IPL.. ಎಕ್ಸಾಂ ಎಫೆಕ್ಟ್: 'ಹೊಯ್ಸಳ'ನ ನೋಡೋಕೆ ಬರ್ತಿಲ್ವಾ ಜನ? ನಿರ್ಮಾಪಕರು ಹೇಳಿದ್ದಿಷ್ಟು
ಥಿಯೇಟರ್‌ಗಳಲ್ಲಿ 'ಹೊಯ್ಸಳ'ನ ಪೊಲೀಸ್ ಗಿರಿ ಜೋರಾಗಿದೆ. ಡಾಲಿ ಧನಂಜಯ ನಟನೆಯ 'ಗುರುದೇವ್ ಹೊಯ್ಸಳ' ಸಿನಿಮಾ ಈ ವಾರ ತೆರೆಗಪ್ಪಳಿಸಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಸಿನಿಮಾ ನೋಡಿದವರೆಲ್ಲಾ ಹೊಯ್ಸಳ Vs ಬಲಿ ಆರ್ಭಟಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಚಿತ್ರತಂಡ ಕೂಡ ಸಕ್ಸಸ್ ಸಂಭ್ರಮದಲ್ಲಿದೆ. ಕಥೆ ಹಳೆಯದ್ದೇ ಆದರೂ ಟ್ರೀಟ್‌ಮೆಂಟ್ ಹೊಸದಾಗಿದೆ. ಸಿನಿಮಾ ನೋಡಿದವರ ದಿಲ್‌ಖುಷ್ ಆಗಿದೆ.
'ಗುರುದೇವ್ ಹೊಯ್ಸಳ' ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಇದ್ರು 2ನೇ ದಿನವೇ ಸಿನಿಮಾ ನೋಡಲು ಪ್ರೇಕ್ಷಕರು ಬರ್ತಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ಒಂದ್ಕಡೆ ಎಲೆಕ್ಷನ್ ಕಾವು, ಮತ್ತೊಂದು ಕಡೆ IPL ಫೀವರ್, ಇವೆರಡರ ಜೊತೆ ಎಕ್ಸಾಂ ಟೆನ್ಷನ್ ಕಾಣಿಸ್ತಿದೆ. ಇಂತಹ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡಿದ್ದೇ ತಪ್ಪು, ಇದೇ ಕಾರಣಕ್ಕೆ 'ಗುರುದೇವ್ ಹೊಯ್ಸಳ'ನ ಆರ್ಭಟ ನೋಡಲು ಜನ ಥಿಯೇಟರ್‌ಗೆ ಬರ್ತಿಲ್ಲ ಎನ್ನುವ ವಾದ ಶುರುವಾಗಿದೆ. 'ಗುರುದೇವ್ ಹೊಯ್ಸಳ' ಚಿತ್ರಕ್ಕಿಂತ ತೆಲುಗಿನ 'ದಸರಾ' ಸಿನಿಮಾ ನೋಡಲು ಹೆಚ್ಚು ಜನ ಹೋಗುತ್ತಿದ್ದಾರೆ ಎನ್ನುವ ಮಾತು ಇದೆ.

ಒಂದು ವೇಳೆ IPL, ಎಲೆಕ್ಷನ್ ಕಾರಣಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಬರ್ತಿಲ್ಲ ಎಂದುಕೊಂಡರೂ 'ದಸರಾ' ಚಿತ್ರದ ಬುಕ್ಕಿಂಗ್ ಚೆನ್ನಾಗಿದೆ. ಇದಕ್ಕೆ ಏನು ಹೇಳೋದು ಎನ್ನುವ ವಿಚಾರವೂ ಪ್ರಸ್ತಾಪ ಆಗುತ್ತಿದೆ. ಕನ್ನಡ ಸಿನಿರಸಿಕರು ಯಾಕೆ ಕನ್ನಡ ಸಿನಿಮಾ ನೋಡಲು ಹಿಂದು ಮುಂದು ನೋಡುತ್ತಿದ್ದಾರೆ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಸದ್ಯ ಬುಕ್‌ಮೈ ಶೋನಲ್ಲಿ ಬುಕ್ಕಿಂಗ್ ಹೇಗಿದೆ ಅನ್ನೋದನ್ನು ನೋಡಿದ್ರೆ 'ಗುರುದೇವ್ ಹೊಯ್ಸಳ' ಸಿನಿಮಾ ಕೊಂಚ ಡಲ್ ಆಗಿರೋದು ಕಾಣಿಸ್ತಿದೆ.
ವೀಕೆಂಡ್‌ನಲ್ಲಿ ಸಿನಿಮಾ ಟೇಕಾಫ್ ಆಗುತ್ತೆ ಎನ್ನುವ ಲೆಕ್ಕಾಚಾರವೂ ನಡೀತಿದೆ. ವಿಜಯ್ .ಎನ್ ನಿರ್ದೇಶನದ 'ಗುರುದೇವ್ ಹೊಯ್ಸಳ' ಪಕ್ಕಾ ಪೈಸಾ ವಸೂಲ್ ಸಿನಿಮಾ. ಈ ಕಳ್ಳ- ಪೊಲೀಸ್ ಆಟ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ. ನಟಿ ರಮ್ಯಾ ಕೂಡ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮರ್ಯಾದಾ ಹತ್ಯೆ, ಭೂ ಮಾಫಿಯಾದಂತಹ ವಿಚಾರವನ್ನಿಟ್ಟುಕೊಂಡು ಬಹಳ ಸೊಗಸಾಗಿ ವಿಜಯ್ .ಎನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ಧನಂಜಯ ದರ್ಬಾರ್ ಜೋರಾಗಿದೆ.

ಖಳ ನಾಯಕನಾಗಿ ಕಾಣಿಸಿಕೊಂಡಿರುವ ನವೀನ್ ಶಂಕರ್ ಕೆಲ ದೃಶ್ಯಗಳಲ್ಲಿ ನಾಯಕ ಧನಂಜಯಗೆ ಪೈಪೋಟಿ ಕೊಟ್ಟಿದ್ದಾರೆ. ಫಾಸ್ಟ್ ನರೇಶನ್ ಕೂಡ ಇಷ್ಟವಾಗುತ್ತದೆ. ಇನ್ನು ಅಜನೀಶ್ ಬಿಜಿಎಂ ಮತ್ತೊಂದು ಹೈಲೆಟ್ ಎನ್ನಿಸಿಕೊಂಡಿದೆ. ಸ್ಕ್ರೀನ್‌ಪ್ಲೇ, ಆಕ್ಟಿಂಗ್, ಡೈರೆಕ್ಷನ್, ಮ್ಯೂಸಿಕ್ ಎಲ್ಲಾ ವಿಭಾಗದಲ್ಲೂ ಫಸ್ಟ್ ಕ್ಲಾಸ್ ಎನಿಸಿಕೊಂಡಿರೋ 'ಗುರುದೇವ್ ಹೊಯ್ಸಳ' ಚಿತ್ರ 2ನೇ ದಿನ ಪ್ರೇಕ್ಷಕರ ಬರ ಎದುರಿಸುತ್ತಿದೆ ಎನ್ನುವ ಚರ್ಚೆಗೆ ಪರೋಕ್ಷವಾಗಿ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯಿಸಿದ್ದಾರೆ.
ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಆದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕಾರ್ತಿಕ್ ಗೌಡ "ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ಕಲೆಕ್ಷನ್ ಕೂಡ ಚೆನ್ನಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು 'ಗುರುದೇವ್ ಹೊಯ್ಸಳ' ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. ವೀಕೆಂಡ್‌ನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ.

ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಖುಷಿಯಾಗಿರುವ ನಿರ್ಮಾಪಕರು ನಟ ಧನಂಜಯಗೆ ಕಾರು ಉಡುಗೊರೆ ನೀಡಿದ್ದಾರೆ. ಒಂದು ಕೋಟಿ ರೂ. ಮೌಲ್ಯದ ಟೊಯೊಟೊ ವೆಲ್‌ಫೈರ್ ಕಾರನ್ನು ನಟ ಧನುಗೆ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನೀಡಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಧನಂಜಯ ಹಂಚಿಕೊಂಡಿದ್ದಾರೆ.


Click it and Unblock the Notifications











