ಬೆಂಗಳೂರಿನಲ್ಲಿ ಕನ್ನಡ ಸಿನಿಮಾ ಹಿಂದಿಕ್ಕಿದ ಒರಿಯಾ ಭಾಷೆ ಸಿನಿಮಾ; ಎಂಥ ಕಾಲ ಬಂತಪ್ಪ!
ಕನ್ನಡ ಚಿತ್ರರಂಗ ನಿಜಕ್ಕೂ ಸಂಕಷ್ಟದಲ್ಲಿದೆ. ಆದರೆ ನಮ್ಮ ಕಲಾವಿದರು ಮಾತ್ರ ಪ್ಯಾನ್ ಇಂಡಿಯಾ ಗುಂಗಿನಿಂದ ಹೊರಬಂದಿಲ್ಲ. ಕರ್ನಾಟಕದಲ್ಲಿ ಈಗ ದಕ್ಷಿಣದ ಸಿನಿಮಾಗಳು ಮಾತ್ರವಲ್ಲ, ಉತ್ತರ ಭಾರತದ ಭಾಷೆಯ ಸಿನಿಮಾಗಳು ಬಂದು ಸದ್ದು ಮಾಡುವಂತಾಗಿದೆ. ಒರಿಯಾ ಭಾಷೆಯ ಚಿತ್ರದ ಮುಂದೆ ಕನ್ನಡ ಸಿನಿಮಾ ಮಂಕಾಗಿದೆ.
ಬೆಂಗಳೂರಿನಲ್ಲಿ ಪಂಜಾಬಿ, ನೇಪಾಳಿ, ಒರಿಯಾ, ಗುಜರಾತಿ ಭಾಷೆಯ ಸಿನಿಮಾಗಳು ಪ್ರದರ್ಶನವಾಗುತ್ತಿದೆ. ಕನ್ನಡ ಸಿನಿಮಾಗಳಿಗೆ ಸರಿಯಾಗಿ ಶೋಗಳು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಫಿಲ್ಮಿಬೀಟ್ ಕನ್ನಡ ವರದಿ ಮಾಡಿತ್ತು. ಒಂದೋ ಎರಡೋ ಶೋಗಳು ಮಾತ್ರ ಆ ಭಾಷೆಗಳಿಗೆ ಕೊಡುತ್ತಿದ್ದಾರೆ, ಬೆಂಗಳೂರಿನಲ್ಲಿ ಉತ್ತರ ಭಾರತದ ಜನ ಬಂದು ಹೆಚ್ಚಾಗಿ ನೆಲೆಸುತ್ತಿದ್ದಾರೆ. ಅಂಥಹವರು ಈ ಸಿನಿಮಾಗಳನ್ನು ನೋಡುತ್ತಾರೆ ಎನ್ನುವ ವಾದ ಕೇಳಿಬಂದಿತ್ತು.

10 ದಿನಗಳ ಹಿಂದೆ ದಿಗಂತ್ ನಟನೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದರೂ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ. ಇತ್ತೀಚೆಗೆ ಈ ಬಗ್ಗೆ ಚಿತ್ರದ ನಿರ್ಮಾಪಕರು ವೀಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಮೊದಲ ವಾರ 300 ಶೋಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಎರಡನೇ ವಾರಕ್ಕೆ ಕೇವಲ 15 ಶೋಗಳು ಮಾತ್ರ ಸಿಗುತ್ತಿದೆ ಎಂದಿದ್ದರು.
'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಬಿಡುಗಡೆಯಾದ ದಿನವೇ ಒರಿಯಾ ಭಾಷೆಯ 'ಬೌ ಬುಟ್ಟು ಭೂತಾ' ಎಂಬ ಸಿನಿಮಾ ತೆರೆಗೆ ಬಂದಿತ್ತು. ಎರಡನೇ ವಾರಕ್ಕೆ ಬೆಂಗಳೂರಿನಲ್ಲಿ ದಿಗಂತ್ ಚಿತ್ರಕ್ಕೆ 13 ಶೋಗಳು ಸಿಕ್ಕಿದ್ದರೆ 'ಬೌ ಬುಟ್ಟು ಭೂತಾ' ಚಿತ್ರಕ್ಕೆ 23 ಶೋಗಳು ಸಿಕ್ಕಿರುವುದು ವಿಪರ್ಯಾಸವೇ ಸರಿ. ಅಂದರೆ ಬೆಂಗಳೂರಿನಲ್ಲಿ ಕನ್ನಡ ಪ್ರೇಕ್ಷಕರಿಗಿಂತ ಒರಿಯಾ ಪ್ರೇಕ್ಷಕರೇ ಹೆಚ್ಚಾಗಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಹೀಗೆ ಮುಂದುವರೆದರೆ ಕನ್ನಡ ಸಿನಿಮಾಗಳ ಪರಿಸ್ಥಿತಿ ಏನು? ಎಂದು ಆಂತಕ ಎದುರಾಗಿದೆ.

