ನಿಗೂಢ ಸೆಟ್‌ನಲ್ಲಿ 'ಹೌದ ಹುಲಿಯಾ' ಸಾಂಗ್ ಶೂಟ್: 'ಎಲ್ಲೋ ಜೋಗಪ್ಪ ನಿನ್ನರಮನೆ' ಅಂತಿರೋ 'ಕಂಬ್ಳಿಹುಳ' ಹೀರೊ!
ಶಿವಣ್ಣ ಹಾಗೂ ಪ್ರೇಮ್ ನಿರ್ದೇಶನದ 'ಜೋಗಿ' ಸಿನಿಮಾದ ಹಾಡಿನ ಸಾಲನ್ನೇ ಸಿನಿಮಾ ಟೈಟಲ್ ಆಗಿದೆ. 'ಎಲ್ಲೋ ಜೋಗಪ್ಪ ನಿನ್ನರಮನೆ' ಅಂತ ಟೈಟಲ್ ಇಟ್ಟುಕೊಂಡು ಚಿತ್ರತಂಡವೊಂದು ಶೂಟಿಂಗ್ ಮಾಡುತ್ತಿತ್ತು. ಈ ಸಿನಿಮಾದ ಶೂಟಿಂಗ್ ಈಗ ಸಂಪೂರ್ಣ ಮುಗಿದಿದೆ. ಅದರಲ್ಲೂ ನಿಗೂಢ ಸೆಟ್ ಹಾಕಿ ಮಾಸ್ ಸಾಂಗಿನ ಮೂಲಕವೇ ಸಿನಿಮಾ ಮುಗಿಸಿರೋದು ವಿಶೇಷ.
'ಕಂಬ್ಲಿಹುಳ' ಅನ್ನೋ ಸಿನಿಮಾ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದಅಂಜಯ್ ನಾಗೇಂದ್ರ ಈ ಚಿತ್ರಕ್ಕೆ ಹೀರೊ. 'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾ ಟೈಟಲ್ ಕೇಳಿ ಗ್ರಾಮೀಣ ಸೊಗಡಿನ ಸಿನಿಮಾ ಅಂದುಕೊಳ್ಳಬಹುದು. ಆದರೆ, ಈ ಸಿನಿಮಾದ ಥೀಮ್ ಬೇರೆನೇ ಇದೆ.

ಕಿರುತೆರೆಯಲ್ಲಿ ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಹಯವದನ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, 'ಎಲ್ಲೋ ಜೋಗಪ್ಪ ನಿನ್ನರಮನೆ' ಅಂತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಅನ್ನು ಹಾಡಿನ ಮೂಲಕ ಮುಗಿಸಿದ್ದಾರೆ.
ನಿರ್ದೇಶಕ ಹಯವದನ 'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದರು. ಕೇವಲ ಒಂದು ಹಾಡಿನ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದ್ದರು. ಈಗ ಆ ಹಾಡಿನ ಶೂಟಿಂಗ್ ಕೂಡ ಮುಗಿದಿದ್ದು, ಇತ್ತೀಚೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ.
ವಿಶೇಷ ಅಂದ್ರೆ, ಇದೊಂದು ಮಾಸ್ ಸಾಂಗ್. ಹಾಡಿನ ಸಾಲುಗಳೇ ಸಖತ್ ಕಿಕ್ ಕೊಡುತ್ತಿವೆ. "ಹೌದ ಹುಲಿಯಾ ಹೌದೌದು.." ಎಂದು ಶುರುವಾಗುವ ಸಾಲಿನ ಹಾಡಿಗೆ ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅದ್ಧೂರಿ ಸೆಟ್ ಹಾಕಿದ್ದಾರೆ. ಇದೊಂದು ಮಾಸ್ ಸಾಂಗ್ ಆಗಿದ್ದು, ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್ ಕಂಪೋಸ್ ಮಾಡಿದ್ದಾರೆ. ಅಲ್ಲದೆ ಈ ಮಾಸ್ ಸಾಂಗಿಗೆ ಹೀರೊ ಅಂಜನ್ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.
"ಹೌದ ಹುಲಿಯಾ ಎಂಬ ಮಾಸ್ ಸಾಂಗ್ ಚಿತ್ರೀಕರಣ ನಡೆಸಲಾಗಿದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾ ಬೆಂಗಳೂರಿನಿಂದ ಶುರುವಾಗಿ ಉತ್ತರದ ಕಡೆ ಹೋಗುತ್ತದೆ. ಬಹಳಷ್ಟು ಜಾಗ. ಬಹಳಷ್ಟು ರಾಜ್ಯಗಳಲ್ಲಿ ಶೂಟ್ ಆಗಿದೆ. ಕೊನೆಗೆ ಕಥೆಯ ಮೂಲ ಪಾತ್ರ ಹೋಗಿ ತಲುಪುವುದು ಹಿಮಾಲಯದಲ್ಲಿ. ಅದಕ್ಕೊಂದು ಉದ್ದೇಶ-ಕಾರಣವಿದೆ. ಈ ಚಿತ್ರ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಜನಪದ ಹಾಡಿಗೆ, ಶಿವಣ್ಣ ಜೋಗಿ ಸಿನಿಮಾದ ಹಾಡಿನ ಮೂಲಕ ಖ್ಯಾತಿ ಪಡೆದಿದೆ. ಎರಡನ್ನು ಸಮಜಾಯಿಷಿ ಕೊಟ್ಟು ಆ ಟೈಟಲ್‌ಗೆ ನಮ್ಮ ಕಥೆ ನ್ಯಾಯ ಸಲ್ಲಿಸುತ್ತದೆ ಎಂಬ ನಂಬಿಕೆ ನನಗೆ ಇದೆ" ಎನ್ನುತ್ತಾರೆ ನಿರ್ದೇಶಕ ಹಯವದನ.
ಅಂಜನ್ ನಾಗೇಂದ್ರಗೆ ಕಂಬ್ಳಿ ಹುಳ ಬಳಿಕೆ ಮತ್ತೊಂದು ಜರ್ನಿ ಕಮ್ ಎಮೋಷನಲ್ ಸಿನಿಮಾ ಸಿಕ್ಕಿದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾಗಾಗಿ ಅಂಜನ್ ನಾಗೇಂದ್ರ ಇಡೀ ಇಂಡಿಯಾ ಸುತ್ತಿದ್ದಾರೆ. ಇದೊಂದು ಜರ್ನಿ ಕಥೆ. ಜೊತೆಗೆ ಅಪ್ಪ-ಮಗನ ಬಾಂಧವ್ಯವನ್ನು ಹೇಳುತ್ತದೆ. ಬೆಂಗಳೂರಿನಿಂದ ಶುರುವಾದ ಈ ಜರ್ನಿ ಹಿಮಾಲಯದವರೆಗೂ ಸಾಗುತ್ತೆ. ಹಾಗಾಗಿ ಇದೊಂದು ಯೂತ್‌ಫುಲ್ ಸಿನಿಮಾ ಎನ್ನಬಹುದು.

'ಎಲ್ಲೋ ಜೋಗಪ್ಪ ನಿನ್ನರಮನೆ' ಒಂದೆಳೆ ಕಥೆ ಏನಂದ್ರೆ, ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆಯಾಗಿದೆ. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಈ ಸಿನಿಮಾದಲ್ಲಿದೆ. ಅಂಜನ್ ನಾಗೇಂದ್ರಗೆ ನಾಯಕಿಯಾಗಿ ಯುವ ನಟಿ ವೆನ್ಯ ರೈ ನಟಿಸುತ್ತಿದ್ದಾರೆ. ಈಗಾಗಲೇ ಈಕೆ 'ಕೆಟಿಎಂ', 'ಮೂನ್ ವಾಕ್' ಹಾಗೂ ಮಲಯಾಳಂನಲ್ಲಿ 'ಮನಸ್ಮಿತ' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾವನ್ನು ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ನಿರ್ಮಾಣ ಮಾಡುತ್ತಿದ್ದಾರೆ. ಅಂಜನ್ ನಾಗೇಂದ್ರ ಹಾಗೂ ವೆನ್ಯ ರೈ ಜೊತೆಗೆ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ಈ ಸಿನಿಮಾದಲ್ಲಿದ್ದಾರೆ.


Click it and Unblock the Notifications











