ವ್ಯಕ್ತಿಯ ಕುತ್ತಿಗೆಗೆ ಚಾಕು ಹಾಕಿ ತಲೆಮರೆಸಿಕೊಂಡ ದರ್ಶನ್ ಅಂಧಾಭಿಮಾನಿಗಳು
ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಆಗಾಗ್ಗೆ ಚರ್ಚೆ ಆಗುತ್ತಿದೆ. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ನೆಚ್ಚಿನ ನಟ ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಆಪ್ತರು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಜೂನ್ 22ರಂದು ನಟ ದರ್ಶನ್ ಸೇರಿ 17 ಜನ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಬಳಿಕ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ವಿಚಾರ ಬಯಲಾಗಿತ್ತು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿತ್ತು. ಬಳಿಕ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಯಿತು.

ಒಂದ್ಕಡೆ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದು ಕಡೆ ಅವರ ಅಂಧಾಭಿಮಾನಿಗಳ ಹುಚ್ಚಾಟ ಎಲ್ಲೆ ಮೀರಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿ ಪದೇ ಪದೆ ಕಿರಿಕ್ ಮಾಡುತ್ತಿರುತ್ತಾರೆ. ನಮ್ಮ ನೆಚ್ಚಿನ ನಟ ಎಲ್ಲರಿಗಿಂತ ಹೆಚ್ಚು ಎಂದು ಬಿಂಬಿಸಿಕೊಳ್ಳುವ ಭರದಿಂದ ಮತ್ತೊಬ್ಬ ನಟನನ್ನು, ಅವರ ಅಭಿಮಾನಿಗಳನ್ನು ಕೆಣಕಿ ಟ್ರೋಲ್ ಮಾಡುತ್ತಿರುತ್ತಾರೆ.
ದರ್ಶನ್‌ಗೆ ಬಗ್ಗೆ ಕಾಮೆಂಟ್ ಮಾಡುವವರನ್ನು ಥಳಿಸಿ ಕ್ಷಮೆ ಕೇಳಿಸುವ ಕೆಲಸವನ್ನು ಮಾಡುತ್ತಾರೆ. ಇದೀಗ ಕಿರುಚಾಡಿ ಗಲಾಟೆ ಮಾಡಬೇಡಿ ಎಂದು ಹೇಳಿದ್ದಕ್ಕೆ ದರ್ಶನ್ ಅಂಧಾಭಿಮಾನಿಗಳು ವ್ಯಕ್ತಿಯೋರ್ವನ ಕುತ್ತಿಗೆಗೆ ಚಾಕು ಹಾಕಿರುವ ಘಟನೆ ನಡೆದಿದೆ. ರಾಮನಗರದ ಬಳಿಯ ಸೂಲಿಕೆರೆ ಪಾಳ್ಯದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.
ದೊಡ್ಡಮಣ್ಣಗುಡ್ಡೆಯ ವೆಂಕಟಸ್ವಾಮಿ ಎಂಬುವವರು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೀವ ಉಳಿದಿದ್ದೇ ಹೆಚ್ಚು ಎನ್ನುವಂತಾಗಿದೆ. ಘಟನೆ ಹಿನ್ನೆಲೆ ಕಿರಣ್ ಹಾಗೂ ಮಹದೇವ್ ಎಂಬುವವರ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಟ್ಟಡ ನಿರ್ಮಾಣವೊಂದರ ಮೇಸ್ತ್ರಿಯಾಗಿ ಗಾಯಾಳು ವೆಂಕಟಸ್ವಾಮಿ ಕೆಲಸ ಮಾಡುತ್ತಿದ್ದರು. ಅವರ ಬಳಿಯೇ ಆರೋಪಿಗಳು ಕೂಲಿ ಕೆಲಸ ಮಾಡಿಕೊಂಡಿದ್ದರು. ಕಟ್ಟಡದ ಪಕ್ಕದಲ್ಲೇ ಚಿಕ್ಕ ಶೆಡ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ರಾತ್ರಿ 8 ಗಂಟೆ ಸುಮಾರಿಗೆ ಆರೋಪಿಗಳಿಬ್ಬರು ದರ್ಶನ್ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ 'ಡಿ ಬಾಸ್ ಡಿಬಾಸ್' ಎಂದು ಕೂಗಲು ಆರಂಭಿಸಿದ್ದಾರೆ.
ಕಿರಣ್ ಹಾಗೂ ಮಹದೇವ್ ಕೂಗಾಟ ಕೇಳಿದ ಮೇಸ್ತ್ರಿ ವೆಂಕಟಸ್ವಾಮಿ ಕಿರುಚಾಡಬೇಡಿ, ಅಕ್ಕ ಅಕ್ಕ ಮನೆಗಳಿವೆ, ಅವರಿಗೆಲ್ಲಾ ತೊಂದರೆ ಆಗುತ್ತದೆ, ಸುಮ್ಮನೆ ಹೋಗಿ ಮಲಗಿ ಎಂದು ಕಿವಿಮಾತು ಹೇಳಿದ್ದಾರೆ. ಆಗ ಇದ್ದಕ್ಕಿದಂತೆ ಮಾತಿಗೆ ಮಾತು ಬೆಳೆದು ಆರೋಪಿಗಳು "ನಮ್ಮ ಬಾಸ್ ಬಗ್ಗೆ ಮಾತಾಡ್ತೀಯಾ?" ಎಂದು ವೆಂಕಟಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕಿರಣ್ ಚಾಕುವಿನಿಂದ ವೆಂಕಟಸ್ವಾಮಿ ಕುತ್ತಿಗೆ ಕೊಯ್ದಿದ್ದಾನೆ ಎಂದು ವರದಿಯಾಗಿದೆ.
ವೆಂಕಟಸ್ವಾಮಿ ಮೇಲೆ ಕಿರಣ್ ಹಾಗೂ ಮಹದೇವ್ ಇಬ್ಬರು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ. ಬಳಿಕ ಕಾಳಯ್ಯ ಎಂಬುವವರು ಬಂದು ಜಗಳ ಬಿಡಿಸಿದ್ದಾರೆ. ಬಳಿಕ ವೆಂಕಟಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಘಟನೆ ಬಳಿಕ ಆರೋಪಿಗಳಿಬ್ಬರೂ ಪರಾರಿ ಆಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಕೂಡ ದರ್ಶನ್ ಅಭಿಮಾನಿಗಳು ಎಲ್ಲೆ ಮೀರಿ ವರ್ತಿಸಿದ ಘಟನೆಗಳು ನಡೆದಿತ್ತು.
ಇನ್ನು ನಟ ದರ್ಶನ್ ಸೇರಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಾಳೆ(ಸೆಪ್ಟೆಂಬರ್) ನಡೆಯಲಿದೆ.


Click it and Unblock the Notifications











