»   » ‘ಏಕಾಂಗಿ’ಯ ರಸಸಂಜೆ...

‘ಏಕಾಂಗಿ’ಯ ರಸಸಂಜೆ...

Posted By: Super
Subscribe to Filmibeat Kannada

'ಪ್ರೇಮಲೋಕ"ದ 'ಪೋಲಿ ಹುಡುಗ" ನಿಮಗೆ ಗೊತ್ತಲ್ಲವೇ? ಯುವ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕುವ ರವಿಚಂದ್ರನ್‌, ತಮ್ಮ ಚಿತ್ರಗಳಿಗೆ ಪ್ರಚಾರ ಪಡೆಯುವ ಹಾಗೂ ಪ್ರಚಾರ ನೀಡುವ ರೀತಿಯಲ್ಲೂ ವಿಶೇಷತೆಯನ್ನು ಮೆರೆಯುತ್ತಾರೆ.

ತಮ್ಮ ಹೊಸ ಚಿತ್ರ 'ಏಕಾಂಗಿ"ಗೂ ಅವರು ಇದೇ ಮಾರ್ಗ ಹಿಡಿದಿದ್ದಾರೆ. ಇದಕ್ಕಾಗಿ ವಿನೂತನ ಕಾರ್ಯಕ್ರಮವನ್ನೇ ರೂಪಿಸಿದ್ದಾರೆ. ಅಕ್ಟೋಬರ್‌ 28ರ ಭಾನುವಾರ ಕ್ರೇಜಿ ದಾವಣಗೆರೆಯಲ್ಲಿ ರಸಸಂಜೆ ಕಾರ್ಯಕ್ರಮ ನೀಡುತ್ತಿದ್ದಾರೆ. ಇದನ್ನು ಕೇಜಿ ಷೋ ಎನ್ನಲು ಅಡ್ಡಿಯಿಲ್ಲ.

ಇದು ಸಾಮಾನ್ಯ ರಸಸಂಜೆ ಕಾರ್ಯಕ್ರಮ ಅಲ್ಲ. ನಭೂತೋ ನಭವಿಷ್ಯತಿ ಎನ್ನುವಂತೆ ನಡೆಯಲಿರುವ ಅದ್ಭುತ ಹಾಗೂ ಅದ್ಧೂರಿ ರಸಸಂಜೆ. ಇದಕ್ಕಾಗಿ ರವಿ ಎಪ್ಪತ್ತು ಲಕ್ಷ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಏನು ಇಷ್ಟು ದುಬಾರಿ ವೆಚ್ಚದಲ್ಲಿ ರಸಸಂಜೆಯೇ? ಇದನ್ನು ನೋಡುವ ಭಾಗ್ಯ ನಮಗಿಲ್ಲವೇ? ದಾವಣಗೆರೆ ಮಂದಿಯೇ ಅದೃಷ್ಟವಂತರಪ್ಪ ಎನ್ನುತ್ತೀರಾ!

ಇಲ್ಲ .. ಇಲ್ಲ.. ನಿಮಗೂ ಆ ಆದೃಷ್ಟ ಇದೆ. ರವಿ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಕನ್ನಡಿಗರೆಲ್ಲಾ ನೋಡಲೆಂದು ಉದಯಾ ಟಿ.ವಿ.ಯಾಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದ ಜಾಹೀರಾತು ಉದಯ ಟಿ.ವಿಯಲ್ಲಿ ಮೊಳಗುತ್ತಿದೆ.

28ರಂದು ಸಂಜೆ ರವಿ ಜೊತೆ ರಮ್ಯಕೃಷ್ಣ ಹಾಗೂ ಇತರ 40 ಮಂದಿ ನರ್ತಕ- ನರ್ತಕಿಯರು ಹೆಜ್ಜೆ ಹಾಕಲಿದ್ದಾರೆ. (ಹೀಗಾಗಿ ಇದು ಏಕಾಂಗಿ ಷೋ ಅಲ್ಲ) ಏಕಾಂಗಿ ಎಂದರೇನು ಎಂಬುದಕ್ಕೆ ಟಿ.ವಿ. ಜಾಹೀರಾತಿನಲ್ಲಿ ಚುಟುಕು ಉತ್ತರವಿತ್ತಿರುವ ರವಿ, ದಾವಣಗೆರೆಯಲ್ಲಿ ಬೃಹತ್‌ ಉಪನ್ಯಾಸವನ್ನೇ ನೀಡಲಿದ್ದಾರೆ.

