ಪತಿಯನ್ನು ಕಳೆದುಕೊಂಡ ನೋವಿನಲ್ಲಿ ನೀನಾಸಂ ರತ್ನಕ್ಕ; ದರ್ಶನ್ ಭೇಟಿಗೆ ಹರಸಾಹಸ
ನಟ ದರ್ಶನ್ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಹಳೆಯದನ್ನು ಅವರು ಯಾವತ್ತು ಮರೆತ್ತಿಲ್ಲ. ತಮ್ಮವರನ್ನು ಎಂದಿಗೂ ಬಿಟ್ಟುಕೊಡುವ ಮಾತೇಯಿಲ್ಲ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ತಮ್ಮ ಕಂಪ್ಲೀಟ್ ಜೀವನದ ಬಗ್ಗೆ ದರ್ಶನ್ ಮಾತನಾಡಿದ್ದರು. ನೀನಾಸಂನಲ್ಲಿ ಇದ್ದಾಗ ಮೆಸ್ ನಡೆಸುತ್ತಿದ್ದ ರತ್ನಕ್ಕ ಅವರ ಬಗ್ಗೆ ಮನದುಂಬಿ ಮಾತನಾಡಿದ್ದರು.
ಚಿತ್ರರಂಗಕ್ಕೆ ಬರುವ ಮುನ್ನ ನಟ ದರ್ಶನ್ ನೀನಾಸಂನಲ್ಲಿ ನಟನೆ ಕಲಿತಿದ್ದರು. ಅಲ್ಲಿ ಇದ್ದಾಗ ರತ್ನಕ್ಕ ಎನ್ನುವವರು ಮೆಸ್ ನಡೆಸುತ್ತಿದ್ದರು. ದರ್ಶನ್ ಅಲ್ಲಿ ಇದ್ದ ಅಷ್ಟು ದಿನ ಅದೇ ಮೆಸ್‌ನಲ್ಲಿ ಊಟ ಮಾಡುತ್ತಿದ್ದರು. ಹಣ ಕೊಡದೇ ಊಟ ಮಾಡಿದ್ದು ಇದೆ. ತಂದೆ ತೂಗುದೀಪ ಶ್ರೀನಿವಾಸ್ ನಿಧನರಾದಾಗ ಮನೆಗೆ ಬರಲು ಬಸ್ ಚಾರ್ಜ್‌ಗೆ ಹಣ ಇಲ್ಲದೇ ಇದ್ದಾಗ ರತ್ನಕ್ಕ ಸಹಾಯ ಮಾಡಿದ್ದರು. ಈ ಬಗ್ಗೆ ವೀಕೆಂಡ್ ಶೋನಲ್ಲಿ ಮಾತನಾಡಿದ್ದರು.

ಇವತ್ತಿಗೂ ರತ್ನಕ್ಕ ಸಹಾಯವನ್ನು ಮರೆತ್ತಿಲ್ಲ. 'ನವಗ್ರಹ' ಸಿನಿಮಾ ಚಿತ್ರೀಕರಣದ ವೇಳೆ ತಂಡದ ಜೊತೆ ಅವರ ಮನೆಗೆ ಹೋಗಿ ದರ್ಶನ್ ಊಟ ಮಾಡಿ ಬಂದಿದ್ದರು. ರತ್ನಕ್ಕ ಹಾಗೂ ಪತಿ ಶ್ರೀಧರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. 'ಇಕ್ಕೋರ' ಎಂಬ ಸಿನಿಮಾ ಚಿತ್ರ ತಯಾರಿಸಿದ್ದಾರೆ. ಈ ಚಿತ್ರಕ್ಕೆ ಸ್ವತಃ ದರ್ಶನ್ ಕ್ಲಾಪ್ ಮಾಡಿ ಶುಭ ಕೋರಿದ್ದರು. ಇದೀಗ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಸದ್ಯ ನಟ ದರ್ಶನ್ ಭೇಟಿಗೆ ನಿರ್ಮಾಪಕಿ ರತ್ನಕ್ಕ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಾರಣ ಸದ್ಯಕ್ಕೆ ದರ್ಶನ್ ಭೇಟಿಗೆ ಒಪ್ಪುತ್ತಿಲ್ಲವಂತೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗ ಅಲ್ಲಿಗೆ ಹೋಗಿ ಭೇಟಿ ಮಾಡಲು ಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ರತ್ನಕ್ಕ ಮಾತನಾಡಿದ್ದಾರೆ. ಇದೇ ವೇಳೆ ಕ್ಯಾನ್ಸರ್‌ನಿಂದ ತಮ್ಮ ಪತಿ ಶ್ರೀಧರ್ ಅವರನ್ನು ಕಳೆದುಕೊಂಡ ನೋವಿನ ಸಂಗತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.

