ಯುಗಾದಿಗೆ ಬಂತು ಹೊಸ ಹೊಸ ಪೋಸ್ಟರ್; ಸಿಕ್ತು ಹೊಸ ಅಪ್‌ಡೇಟ್
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಹಿಂದೂಗಳ ವರ್ಷ ಮೊದಲ ಹಬ್ಬ ಯುಗಾದಿ ಆಚರಿಸಲಾಗುತ್ತದೆ. ನಾಡಿನೆಲ್ಲೆಡೆ ಶ್ರೀ ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಜನ ಆಚರಿಸುತ್ತಿದ್ದಾರೆ. ಚಂದನವನದಲ್ಲೂ ಯುಗಾದಿ ಸಂಭ್ರಮ ಜೋರಾಗಿದೆ.
ಕನ್ನಡ ಸಿನಿಮಾ ತಾರೆಯರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಸಿ ಪೂಜೆ ಮಾಡಿ ಹಬ್ಬದೂಟ ಸವಿದು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಹೊಸ ಹೊಸ ಸಿನಿಮಾಗಳ ಪೋಸ್ಟರ್ ರಿಲೀಸ್ ಮಾಡಿ ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.

ಐಪಿಎಲ್ ಆರ್ಭಟದ ನಡುವೆ ಕನ್ನಡ ಚಿತ್ರರಂಗ ಕೊಂಚ ಮಂಕಾಗಿದೆ. ಆದರೆ ಜಗ್ಗದೇ ಕೆಲ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಇನ್ನು ಯುಗಾದಿ ಸಂಭ್ರಮದಲ್ಲಿ ಯಾವೆಲ್ಲಾ ಸಿನಿಮಾಗಳ ಹೊಸ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಏನೆಲ್ಲಾ ಅಪ್‌ಡೇಟ್ ಸಿಕ್ಕಿದೆ ಎನ್ನುವುದನ್ನು ಮುಂದೆ ಓದಿ.
'ಡೆವಿಲ್' ಹೊಸ ಪೋಸ್ಟರ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ರಾಜಸ್ಥಾನದಲ್ಲಿ ಮುಂದುವರೆದಿದೆ. ಇತ್ತೀಚೆಗೆ ಮೈಸೂರಿನಲ್ಲಿ ಸಣ್ಣ ಶೆಡ್ಯೂಲ್ ಮುಗಿಸಿತ್ತು ಚಿತ್ರತಂಡ. ಸದ್ಯ ಯುಗಾದಿ ಹಬ್ಬದ ಚಿತ್ರದ ಹೊಸ ಪೋಸ್ಟರ್ ಹೊರಬಂದಿದೆ. ದರ್ಶನ್ ಸ್ಟೈಲಿಶ್ ಲುಕ್‌ನಲ್ಲಿ ಕುಳಿತ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿ ಯುಗಾದಿ ಶುಭಾಶಯ ಕೋರಿದೆ.