ಇದಕ್ಕಾಗಿ ರವಿಯ ಭಾಷಣ ಈಗಲೇ ರೆಕಾರ್ಡ್‌ ಆಗಿದೆ. ದಾವಣಗೆರೆಯ ಮೈದಾನದ ಯಾವುದೇ ಮೂಲೆಯಲ್ಲಿ ಕುಳಿತರೂ ಕೇಳುವಂತೆ 50 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ ಸ್ಪೀಕರ್‌ ಅನ್ನು ವೇದಿಕೆಯಲ್ಲಿ ಅಳವಡಿಸಲಾಗುತ್ತಿದೆ. ಈ ಧ್ವನಿವರ್ಧಕ ಸಹಾಯದಿಂದ 10 ಲಕ್ಷ ಜನರು ಯಾವುದೇ ತೊಂದರೆ ಇಲ್ಲದೆ ಸಂಗೀತ ಆಲಿಸಬಹುದು.

ಈ ಸಮಾರಂಭಕ್ಕಾಗಿ ರವಿಚಂದ್ರನ್‌ 200 ಬಿಸಿರಕ್ತದ ತರುಣರನ್ನು ಸ್ವಯಂ ಸೇವಕರಾಗಿ ಸಿದ್ಧಪಡಿಸಿದ್ದಾರೆ. ಇವರೆಲ್ಲರಿಗೂ ವಾಕಿ ಟಾಕಿ ನೀಡಲಾಗುತ್ತಿದೆ. ಮಿಗಿಲಾಗಿ ಗದ್ದಲ, ಗಲಾಟೆ ನಿಯಂತ್ರಿಸಲು 1200 ಪೊಲೀಸ್‌ ಸಿಬ್ಬಂದಿಯ ನೆರವಿಗೆ ಮನವಿ ಸಲ್ಲಿಸಿದ್ದಾರೆ.

ರವಿ ಔದಾರ್ಯ : 70 ಲಕ್ಷ ರುಪಾಯಿ ಖರ್ಚು ಮಾಡಿ ರವಿ ಮಾಡುತ್ತಿರುವ ಈ ಕಾರ್ಯಕ್ರಮದಿಂದ ಭಾರಿ ದೊಡ್ಡ ಲಾಭವನ್ನೇ ನಿರೀಕ್ಷಿಸುತ್ತಿರಬಹುದು ಎಂದು ನೀವು ಅಂದು ಕೊಂಡರೆ ಅದು ತಪ್ಪು. ರವಿ ಸಮಾರಂಭದಿಂದ ಬರುವ ಲಾಭವನ್ನು ಉತ್ತರ ಕರ್ನಾಟಕದ ಬರಪೀಡಿತರ ನೆರವಿಗೆ ನೀಡಲು ತೀರ್ಮಾನಿಸಿದ್ದಾರೆ.

ದಾವಣಗೆರೆ ಋಣ: ರೆಬಲ್‌ ಸ್ಟಾರ್‌ ಅಂಬರೀಶ್‌ ಕೆಲವೇ ತಿಂಗಳ ಹಿಂದೆ ದಾವಣಗೆರೆಯಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಈಗ ರವಿಯೂ ಇಲ್ಲೇ ಅದ್ಧೂರಿ ಸಂಗೀತ ಸಂಜೆ ಏರ್ಪಡಿಸಿದ್ದಾರೆ. ಏಕೆ? ಇದಕ್ಕೆ ರವಿ ಬಳಿ ಉತ್ತರ ಇದೆ.

ರವಿ ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ 'ನಾನು ನನ್ನ ಹೆಂಡ್ತಿ" ಶತದಿನೋತ್ಸವ ಆಚರಿಸಿದ್ದು ದಾವಣಗೆರೆಯಲ್ಲೇ. ಆಗ ರವಿ ಅಲ್ಲಿಗೆ ಹೋಗಿದ್ದರು. ಈಗ ತಮ್ಮ ಅಭಿಮಾನಿಗಳ ಹಾಗೂ ದಾವಣಗೆರೆ ಋಣ ತೀರಿಸಲು, ಅಲ್ಲೇ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ.

ಅಂದಹಾಗೆ ಈ ಕಾರ್ಯಕ್ರಮದ ದಿನ ರವಿಚಂದ್ರನ್‌ ಹೆಲಿಕಾಪ್ಟರ್‌ನಲ್ಲಿ 'ಏಕಾಂಗಿ"ಯಾಗಿ ಬಂದಿಳಿಯಲಿದ್ದಾರೆ. ಏಕಾಂಗಿಗೆ ಕ್ಲಾರಿಫಿಕೇಷನ್‌ ಸಹ ಕೊಡಲಿದ್ದಾರೆ.... ನಿರೀಕ್ಷಿಸಿ..

English summary
Kannada film star Ravaichandrans music night on Oct 28 at Davanagere

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada