twitter
    For Quick Alerts
    ALLOW NOTIFICATIONS  
    For Daily Alerts

    ದಾವಣಗೆರೆಯಲ್ಲಿ ಬಣ್ಣದ ತಣ್ಣನೆಯ ಸಂಜೆ

    By Super
    |

    ವರ್ಣರಂಜಿತ ! ದಾವಣಗೆರೆಯ ಅವರ್ಣನೀಯ ಏಕಾಂಗಿ ನೈಟನ್ನು ವರ್ಣಿಸಲು ಸಿಗುವ ಪದ ಅದೊಂದೆ. ವೇದಿಕೆಯ ಮೇಲೆ ಬಣ್ಣದ ಬೆಳಕಿತ್ತು. ಕೆಳಗೆ ಬಣ್ಣಬಣ್ಣದ ನಿರೀಕ್ಷೆಗಳು. ರವಿಚಂದ್ರನ್‌ ಹಾಡಲ್ಲಿ ಬಣ್ಣನೆ. ನಡೆಯಲ್ಲಿ ಬಣ್ಣದ ಹೆಜ್ಜೆ, ಸಂಗೀತದಲ್ಲಿ ಬಣ್ಣದ ಗೆಜ್ಜೆ. ಭಣಭಣ ಎನ್ನುತ್ತಿದ್ದ ಬಿರುಬಿಸಿಲಿನ ದಾವಣಗೆರೆಗೆ ತಣ್ಣನೆಯ ಬಣ್ಣಸಂಜೆ! ಅದು ಒನ್‌ ಮ್ಯಾನ್‌ ಷೋ.

    ಒನ್‌ ಅಂಡ್‌ ಓನ್ಲೀ 'ರವಿ" ಅವನೇ ಕವಿ. ಬರೆದದ್ದು ಅವನೇ, ಅದಕ್ಕೆ ರಾಗ ಹಾಕಿದ್ದೂ ಅವನೊಬ್ಬನೇ. ಹೀಗಾಗಿ ಅವನು ಏಕಾಂಗಿ. ಕೇಳುವವನೂ ಒಬ್ಬನೇ ಎನ್ನುವಂತಿಲ್ಲ. ಕೆಳಗಿದ್ದರು ಅರ್ಧ ಲಕ್ಷ ಮಂದಿ. ಪೂರ್ಣ ಲಕ್ಷ್ಯ ವೇದಿಕೆಯತ್ತ. ಪ್ರಕಾಶ್‌ ರೈ ಕಾರ್ಯಕ್ರಮ ನಿರೂಪಿಸಿದರು. ಅಂಥ ನಿರೂಪಣೆ ಕೇಳಿ ಗೊತ್ತಿಲ್ಲದ ಮಂದಿ ರೈಯ ಮಾತಿಗೆ ಸೈ ಎಂದರು. ರೈ ಮಾತೇ ಹಾಗೆ. ಓತಪ್ರೋತ.... ಆದರೂ ಅಲ್ಲೊಂದು ಹಿಡಿತ. ಗಂಭೀರ... ಆದರೂ ಅಲ್ಲೊಂದು ನಗೆಯ ಚಂದ್ರಹಾರ. ಬಿಟ್ಟೂ ಬಿಡದ ದನಿ... ಬೆನ್ನಟ್ಟುವ ದನಿ. ಎಚ್ಚರಿಸುವ ಚಂಡೆಯಂತೆ, ಮುದಗೊಳಿಸುವ ಮದ್ದಲೆಯಂತೆ!

