ಶಿವಮೊಗ್ಗದ ಜೈಲಿನಲ್ಲಿ ನಿರ್ದೇಶಕ ಪ್ರೇಮ್ ಮತ್ತು ತಂಡ
ನಿರ್ದೇಶಕ ಜೋಗಿ ಪ್ರೇಮ್ ಮತ್ತು ತಂಡ ಈಗ ಶಿವಮೊಗ್ಗದ ಜೈಲಿನಲ್ಲಿ ಇದ್ದಾರೆ. ಹೀಗೆಂದು ಹೇಳಿದ ತಕ್ಷಣ ಪ್ರೇಮ್ ಏಕೆ ಜೈಲು ಸೇರಿದರೂ, ಅವರು ಮಾಡಿದ ತಪ್ಪೇನು ಎಂದು ಕೆಲವು ಪ್ರಶ್ನೆಗಳು ನಿಮಗೆ ಬರಬಹುದು. ಆದರೆ, ಪ್ರೇಮ್ ಜೈಲಿಗೆ ಹೋಗಿರುವುದು ಚಿತ್ರೀಕರಣಕ್ಕಾಗಿ ಅಷ್ಟೇ.
ಪ್ರೇಮ್ ಈಗ 'ಏಕ್ ಲವ್ ಯಾ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯ, ಶಿವಮೊಗ್ಗದ ಜೈಲಿನಲ್ಲಿ ನಡೆಯುತ್ತಿದೆ. ನಿನ್ನೆ (ಮಂಗಳವಾರ) ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಚಿತ್ರತಂಡ ಹೊರಟಿದೆ. ಟ್ವಿಟ್ಟರ್ ಖಾತೆಯ ಮೂಲಕ ಕೆಲವು ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ.
ನಿರ್ದೇಶಕ ಪ್ರೇಮ್ ಅವರ ಬಹುತೇಕ ಸಿನಿಮಾಗಳಲ್ಲಿ ಜೈಲಿನ ಸೀನ್ ಇದ್ದೇ ಇರುತ್ತದೆ. ಅದರಲ್ಲಿಯೂ 'ಜೋಗಿ' ಸಿನಿಮಾದ ಶಿವರಾಜ್ ಕುಮಾರ್ ದೃಶ್ಯ ತುಂಬ ಸೊಗಸಾಗಿತ್ತು.

'ಏಕ್ ಲವ್ ಯಾ' ಒಂದು ಮ್ಯೂಸಿಕಲ್ ಲವ್ ಸ್ಟೋರಿ ಎಂದು ಹೇಳಿದ್ದ ಪ್ರೇಮ್ ಈಗ ಜೈಲಿನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಚಿತ್ರದ ಕಥೆ ಬಗ್ಗೆ ನಿರೀಕ್ಷೆ ಜಾಸ್ತಿಯಾಗಿದೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ.

ಸಿನಿಮಾದ ನಾಯಕಿಯ ಆಯ್ಕೆ ಇತ್ತೀಚಿಗಷ್ಟೆ ನಡೆದಿದೆ. ಕೊಡಗಿನ ಕುವರಿ ರೀಷ್ಮಾ ನಾನಯ್ಯ ಚಿತ್ರದ ಹೀರೋಯಿನ್ ಆಗಿದ್ದಾರೆ. ಚಿತ್ರದ ಖಳನಾಯಕನಾಗಿ ಯಶ್ವಂತ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











