ಈ 5 ಚಿತ್ರಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು.!
ಲೋಕಸಭೆ ಚುನಾವಣೆ ಕೆಲವು ಸಿನಿಮಾಗಳಿಗೆ ತಲೆ ನೋವು ತಂದಿದೆ. ತಾವಾಯ್ತು ತಮ್ಮ ಸಿನಿಮಾ ಆಯ್ತು ಅಂತ ಬಿಡುಗಡೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದ ಸಿನಿಮಾಗಳಿಗೆ ಚುನಾವಣೆ ಆಯೋಗ ಬ್ರೇಕ್ ಹಾಕುವ ಸಾಧ್ಯತೆ ಇದೆ.
ಅದರಲ್ಲೂ ಸೌತ್ ಇಂಡಸ್ಟ್ರಿಯ ನಾಲ್ಕು ಸಿನಿಮಾ ಹಾಗೂ ಬಾಲಿವುಡ್ ನ ಒಂದು ಸಿನಿಮಾ ಮೇಲೆ ಕೇಂದ್ರ ಚುನಾವಣಾ ಆಯೋಗ ಅಥವಾ ಪ್ರಾದೇಶಿಕ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿರಬಹುದು.
ಯಾಕಂದ್ರೆ, ಎಲೆಕ್ಷನ್ ಗೂ ಮೊದಲು ಈ ಸಿನಿಮಾಗಳು ಬಿಡುಗಡೆಯಾದ್ರೆ, ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರ ನಡೆದಿದ್ದು, ಕೆಲವರು ಈ ಸಿನಿಮಾಗಳ ಬಿಡುಗಡೆಗೆ ವಿರೋಧವನ್ನ ಕೂಡ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಚುನಾವಣಾ ಆಯೋಗಕ್ಕೆ ಟಾರ್ಗೆಟ್ ಆಗಿರುವ ಆ ಐದು ಚಿತ್ರಗಳು ಯಾವುದು? ಮುಂದೆ ಓದಿ.....

ಲಕ್ಷ್ಮೀಸ್ ಎನ್.ಟಿ.ಆರ್
ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿರುವ ಲಕ್ಷ್ಮೀಸ್ ಎನ್.ಟಿ.ಆರ್ ಸಿನಿಮಾ ಮಾರ್ಚ್ 22 ರಂದು ಬಿಡುಗಡೆಯಾಗುತ್ತಿದೆ. ಆದ್ರೆ, ಈ ಚಿತ್ರವನ್ನ ಬಿಡುಗಡೆ ಮಾಡಬಾರದೆಂದು ಆಂಧ್ರದ ಟಿಡಿಪಿ ಕಾರ್ಯಕರ್ತರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಯಾಕಂದ್ರೆ, ಈ ಚಿತ್ರದಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಅವರನ್ನ ಕೆಟ್ಟದಾಗಿ ಬಿಂಬಿಸಲಾಗಿದೆ. ಇದು ಸಹಜವಾಗಿ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಸಿನಿಮಾ ಮುಂದಕ್ಕೆ ಹೋಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿಗದಿಯಾಗಿರುವ ದಿನಕ್ಕೆ ಸಿನಿಮಾ ರಿಲೀಸ್ ಆಗಬಹುದು.

ಮೋದಿ ಸಿನಿಮಾ
ವಿವೇಕ್ ಒಬೆರಾಯ್ ನಟನೆಯ ಪಿಎಂ ನರೇಂದ್ರ ಮೋದಿ ಸಿನಿಮಾ ಏಪ್ರಿಲ್ 12 ರಂದು ತೆರೆಕಾಣುತ್ತೆ ಎಂದು ಹೇಳಲಾಗಿದೆ. ಇದು ಮೋದಿ ಅವರ ಬಯೋಪಿಕ್ ಆಗಿದ್ದು, ಚುನಾವಣೆಯ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಆದ್ರೆ, ಈ ಚಿತ್ರದ ಬಿಡುಗಡೆಗೆ ವಿರೋಧ ಪಕ್ಷಗಳು ಅವಕಾಶ ಮಾಡಿಕೊಡುತ್ತಾ ಗೊತ್ತಿಲ್ಲ. ಆದ್ರೆ, ಚುನಾವಣಾ ಆಯೋಗ ಪಟ್ಟಿಯಲ್ಲಿ ಈ ಸಿನಿಮಾ ಇರಬಹುದು.

ಕನ್ನಡದ 'ಕುರುಕ್ಷೇತ್ರ'
ಇನ್ನು ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ನಿಖಿಲ್ ಕುಮಾರ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಸದ್ಯಕ್ಕೆ ಕಷ್ಟ. ಈ ಹಿಂದೆ ನಿರ್ಮಾಪಕ ಮುನಿರತ್ನ ಏಪ್ರಿಲ್ 5 ರಂದು ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದರು. ಆದ್ರೀಗ, ಆ ಚಿತ್ರದಲ್ಲಿ ನಟಿಸಿರುವ ನಟ ಲೋಕಸಭೆಯಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಈ ಸಿನಿಮಾ ತೆರೆಗೆ ಬರೋದು ಸದ್ಯಕ್ಕೆ ಅನುಮಾನ.
ನಿಖಿಲ್ ಗೆ ಮಾತ್ರವಲ್ಲ ಹರಿಪ್ರಿಯಾ, ಉಪೇಂದ್ರ ಚಿತ್ರಕ್ಕೂ ರಿಲೀಸ್ ಸಮಸ್ಯೆ

ಡಾಟರ್ ಆಫ್ ಪಾರ್ವತಮ್ಮ
ಅದೇ ರೀತಿ ಮಂಡ್ಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತಯಾರಾಗಿರುವ ಸುಮಲತಾ ಅವರ ಸಿನಿಮಾ ಕೂಡ ಚುನಾವಣಾ ಆಯೋಗದ ಪಟ್ಟಿಯಲ್ಲಿರಬಹುದು. ಯಾಕಂದ್ರೆ, ಈ ಚಿತ್ರವೂ ಏಪ್ರಿಲ್ ಮೊದಲ ಅಥವಾ ಎರಡನೇ ವಾರದಲ್ಲಿ ರಿಲೀಶ್ ಆಗಬೇಕಿತ್ತು. ಆದ್ರೆ, ಸ್ವತಃ ಸುಮಲತಾ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ಈ ಚಿತ್ರ ಬಿಡುಗಡೆಯೂ ಮುಂದಕ್ಕೆ ಹೋಗಬಹುದು.

ಐ ಲವ್ ಯೂ
ಉಪೇಂದ್ರ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಆದ್ರೆ, ಅವರ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಹಾಗ್ನೋಡಿದ್ರೆ, ಉಪೇಂದ್ರ ನಾಯಕತ್ವ ಪಕ್ಷ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡೋದ್ರಿಂದ ಉಪ್ಪಿಯ ಐ ಲವ್ ಯೂ ಸಿನಿಮಾ ರಿಲೀಸ್ ಕೂಡ ಸದ್ಯಕ್ಕೆ ಕಷ್ಟವಾಗಬಹುದು. ಈ ಸಿನಿಮಾನೂ ಏಪ್ರಿಲ್ ಆರಂಭದಲ್ಲಿ ತೆರೆಮೇಲೆ ಬರಬೇಕಿತ್ತು.


Click it and Unblock the Notifications