    ಅವರು, ರವಿಯನ್ನು ಕರೆದರು. ರವಿ ಕಾರಲ್ಲಿ ಬಂದರು. ಹೆಲಿಕಾಪ್ಟರ್‌ನಲ್ಲಿ ಬರುತ್ತಾರೆ ಎಂದುಕೊಂಡವರಿಗೆ ಕಾರಲ್ಲಿ ಬಂದಾಗ ಬೇಸರ. ಅನಿಸಿಕೆ ಸುಳ್ಳಾಯಿತಲ್ಲ ಎಂಬ ನಿರಾಶೆ. ವೇದಿಕೆಯ ಬದಿಯಲ್ಲಿದ್ದ ಗರ್ನಾಲುಗಳು ಡಮ್ಮೆಂದವು. ಹೊಗೆ ವೇದಿಕೆ ತುಂಬಿತು. ಹೊರಗಡೆಯೂ ಹೊಗೆ. ಅಲ್ಲಿ ಅಶ್ರುವಾಯು. ಒಳಗೆ ಬರಲಾಗದವರ ಹತಾಶಯತ್ನಕ್ಕೆ ಪೊಲೀಸ್‌ ತಡೆ.

    ರವಿ ಆರು ಹಾಡಿಗೆ ಕುಣಿದರು. ನಾಲ್ಕು ಹಾಡುಗಳಲ್ಲೇ ಅವರು ಜನ ಮೆಚ್ಚುಗೆ ಗಳಿಸಿದ್ದಾಗಿತ್ತು. ರಮಿಸೋ ರಮ್ಯಕೃಷ್ಣ ಎಂದು ರೈ ಕರೆದಾಗ, ರಮ್ಯಕೃಷ್ಣ ರವಿಗೆ ಜೊತೆಯಾದರು. ಒಂದು ಹಾಡಲ್ಲಂತೂ ರವಿ ಒಂಟಿಯಾಗೇ ವೇದಿಕೆಯಲ್ಲಿದ್ದರು. ಈ ಬಾರಿ ನೃತ್ಯ ನಿರ್ದೇಶಕರ ಸೂಚನೆಗೆ ರವಿ ಕಿವಿಕೊಟ್ಟ ಹಾಗಿತ್ತು. ಹೆಜ್ಜೆಗಳಲ್ಲಿ ರಿದಮ್‌ ಇತ್ತು. ರವಿ ಆಡಿದ್ದು ಎಂಟೇ ಮಾತು.

    ಎಂಟರಲ್ಲಿ ಎಂಬತ್ತಿತ್ತು ಅರ್ಥ. ಮೊದಲ ಬಾರಿಗೆ ನಿಮ್ಮ ಮುಂದೆ ಕುಣೀತಿದ್ದೇನೆ. ಸಂಕೋಚ, ಭಯದೊಂದಿಗೆ. ಎಲ್ರೂ ಸ್ಟೇಜ್‌ನಿಂದ ಸಿನಿಮಾಕ್ಕೆ ಹೋಗ್ತಾರೆ. ನಾನು ಸಿನಿಮಾದಿಂದ ಸ್ಟೇಜ್‌ಗೆ ಬಂದಿದ್ದೇನೆ. ನಿಮ್ಮ ಸಹಕಾರ, ಚಪ್ಪಾಳೆ ಹೀಗೇ ಬೀಳ್ತಾ ಇದ್ರೆ ನಾನು ಒಳ್ಳೆ ಸಿನಿಮಾ ಕೊಡ್ತೀನಿ. ನಮ್ಮಪ್ಪ ಪ್ರೇಮಲೋಕಕ್ಕೆ ನಾನು ಖರ್ಚು ಮಾಡಿದ್ದು ನೋಡಿದಾಗ ತಲೆಕಟ್ಟವನು ಅಂದ್ರು. ಸಿನಿಮಾ ನೋಡಿದಾಗ ಬಂದು ತಬ್ಬಿಕೊಂಡರು. ಕಣ್ಣಲ್ಲಿ ನೀರಿತ್ತು. ರಣಧೀರ ನೋಡಿದಾಗ 'ನೀನು ಏನೋ ಆಗ್ತೀಯ ಬಿಡು" ಅಂದ್ರು. ಅದಾದ ನಂತರ ನಾಲ್ಕು ಭಾಷೆಗಳಲ್ಲಿ ಶಾಂತಿಕ್ರಾಂತಿ ಮಾಡಿದೆ. ಕೊಟ್ಟ ದುಡ್ಡನ್ನೆಲ್ಲಾ ನೀವೇ ಕಿತ್ತುಕೊಂಡು ಬಿಟ್ರಿ. ಪರವಾಗಿಲ್ಲ . ನಿಮ್ಮ ಪ್ರೀತಿ ಇರೋತನಕ ಒಳ್ಳೆ ಸಿನಿಮಾ ಮಾಡುತ್ತಾ ಹೋಗ್ತೀನಿ" ಹೀಗೆ ಸಾಗಿತ್ತು ಮಾತು.

