಿಗೆ ಮೂಲಕ ಚಾಮರಾಜಪೇಟೆಯ ಚಿತಾಗಾರಕ್ಕೆ ಮೃತ ದೇಹವನ್ನು ತರಲಾಯಿತು. ನಿನ್ನೆ ಬೆಳಗ್ಗೆ ದ್ವಾರಕೀಶ್ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ನಿನ್ನೆಯಿಂದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಚಿತ್ರೋದ್ಯಮದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದರು.


Click it and Unblock the Notifications











