ಏನ್ಗೊತ್ತಾ ಐ ಲವ್ ಯೂ, ಅಷ್ಟೇ ; ನಾಚಿ ನೀರಾದ ರಚಿತಾ ರಾಮ್-ಯಾರು ಆ ಅದೃಷ್ಟವಂತ? ಕನಸಿನ ರಾಜಕುಮಾರ ಸಿಕ್ಕಾಯ್ತಾ ?
ಪ್ರೀತಿ ಎನ್ನುವುದು ಗುರು ಇಲ್ಲದೆ ಕಲಿಯುವ ವಿದ್ಯೆ ಎಂದು ಹೇಳುತ್ತಾರೆ. ಯಾರು ಹೇಳಿ ಕೊಡದ ಈ ವಿದ್ಯೆಯನ್ನು ಇಲ್ಲಿಯವರೆಗೆ ಚಿತ್ರರಂಗದಲ್ಲಿ ಹಲವರು ಕಲಿತಿದ್ದಾರೆ. ಪ್ರೀತಿ ಪ್ರೇಮದ ಅಮಲಿನಲ್ಲಿ ತೇಲಿದ್ದಾರೆ. ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎಂದು ಹೇಳುತ್ತಲೇ ಪ್ರೀತಿಯ ಸುಖದ ಕ್ಷಣಗಳನ್ನು ಅನೇಕರು ಗುನುಗಿದ್ದಾರೆ.
ಈ ಸಾಲಿಗೆ ಈಗ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಸೇರಿಕೊಂಡಂತೆ ಇದೆ. ಇದಕ್ಕೆ ಕೈಗನ್ನಡಿಯೇ ವೈರಲ್ ಆದ ವಿಡಿಯೋ. ಹೌದು, ಎಲ್ಲರಿಗೆ ಗೊತ್ತಿರುವಂತೆ ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್.

ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ದರ್ಶನ್ ಸೇರಿ ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ... ಹೀಗೆ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಈ ಹತ್ತು ವರ್ಷಗಳ ಪ್ರಯಾಣದಲ್ಲಿ ಹಲವು ಏರಿಳಿತವನ್ನು ಕೂಡ ಕಂಡಿದ್ದಾರೆ.
ಇಂಥಾ ರಚಿತಾ ರಾಮ್ ಅವರಿಗೆ ಈಗ ವಿಕಿಪೀಡಿಯ ಪ್ರಕಾರ 33 ವರ್ಷ. ಇನ್ನೂ ನಿಮಗೆ ಗೊತ್ತು. ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಹೀಗಿರುವಾಗ ಅಭಿಮಾನಿಗಳಿಗೆ ರಚಿತಾ ರಾಮ್ ಅವರ ಮದುವೆಯ ಚಿಂತೆ ಕಾಡದಿರುತ್ತಾ..? ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಕೆಲ ದಿನಗಳಿಂದ ರಚಿತಾ ರಾಮ್ ಎಲ್ಲಿಯೇ ಹೋಗಲಿ ಅಲ್ಲಿ ಇವರಿಗೆ ಮದುವೆಯ ಕುರಿತ ಪ್ರಶ್ನೆಯನ್ನೇ ಮೊದಲು ಕೇಳಲಾಗುತ್ತಿದೆ.
ರಚಿತಾ ರಾಮ್ ಕೂಡ ಬೇಸರ ಮಾಡಿಕೊಳ್ಳದೇ ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ. ಆದಷ್ಟು ಬೇಗ ಮದುವೆ ಆಗ್ತೀನಿ ಎಂದು ಕೂಡ ಈ ಹಿಂದೆ ಹೇಳಿದ್ದಾರೆ. ಮದುವೆಗೆ ಈ ವರ್ಷ ಪ್ಲ್ಯಾನ್ ಮಾಡುತ್ತಿದ್ದೇನೆ. ಯಾವಾಗ ಆಗಬೇಕೋ ಆವಾಗಲೇ ಅದು ಆಗೋದು. ಯಾರು ನಮ್ಮ ಜೀವನದಲ್ಲಿ ಬರಬೇಕು ಅಂತ ಇರುತ್ತದೋ ಅವರೇ ಬರೋದು ಎಂದು ಹೇಳಿದ್ದ ರಚಿತಾ 100 % ಮನೆಯವರು ಹುಡುಕಿದ ಹುಡುಗನನ್ನೇ ನಾನು ಮದುವೆಯಾಗೋದು ಎಂದು ಕೂಡ ಹೇಳಿದ್ದಾರೆ.
