»   » ಉದಯ ವಿರುದ್ಧ ಅಪರೂಪಕ್ಕೆ ಗೆಲುವು ದಕ್ಕಿ,

ಉದಯ ವಿರುದ್ಧ ಅಪರೂಪಕ್ಕೆ ಗೆಲುವು ದಕ್ಕಿ,

Posted By: Staff
Subscribe to Filmibeat Kannada

ಅಕ್ಟೋಬರ್‌ 15 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಮುಂದೆ ಹೋಗಿರುವುದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿಲ್ಲ . ಅಂತರರಾಷ್ಟ್ರೀಯ ಚಿತ್ರೋತ್ಸವ ರದ್ದಾದ ಕುರಿತು ನಮ್ಮ ಚಿತ್ರಕರ್ಮಿಗಳು ವಿಷಾದಮುಖಿಗಳಿಗಿದ್ದಾರೆಯೇ ಹೊರತು ಪ್ರಶಸ್ತಿ ಪ್ರದಾನ ಸಮಾರಂಭ ಮುಂದೆ ಹೋದ ಕುರಿತು ಯಾರಿಗೂ ಬೇಜಾರು ಇದ್ದಂತಿಲ್ಲ . ಆದರೆ ಈ ಟೀವಿ ಬಳಗ ಮಾತ್ರ ಕೊಂಚ ಬೇಜಾರಿನಲ್ಲಿದೆ. ಕಾರಣ ಇಷ್ಟು-

ಆಲದಂತೆ ಬಿಳಲುಗಳನ್ನು ಇಳಿಸಿಕೊಂಡು ಕರ್ನಾಟಕದಲ್ಲಿ ತಳ ಕಂಡಿರುವ ತಮಿಳು ಮೂಲದ ಉದಯ ಟೀವಿ ಹಾಗೂ ನೆಲೆ ಕಂಡುಕೊಳ್ಳಲು ಪ್ರಬಲ ಸವಾಲು ಒಡ್ಡುತ್ತಿರುವ ತೆಲುಗಿನ ರಾಮೋಜಿ ಕ್ಯಾಂಪ್‌ನ ಈಟಿವಿ ನಡುವಿನ ಜಟಾಪಟಿ ಆಗಾಗ್ಗೆ ನಡೆಯುತ್ತಿರುವಂತದ್ದೇ. ಇಂಥ ಒಂದು ಜಟಾಪಟಿಯಲ್ಲಿ ಈಟಿವಿಗೆ ಅಪರೂಪಕ್ಕೆ ನಗುವ ಅವಕಾಶ ಸಿಕ್ಕಿತ್ತು . ಇಂಥಾ ಅವಕಾಶ ಮುಂದೆ ಹೋದರೆ ಬೇಜಾರಾಗುವುದು ಸಹಜವಲ್ಲವಾ!

'ಈ" ಹಾಗೂ 'ಉದಯ"ಗಳಿಗೆ ಇನ್ನೊಮ್ಮೆ ಕಿತ್ತಾಡುವ ವೇದಿಕೆಯನ್ನು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಒದಗಿಸಿತ್ತು . ಈ ತಾರಾ ಪ್ರತಿಷ್ಠಿತ ಸಮಾರಂಭದ ನೇರ ಪ್ರಸಾರದ ಹಕ್ಕುಗಳನ್ನು ಗಿಟ್ಟಿಸಿಕೊಳ್ಳುವ ವಿಷಯ ಉಭಯ ಚಾನಲ್‌ಗಳ ನಡುವೆ ದೊಡ್ಡ ಸ್ಪರ್ಧೆಯನ್ನೇ ಉಂಟುಮಾಡಿತ್ತು . ಗೆಲುವಿನ ನಗು ಸಿಕ್ಕಿದ್ದದ್ದು 'ಈ" ಪಾಲಿಗೆ.

ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಗುಟ್ಟಾಗಿ ಮಡಿಲಿಗೆ ಹಾಕಿಕೊಳ್ಳುವ ಉದಯ ಟಿವಿಯ ಜಾಣತನ ಹೊಸತೇನೂ ಅಲ್ಲ . ವೀರಪ್ಪನ್‌ ಸೆರೆಯಿಂದ ರಾಜ್‌ ಬಿಡುಗಡೆಯಾಗಿ ಹೊರಬಂದಾಗ ನಡೆದ ಧನ್ಯಮಿಲನ ಕಾರ್ಯಕ್ರಮದ ಪ್ರಸಾರ ಹಕ್ಕುಗಳ ಕುರಿತು ದೊಡ್ಡದೊಂದು ವಿವಾದವೇ ನಡೆದಿತ್ತು . ಪ್ರಸಾರದ ಹಕ್ಕುಗಳನ್ನು ಗುಟ್ಟಾಗಿ ಉದಯಕ್ಕೆ ನೀಡಿದ ಸರ್ಕಾರದ ತೀರ್ಮಾನವನ್ನು ಇತರ ಖಾಸಗಿ ವಾಹಿನಿಗಳು ಗಟ್ಟಿದನಿಯಲ್ಲಿ ಪ್ರತಿಭಟಿಸಿದ್ದವು. ಇಂಥ ಉದಾಹರಣೆಗಳು ಧನ್ಯಮಿಲನಕ್ಕೇ ಸೀಮಿತವಲ್ಲ . ಕೆಲವೊಂದು ಕಾರ್ಯಕ್ರಮಗಳ ಚಿತ್ರೀಕರಣ ಕಾರ್ಯಕ್ರಮಗಳಲ್ಲಿ ವಾಹಿನಿಗಳ ಸಿಬ್ಬಂದಿ ಮೈಕು ಕ್ಯಾಮರಾಗಳನ್ನು ಆಯುಧಗಳಂತೆ ಬಳಸಿ ಯುದ್ಧಕ್ಕೆ ಇಳಿದಿದ್ದೂ ಉಂಟು. ಇಂಥ ಸಂದರ್ಭದಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಹಕ್ಕುಗಳು ಈ ಮಡಿಲಿಗೆ ಬಿದ್ದಿರುವ ವಿಷಯಕ್ಕೆ ವಿಶೇಷ ಮಹತ್ವವಿದೆ.

ಈ ಪಾಲಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಹಕ್ಕುಗಳು ಸುಖಾಸುಮ್ಮನೆಯೇನೂ ದಕ್ಕಿಲ್ಲ . ಸರ್ಕಾರಕ್ಕೆ 10. 5 ಲಕ್ಷ ರುಪಾಯಿಗಳನ್ನು ಕಕ್ಕಿದ ಮೇಲೆಯೇ ಈ ಟೀವಿಗೆ ಹಕ್ಕುಗಳನ್ನು ದಯಪಾಲಿಸಲಾಯಿತು. ಈ ಮೂಲಕ ಮೊದಲ ಬಾರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಸರ್ಕಾರ ಆದಾಯವನ್ನು ಕಾಣುವಂತಾಯಿತು.

ನವಂಬರ್‌ ಮೂರನೇ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಿರೀಕ್ಷೆಯಿದೆ. ಇಡೀ ರಾಜ್ಯದ ಗಮನ ಸೆಳೆಯುವ ಅವಕಾಶವೊಂದಕ್ಕಾಗಿ ಈ ಟೀವಿ ಕಾದಿದೆ.

English summary
Karnataka film award giving celebrations postponement : E TV is not happy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada