»   » ಕಾಸರವಳ್ಳಿ ಪುನರಾಗಮನ

ಕಾಸರವಳ್ಳಿ ಪುನರಾಗಮನ

Posted By: Super
Subscribe to Filmibeat Kannada

ರಶಸ್ತಿಗಾಗಿಯೇ ಚಿತ್ರ ಮಾಡ್ತಾರೆ ಅನ್ನುವ ಆರೋಪ, ಅವರು ಸಿನಿಮಾ ಮಾಡಿದರೆ ಪ್ರಶಸ್ತಿ ಗ್ಯಾರಂಟಿ ಎನ್ನುವ ಮೆಚ್ಚುಗೆ, ಇವೆರಡನ್ನೂ ಹೆಗಲಲ್ಲಿ ಹೊತ್ತುಕೊಂಡಿರುವ ಗಿರೀಶ್‌ ಕಾಸರವಳ್ಳಿ ಎರಡು ವರ್ಷದ ಗ್ಯಾಪ್‌ ನಂತರ ಮತ್ತೆ ಕಣಕ್ಕಿಳಿದಿದ್ದಾರೆ. ನಾ.ಡಿಸೋಜ ಅವರ ಕತೆಯಾಧಾರಿತ 'ದ್ವೀಪ" ಚಿತ್ರದ ಚಿತ್ರೀಕರಣ ಕಳೆದ ಶುಕ್ರವಾರ ಸಾಗರ ತಾಲೂಕಿನ ಬೆಳ್ಳೆಣ್ಣೆ ಗ್ರಾಮದಲ್ಲಿ ಶುರುವಾಯಿತು. ಈ ಚಿತ್ರದಲ್ಲಿ ಮಳೆ ಕೂಡ ಒಂದು ಮುಖ್ಯ ಪಾತ್ರ ವಹಿಸಲಿದೆ ಎಂದು ಚಿತ್ರದ ನಾಯಕಿ ಮತ್ತು ನಿರ್ಮಾಪಕಿ ಹೇಳಿದ್ದನ್ನು ವರುಣದೇವ ಕೇಳಿಸಿಕೊಂಡನೋ ಎಂಬಂತೆ ಮುಹೂರ್ತದ ಹೊತ್ತಲ್ಲೇ ಭಾರಿ ಮಳೆ ಸುರಿಯಿತು.

ಇಂಥಾ ಲೊಕೇಶನ್‌ ಹುಡುಕುವುದಕ್ಕೆ ಗಿರೀಶ್‌ ಕಾಸರವಳ್ಳಿ ಎರಡು ತಿಂಗಳು ಮಲೆನಾಡಲ್ಲಿ ಅಲೆದಾಡಿದ್ದರು. ಅವರ ಅಲೆದಾಟ ವ್ಯರ್ಥವಾಗಿಲ್ಲ. ಶರಾವತಿಯ ಹಿನ್ನೀರು ಬಂದು ನಿಂತಿರುವ ವಿಶಿಷ್ಟ ಗ್ರಾಮ ಬೆಳ್ಳೆಣ್ಣೆ. ಇದು ಜೋಗದಿಂದ 20 ಕಿ.ಮೀ. ದೂರದಲ್ಲಿದೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲೊಂದಾದ ತಳನಳಿಲೆ ಡ್ಯಾಂನ ಹಿಂದಿರುವ ಗ್ರಾಮವಿದು. ಈ ಗ್ರಾಮದ ಡೆಡ್‌ ಎಂಡ್‌ ಚಿತ್ರೀಕರಣಕ್ಕಾಗಿ ಆರಿಸಿದ ತಾಣ. ಅಲ್ಲಿಂದಾಚೆಗೆ ದಾರಿಯಿಲ್ಲ. ತಲೆಯೆತ್ತಿ ನೋಡಿದರೆ ಪಶ್ಚಿಮ ಘಟ್ಟದ ಸಾಲು. ಮಧ್ಯೆ ಪ್ರಶಾಂತವಾಗಿ ಮಲಗಿದ್ದಾಳೆ ಶರಾವತಿ. ದ್ವೀಪಕ್ಕಾಗಿ ಬೆಟ್ಟದ ಮೇಲೊಂದು ಪುಟ್ಟ ಮನೆ ಕಟ್ಟಿದ್ದಾರೆ ಕಲಾ ನಿರ್ದೇಶಕ ಶಶಿಧರ ಅಡಪ. ಹುಲ್ಲಿನ ಗುಡಿಸಲು, ಮನೆ ಮುಂದೆ ಕೈತೋಟ, ಅದರ ಮುಂದೊಂದು ಮಿನಿ ಜಲಪಾತ.... ಪಕ್ಕಾ ಮಲೆನಾಡ ಮನೆ.

ಪ್ರಗತಿಪರ ಯೋಜನೆಗಳ ಇನ್ನೊಂದು ಮುಖವನ್ನು ಪರಿಚಯಿಸುವ ಕತೆ ದ್ವೀಪ. ಅಣೆಕಟ್ಟಿನಿಂದ ಮುಳುಗಡೆಯಾಗುವ ಹಳ್ಳಿಗಳು, ಜನಜೀವನ, ಸಂಸ್ಕೃತಿ ಇವೆಲ್ಲದರ ಚಿತ್ರಣ ಅದರಲ್ಲಿದೆ. ಅಭಿವೃದ್ಧಿ ಮುಖ್ಯಾನಾ ಅಥವಾ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಮುಖ್ಯಾನಾ ಎಂಬ ಪ್ರಶ್ನೆಯನ್ನು ಚಿತ್ರ ಎತ್ತುತ್ತದೆ. ಚಿತ್ರದಲ್ಲಿರುವುದು ನಾಲ್ಕೇ ಪಾತ್ರಗಳು. ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳಲಾಗದ ನಾಯಕಿ ತನ್ನ ಮನೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾಳೆ. ಕೊನೆಗೆ ಆ ಮನೆಯೂ ಮುಳುಗಿಹೋಗುತ್ತದೆ.

ಸೌಂದರ್ಯ ಅವರಿಗೆ ಕಾಸರವಳ್ಳಿ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುವುದು ಜೀವನದ ಮಹತ್ವಾಕಾಂಕ್ಷೆ. ನಟಿಯಾಗಿ ಕನ್ನಡದಲ್ಲಿ ಇನ್ನೂ ಯಶಸ್ಸಿಗಾಗಿ ತಡಕಾಟ ನಡೆಸಿರುವ ಸೌಂದರ್ಯ ಈಗ ನಿರ್ಮಾಪಕಿಯಾಗಿ ಬಂದಿದ್ದಾರೆ. ಕಲಾತ್ಮಕ ಚಿತ್ರದಲ್ಲಿ ನಟಿಸಬೇಕೆಂಬ ಅವರ ಮಹದಾಸೆಯೂ ಈ ಮೂಲಕ ಸಾಕಾರಗೊಳ್ಳಲಿದೆ. ಪ್ರಶಸ್ತಿ ಸಿಗಬಹುದು ಅನ್ನುವ ನಿರೀಕ್ಷೆಯೂ ಅವರಿಗಿದೆ.

ದ್ವೀಪದಲ್ಲಿ ಹಾಡುಗಳಿಲ್ಲ, ಮಾಜಿ 'ಭಾವನಾ" ದ ಮಾಜಿ ಸಂಪಾದಕ ಜಯಂತ್‌ ಕಾಯ್ಕಿಣಿ ಸಂಭಾಷಣೆ ಬರೆಯುತ್ತಿದ್ದಾರೆ. ಜಯಮಾಲಾ ಪತಿ ರಾಮಚಂದ್ರ ಛಾಯಾಗ್ರಹಣ ನೀಡುತ್ತಿದ್ದಾರೆ. ಸೌಂದರ್ಯ ಅವರೊಂದಿಗೆ ಅವಿನಾಶ್‌, ವಾಸುದೇವ ರಾವ್‌, ಹರೀಶ್‌ರಾಜ್‌ ತಾರಾಗಣದಲ್ಲಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದೆ. ಇಂಗ್ಲಿಷ್‌ ಆವೃತ್ತಿಯಲ್ಲಿ ವಾಸುದೇವರಾವ್‌ ಜಾಗಕ್ಕೆ ಸೀತಾರಾಂ ಬರುತ್ತಾರೆ. ಸುರಿವ ಮಳೆಯಲ್ಲಿ ನೆನೆಯುತ್ತಾ ದ್ವೀಪ ಶೂಟಿಂಗ್‌ ಮುಂದುವರೆದಿದೆ.

English summary
Girish Kasaravalli is back into action. He is directing Dweepa for Soundarya

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X