ಹೀಗೆ ರಚಿತಾ ರಾಮ್ ತಮ್ಮ ಮದುವೆಯ ಕುರಿತು ಮಾತುಗಳನ್ನೇನೋ ಆಡಿದ್ದಾರೆ. ಆದರೆ, ಆ ನಂತರ ನಡೆದ ಮತ್ತು ನಡೆಯುತ್ತಿರುವ ಬೆಳವಣಿಗೆಯ ಕುರಿತು ಅಭಿಮಾನಿಗಳಿಗೆ ತಮ್ಮ ಹಿಂಬಾಲಕರಿಗೆ ಮಾಹಿತಿಯನ್ನು ಇನ್ನೂ ರಚಿತಾ ನೀಡಿಲ್ಲ. ಬದಲಿಗೆ ಪ್ರೇಮಿಗಳ ದಿನದಂದು ವಿಡಿಯೋವನ್ನು ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಹೌದು, ಇಂದು (ಫೆಬ್ರವರಿ 14 ) ಪ್ರೇಮಿಗಳ ದಿನದ ಪ್ರಯುಕ್ತ, ರಚಿತಾ ರಾಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು ''ಏನ್ಗೊತ್ತಾ ಐ ಲವ್ ಯೂ ಅಷ್ಟೇ'' ಎಂದಿದ್ದಾರೆ. ನಾಚಿ ನೀರಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಆರು ಗಂಟೆಗಳಲ್ಲಿ 268,000 ಜನ ವಿಡಿಯೋ ಮೆಚ್ಚಿಕೊಂಡಿದ್ದಾರೆ, ಲೈಕ್ ಮಾಡಿದ್ದಾರೆ ಎಂದರೆ ರಚಿತಾ ರಾಮ್ ಅವರ ಮದುವೆ ವಿಚಾರದ ಕುರಿತು ಎಷ್ಟರ ಮಟ್ಟಿಗೆ ಜನ ತಲೆಕೆಡಿಸಿಕೊಂಡಿದ್ದಾರೆ ಎನ್ನುವುದನ್ನು ನೀವೆ ಊಹಿಸಿ.
ಸದ್ಯ ಈ ವಿಡಿಯೋಗೆ ಹಲವರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದು, ರಚಿತಾ ರಾಮ್ ಅವರಿಗೆ ತಮ್ಮ ಕನಸಿನ ರಾಜ್ ಕುಮಾರ್ ಸಿಕ್ಕಂತೆ ಇದೆ ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ರಚಿತಾ ರಾಮ್ ಕೊನೆಗೂ ಲವ್ವಲ್ಲಿ ಬಿದ್ದಿದ್ದಾರಾ..? ಹೇಗೆ..? ಎಂದೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲಿಯೇ ಮದುವೆಯ ಊಟಕ್ಕೆ ರಚಿತಾ ರಾಮ್ ಕರೆಯಬಹುದು ಎಂದು ಕೂಡ ಚರ್ಚೆಯನ್ನು ಮಾಡುತ್ತಿದ್ಧಾರೆ. ನಿಜಕ್ಕೂ ರಚಿತಾ ರಾಮ್ ಅವರಿಗೆ ಅವರ ಕನಸಿನ ರಾಜಕುಮಾರ ಸಿಕ್ಕಿದಾನಾ..? ವಿಡಿಯೋ ಹಿಂದಿನ ಕಥೆ ಏನು ಎನ್ನುವುದನ್ನು ಅವರೇ ಹೇಳಬೇಕಿದೆ.


Click it and Unblock the Notifications