ಪಕ್ಕಾ ಶೋ ಎಂದ 'ಎಕ್ಕ'
ಯುಗಾದಿ ಹಬ್ಬದ ಸಮಯದಲ್ಲಿ ಕೆಲವು ಭಾಗಗಳಲ್ಲಿ ಇಸ್ಪೀಟ್ ಆಡುವ ರೂಢಿ ಇದೆ. ಆದರೆ ಹಬ್ಬದ ನೆಪದಲ್ಲಿ ಜೂಜು ಆಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ 'ಎಕ್ಕ'. ಈ ಚಿತ್ರದಲ್ಲಿ ಇಸ್ಪೀಟ್ ಆಟದ ವಿಚಾರ ಹೆಚ್ಚು ಸದ್ದು ಮಾಡಲಿದೆ. ಈಗಾಗಲೇ 'ಎಕ್ಕ ಮಾರ್' ಎಂಬ ಸಾಂಗ್ ಕೂಡ ರಿಲೀಸ್ ಆಗಿದೆ. ಸದ್ಯ ನಾಯಕ ಎಸ್ಪೀಟ್ ಆಡುತ್ತಾ ಕುಳಿತ ಪೋಸ್ಟರ್ ಬಿಟ್ಟು "ಈ ಹಬ್ಬಕ್ಕೆ ಪಕ್ಕಾ ಶೋ ಗುರು, ಯುಗಾದಿ ಹಬ್ಬದ ಶುಭಾಶಯ" ಎಂದು ಚಿತ್ರತಂಡ ಶುಭಾಶಯ ಕೋರಿದೆ.
'ಸಿಟಿ ಲೈಟ್ಸ್' ವಿಶಷ್
ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೊನಿಷಾ ನಟನೆಯ ಸಿನಿಮಾ 'ಸಿಟಿ ಲೈಟ್ಸ್'. ಬರೀ ಪೋಸ್ಟರ್‌ಗಳಿಂದಲೇ ಈ ಸಿನಿಮಾ ಹಪ್ ಕ್ರಿಯೇಟ್ ಮಾಡಿದೆ. 'ಸಲಗ' ಹಾಗೂ 'ಭೀಮ' ಸಿನಿಮಾಗಳ ಬಳಿಕ ವಿಜಿ ಆಕ್ಷನ್ ಕಟ್ ಹೇಳುತ್ತಿರುವ 3ನೇ ಸಿನಿಮಾ ಇದು. ಈ ಬಾರಿ ನಟನೆ ಬಿಟ್ಟು ಬರೀ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ವಿನಯ್, ಮೊನಿಷಾ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದು ಹೊಸ ಪೋಸ್ಟರ್ ಗಮನ ಸೆಳೆದಿದೆ.
'ವೀರಚಂದ್ರಹಾಸ' ಅಪ್‌ಡೇಟ್
ಯಕ್ಷಗಾನ ಹಿನ್ನೆಲೆಯಲ್ಲಿ ರವಿ ಬಸ್ರೂರು ನಿರ್ದೇಶನದ ಸಿನಿಮಾ 'ವೀರಚಂದ್ರಹಾಸ'. ಸದ್ಯ ಈ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಿದೆ. ಏಪ್ರಿಲ್ 18ಕ್ಕೆ ಸಿನಿಮಾ ತೆರೆಗೆ ಬರಲಿದೆ. ಕೆಜಿಎಫ್ ಗರುಡ ಖ್ಯಾತಿಯ ರಾಮ್ ಚಿತ್ರದಲ್ಲಿ ರಾಜ ಗರುಡಾಕ್ಷನಾಗಿ ಕಾಣಿಸಿಕೊಂಡಿದ್ದಾರೆ ಹೊಸ ಪೋಸ್ಟರ್ ಬಂದಿದೆ.
A ಫಾರ್ ಆನಂದ್
ಶ್ರೀನಿ ನಿರ್ದೇಶನದಲ್ಲಿ ಶಿವಣ್ಣ ನಟನೆಯ 'A ಫಾರ್ ಆನಂದ್' ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಶಿವಣ್ಣ ಚಿಕ್ಕ ಹುಡುಗಿಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಬರುತ್ತಿರುವ ಪೋಸ್ಟರ್ ಅದು. ಗೀತಾ ಶಿವರಾಜ್‌ಕುಮಾರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನುಳಿದಂತೆ ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ', ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ 'ಮ್ಯಾಂಗೊ ಪಚ್ಚ', ಸಿಂಪಲ್ ಸುನಿ ನಿರ್ದೇಶನ 'ಗತ ವೈಭವ' ಸೇರಿದಂತೆ ಹಲವು ಸಿನಿಮಾಗಳ ಹೊಸಹೊಸ ಪೋಸ್ಟರ್ ಹೊರಬಂದಿದೆ. ಹಬ್ಬಕ್ಕೆ ಒಂದು ದಿನ ಮುನ್ನ ಪ್ರೇಮ್ ನಿರ್ದೇಶನದ 'KD' ಚಿತ್ರದ ಹಾಡು ರಿಲೀಸ್ ಆಗಿತ್ತು. ಮಂಸೋರೆ ನಿರ್ದೇಶನದ 'ದೂರ ತೀರಯಾನ' ಚಿತ್ರದ ಹೊಸ ಪೋಸ್ಟರ್ ಜೊತೆಗೆ ಜುಲೈನಲ್ಲಿ ಸಿನಿಮಾ ರಿಲೀಸ್ ಎನ್ನುವುದು ರಿವೀಲ್ ಆಗಿದೆ.


Click it and Unblock the Notifications