ಕೆಲವೊಮ್ಮೆ ಒಳ್ಳೆ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗುತ್ತದೆ. ಆದರೆ ಸ್ಟಾರ್ ನಟರ ಸಿನಿಮಾಗಳಿಗೆ ಆ ತಾಕತ್ತು ಇರುತ್ತದೆ. ಇದೇ ಕಾರಣಕ್ಕೆ ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕೂಗು ಕೇಳಿಬರುವುದು. ಈ ವರ್ಷ 6 ತಿಂಗಳಲ್ಲಿ ಯಾವುದೇ ಕನ್ನಡ ಸಿನಿಮಾ ಗೆದ್ದಿಲ್ಲ. ಸ್ಟಾರ್ ನಟರ ಸಿನಿಮಾಗಳಿಲ್ಲದೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆಯೇ ಬೇಸರಗೊಂಡಿದ್ದಾರೆ ಎನ್ನುವ ವಾದವೂ ಇದೆ.
ದೊಡ್ಡ ಸಿನಿಮಾಗಳ ನಡುವೆ ಚಿಕ್ಕ ಸಿನಿಮಾಗಳು ಬಂದಾಗ ಟಾಕ್ ಚೆನ್ನಾಗಿದ್ದರೆ ಜನ ಬರ್ತಾರೆ. ಕಳೆದ ವರ್ಷ 'ಕೃಷ್ಣಂ ಪ್ರಣಯ ಸಖಿ' ಹಾಗೂ 'ಭೀಮ' ಚಿತ್ರಗಳ ಬಳಿಕ ಕನ್ನಡ ಚಿತ್ರಗಳು ಚೇತರಿಸಿಕೊಂಡಿದ್ದವು. ಈ ವರ್ಷವೂ ಅದೇ ನಿರೀಕ್ಷೆಯಲ್ಲಿ ಚಿತ್ರರಂಗ ಇದೆ. ಮತ್ತೊಂದು ಕಡೆ ಮಲ್ಟಿಪ್ಲೆಕ್ಸ್ ಚೈನ್‌ಗಳು ಕನ್ನಡ ಸಿನಿಮಾಗಳನ್ನು ತುಳಿಯುವ ಪ್ರಯತ್ನ ಮಾಡುತ್ತಿವೆ ಎನ್ನುವ ಆರೋಪ ಕೂಡ ಇದೆ. ಕನ್ನಡ ಸಿನಿಮಾಗಳಿಗೆ ಬೇಕೆಂದೇ ಬೆಳಗಿನ ಶೋಗಳನ್ನು ಕೊಡುವುದು, ಜನ ಬರದೇ ಇದ್ದಾಗ ಶೋ ತೆಗೆದು ಹಾಕುವುದು ಮಾಡುತ್ತಿದ್ದಾರೆ.
ನಮ್ಮ ಸಿನಿಮಾ ವಿಚಾರದಲ್ಲೂ ಮಲ್ಟಿಪ್ಲೆಕ್ಸ್‌ನವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ನಟ ದಿಗಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ಈ ಸಮಸ್ಯೆಗೆ ಯಾರನ್ನು ದೂರುವುದು ಗೊತ್ತಿಲ್ಲ. ಫಿಲ್ಮ್ ಚೇಂಬರ್ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಶೋಗಳನ್ನು ತೆಗೆದು ಹಾಕಿದ್ದಾರೆ. ನಮ್ಮ ಗೋಳು ಯಾರ ಬಳಿ ಹೇಳುವುದು. 'ಮಾದೇವ' ಚಿತ್ರಕ್ಕೂ ಇದೇ ಸಮಸ್ಯೆ ಆಗಿತ್ತು. ಮಲ್ಟಿಪ್ಲೆಕ್ಸ್‌ನವರು ಕನ್ನಡ ಸಿನಿಮಾಗಳಿಗೆ ಕ್ಯಾರೇ ಎನ್ನುತ್ತಿಲ್ಲ. ನಮ್ಮ ಸಿನಿಮಾಗಳ ಸ್ಟ್ಯಾಂಡಿಗಳನ್ನು ಚಿತ್ರಮಂದಿರಗಳ ಬಳಿ ಇಡುತ್ತಿಲ್ಲ. ವೀಕೆಂಡ್ ರೆಸ್ಪಾನ್ಸ್ ನೋಡಿ ಸೋಮವಾರಕ್ಕೆ 3 ಶೋಗಳು ಹೆಚ್ಚಿಸಿದ್ದಾರೆ ಅದೇ ಸಮಾಧಾನಕರ ಸಂಗತಿ. ನಾವು ಈಗ ದಕ್ಷಿಣದ ಸಿನಿಮಾಗಳ ಜೊತೆ ಅಲ್ಲ ಪಂಜಾಬಿ, ಒರಿಯಾ, ಗುಜರಾತಿ ಸಿನಿಮಾಗಳ ಜೊತೆ ಪೈಪೋಟಿ ಮಾಡುವಂತಾಗಿದೆ. ನಮ್ಮ ಸಿನಿಮಾ ಭವಿಷ್ಯ ಮುಂದೇನು? ಅಂತ ಕಾದು ನೋಡಬೇಕು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