    ಕೊನೆಯಲ್ಲಿ ಅಭಿಜಿತ್‌ ಕುಣಿದರು. ರಾಜೇಶ್‌ ರಾಮನಾಥನ್‌- ರಾಜೇಶ್‌ ಕೃಷ್ಣನ್‌ ಆರಂಭದಲ್ಲೇ ಹಾಡು ಹೇಳಿ ರಂಜಿಸಿದರು. ಡಿಸಿ ಶಿವರಾಮು ಮುಂತಾದವರು ಪ್ರೇಕ್ಷಕರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ, ಮಲ್ಲಿಕಾರ್ಜುನ್‌, ಮಲ್ಲಿಕಾರ್ಜುನಪ್ಪ.... ಹೀಗೆ ವೇದಿಕೆ ಮಲ್ಲಿಮಯವಾಗಿತ್ತು.

    ಅದೇ ವೇದಿಕೆಯ ಮೇಲೆ ಏಕಾಂಗಿ ಕ್ಯಾಸೆಟ್‌ ಬಿಡುಗಡೆಯೂ ನಡೆಯಿತು. ರವಿಚಂದ್ರನ್‌ ತಾಯಿ ಪಟ್ಟಮ್ಮಾಳ್‌, ಪತ್ನಿ ಸುಮತಿ (ಅವರೇ ಏಕಾಂಗಿ ನಿರ್ಮಾಪಕಿ) ಸೋದರ ಬಾಲಾಜಿ. ಉದಯ ಟೀವಿ ಸೆಲ್ವಂ ವೇದಿಕೆಯೇರಿದರು. ಹೃದಯಾಕಾರದ ಕ್ಯಾಸೆಟ್ಟು ಬಿಡುಗಡೆಯಾಯಿತು.

    ಕ್ಯಾಸೆಟ್‌ ಬಿಡುಗಡೆಯ ನಂತರ ರವಿಚಂದ್ರನ್‌ ಎಲ್ಲಿ ಮಾಯವಾದರೋ ಗೊತ್ತಾಗಲಿಲ್ಲ. ಈ ಮಧ್ಯೆ, ಮಂಜುಳ ಗುರುರಾಜ್‌ ಜಟಕಾ ಕುದುರೆ ಏರಿ, ಪೇಟೆಗೋಗೋಮಾ, ಜರದಾ ಬೀಡ ತಿಂತಾ ಕರಗ ನೋಡುಮಾ ಎಂದು ದಾವಣಗೆರೆಯಲ್ಲೇ ಬೆಂಗಳೂರು ಕರಗ ದರ್ಶನ ಮಾಡಿಸಿದರು.

    ಅಂದಹಾಗೆ, ಕಾರ್ಯಕ್ರಮದ ನಿರೂಪಕ ಪ್ರಕಾಶ್‌ ರೈ ಪ್ರಕಾರ ಈ ಕಾರ್ಯಕ್ರಮಕ್ಕೆ ಖರ್ಚಾಗಿದ್ದು, 85 ಲಕ್ಷ

    (ಕೃಪೆ ಉದಯ ಟಿ.ವಿ ನೇರ ಪ್ರಸಾರ)

    Friday, July 5, 2013, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X