"ನಟ ದರ್ಶನ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೀನಿ. ಆದರೆ ಅದು ಸಾಧ್ಯವಾಗಿಲ್ಲ. ಅವ್ರು ಭೇಟಿ ಆಗುತ್ತಾರೆ ಎನ್ನುವ ನಂಬಿಕೆ ನನಗಿದೆ. ದರ್ಶನ್‌ಗೆ ಸಂಕಷ್ಟ ಎದುರಾದ ವಿಚಾರ ಗೊತ್ತಾಗಿ ಬಹಳ ನೋವಾಯಿತು. ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೆ. ಆದರೆ ಅಲ್ಲಿ ಭೇಟಿಗೆ ಅವಕಾಶ ಸಿಗಲಿಲ್ಲ. ಬಳಿಕ ದರ್ಶನ್ ಆಸ್ಪತ್ರೆಯಲ್ಲಿದ್ದಾಗ ಭೇಟಿಗೆ ಹೋಗಿದ್ದೆ. ಅಲ್ಲಿಯೂ ಅವಕಾಶ ಸಿಗಲಿಲ್ಲ" ಎಂದು ರತ್ನಕ್ಕ ಹೇಳಿದ್ದಾರೆ.
ದರ್ಶನ್ ಭೇಟಿ ಆಗದೇ ಇದ್ದರೂ ಮುಂದೆ ಭೇಟಿ ಆಗುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ರತ್ನಕ್ಕ ತಿಳಿಸಿದ್ದಾರೆ. "ಆಸ್ಪತ್ರೆಗೆ ಹೋದಾಗ ಭೇಟಿಗೆ ಅವಕಾಶ ಸಿಗಲಿಲ್ಲ. ಆದರೆ ಒಂದು ವಿಚಾರವನ್ನು ತಮ್ಮವರ ಮೂಲಕ ನನಗೆ ತಲುಪಿಸಿದರು. ರತ್ನಕ್ಕ ನನಗೆ ಬಹಳ ಬೇಕಾದವ್ರು. ಅವ್ರು ಇಲ್ಲಿದೆ ಬರೋದು ಬೇಡ. ಮನೆಗೆ ಹೋಗಲು ಹೇಳಿ. ನಾನೇ ಕರೆಸಿಕೊಂಡು ಮಾತನಾಡ್ತೀನಿ ಎಂದು ಆಪ್ತರ ಮೂಲಕ ಹೇಳಿ ಕಳಿಸಿದ್ರು. ಆ ವಿಚಾರ ಕೇಳಿ ಬಹಳ ಸಂತೋಷವಾಯಿತು. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಹೋದ್ರು ಭೇಟಿಗೆ ಅವಕಾಶ ಸಿಗಲಿಲ್ಲ" ಎಂದು ತಿಳಿಸಿದ್ದಾರೆ.
ಇದೇ ವೇಳೆ ಪತಿ ಶ್ರೀಧರ್ ಕ್ಯಾನ್ಸರ್‌ನಿಂದ ಜೀವಬಿಟ್ಟ ವಿಚಾರವನ್ನು ರತ್ನಕ್ಕ ಹೇಳಿಕೊಂಡಿದ್ದಾರೆ. "ನಮ್ಮ ಸಿನಿಮಾ ಚಿತ್ರೀಕರಣ ಮುಗಿದಿತ್ತು. ಕೋವಿಡ್ ಸಂಕಷ್ಟದ ಸಮಯದ ಬಳಿಕ ನಮ್ಮ ಮಕ್ಕಳಿಗೆ ಮದುವೆ ಮಾಡಿದ್ವಿ, ಎಲ್ಲವೂ ಚೆನ್ನಾಗಿ ನಡೀತಿತ್ತು. ಅದೇ ಸಮಯದಲ್ಲಿ ಪತಿಗೆ ಬೆನ್ನು ನೋವಿನ ಸಮಸ್ಯೆ ಶುರುವಾಯಿತು. ಬಳಿಕ ಪರೀಕ್ಷೆ ಮಾಡಿಸಿದಾಗ ಕ್ಯಾನ್ಸರ್ ಇರುವುದು ಗೊತ್ತಾಯಿತು. ಒಂದು ವರ್ಷ ಕಾಲ ಅವರನ್ನು ಆರೈಕೆ ಮಾಡಿದ್ದೆವು. ಆದರೆ ಕೊನೆಗೆ 2022, ಮಾರ್ಚ್ 3ರಂದು ಅವ್ರು ಕೊನೆಯುಸಿರೆಳೆದರು" ಎಂದು ಹೇಳಿ ರತ್ನಕ್ಕ ಭಾವುಕರಾಗಿದ್ದಾರೆ.


Click it and Unblock the Notifications











