"ನನ್ನ 'ಒಂದು ಸರಳ ಪ್ರೇಮಕಥೆ' ನೋಡದಿದ್ದರೂ ಈ ಸಿನಿಮಾ ನೋಡಿ": ಸುನಿ
ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರಲ್ಲ ಎನ್ನುವ ಆರೋಪದ ನಡುವೆ ಒಳ್ಳೆ ಸಿನಿಮಾ ಬಂದರೆ ಜನ ನೋಡುವುದಿಲ್ಲ ಎನ್ನುವ ವಾದವೂ ಇದೆ. ಕಳೆದ ವಾರದ ಕನ್ನಡದಲ್ಲಿ ಐದಾರು ಸಿನಿಮಾಗಳು ಬಿಡುಗಡೆ ಆಗಿತ್ತು. ಶಿವಣ್ಣ- ಪ್ರಭುದೇವ ನಟನೆಯ 'ಕರಟಕ ದಮನಕ' ಜೊತೆಗೆ ಜಗ್ಗೇಶ್ 'ರಂಗನಾಯಕ'ನಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ 'ರಂಗನಾಯಕ' ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದ್ದಾನೆ. ಗುರುಪ್ರಸಾದ್ ಹಾಗೂ ಜಗ್ಗೇಶ್ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೆ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಎರಡು ಸಿನಿಮಾಗಳ ಜೊತೆಗೆ ಹೊಸಬರ 'ಬ್ಲಿಂಕ್' ಎನ್ನುವ ಸಿನಿಮಾ ಕೂಡ ರಾಜ್ಯದಲ್ಲಿ ತೆರೆಕಂಡಿದೆ. ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿ ಮಾತನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ ಇಷ್ಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ. ನಿರ್ದೇಶಕ ಸಿಂಪಲ್ ಸುನಿ ಕೂಡ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಶ್ರೀನಿಧಿ ಬೆಂಗಳೂರು ನಿರ್ದೇಶನದ 'ಬ್ಲಿಂಕ್' ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಥೆ, ಚಿತ್ರಕಥೆ, ನಿರೂಪಣೆ, ಕಲಾವಿದರ ಅಭಿನಯ, ಸಂಗೀತ ಹೀಗೆ 'ಬ್ಲಿಂಕ್' ಚಿತ್ರದ ಪ್ರತಿ ವಿಭಾಗದ ಬಗ್ಗೆ ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಆಧರಿಸಿ ವಿಭಿನ್ನ ರೀತಿಯಲ್ಲಿ 'ಬ್ಲಿಂಕ್' ಸಿನಿಮಾ ಕಟ್ಟಿಕೊಡಲಾಗಿದೆ.
"ಬ್ಲಿಂಕ್ ಸಿನಿಮಾ ನೋಡ್ದೆ. ಚಿತ್ರತಂಡ ನನ್ನನ್ನು ಆಹ್ವಾನಿಸಲಿಲ್ಲ. ನಾನು ಸಾಮಾನ್ಯ ಪ್ರೇಕ್ಷಕನಾಗಿಯೇ ಬಂದು ಸಿನಿಮಾ ವೀಕ್ಷಿಸಿದೆ. ಅಷ್ಟರ ಮಟ್ಟಿಗೆ ಸಿನಿಮಾ ಬಗ್ಗೆ ಒಳ್ಳೆಯ ರಿಪೋರ್ಟ್ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟವಾಯಿತು. ಈ ವಿಚಾರವನ್ನು ಖಾರವಾಗಿ ಹೇಳುತ್ತಿದ್ದೇನೆ ಎಂದುಕೊಂಡರೂ ಪರವಾಗಿಲ್ಲ, ಈ ಸಿನಿಮಾ ಮಲಯಾಳಂನಲ್ಲಿ ಬಂದಿದ್ದರೆ ಇಷ್ಟೊತ್ತಿಗೆ ಕನ್ನಡವರು ಬಂದು ನೋಡುತ್ತಿದ್ದರು. ಕನ್ನಡದಲ್ಲಿ ಬಂದಿರುವುದಕ್ಕೆ ಕನ್ನಡಿಗರು ಬರುತ್ತಿಲ್ಲ ಎನಿಸುತ್ತಿದೆ" ಎಂದಿದ್ದಾರೆ.
"ಬುಕ್ ಮೈ ಶೋ ನೋಡಿದಾಗ ವ್ಯತ್ಯಾಸ ಗೊತ್ತಾಗುತ್ತದೆ. ಇಷ್ಟ ಆಗುವುದು ಬಿಡುವುದು ಬೇರೆ. ಆದರೆ ಇಂತಹ ಒಳ್ಳೆಯ ಪ್ರಯತ್ನ ಆದಾಗ ನಾವೆಲ್ಲಾ ಬಂದು ನೋಡಲೇಬೇಕು. ತುಂಬಾ ಜನ ಹೇಳ್ತಾರೆ ಒಳ್ಳೆ ಬಂದಿಲ್ಲ ಅಂತ. ನೀವು ಕೂಡ ಕನ್‌ಫ್ಯೂಸ್ ಆಗಿರುತ್ತೀರಾ. ಯಾಕೆಂದರೆ ಎಲ್ಲಾ ಸಿನಿಮಾ ಚೆನ್ನಾಗಿದೆ ಅಂತ ಹೇಳ್ತೀವಿ. ನೋಡಿದ ಮೇಲೆ ಗೊತ್ತಾಗುತ್ತದೆ. ಆದರೆ ಈ ಸಿನಿಮಾ ಎಲ್ಲರೂ ನೋಡಲೇಬೇಕು"
"ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ 10, 20 'ಬ್ಲಿಂಕ್' ಚಿತ್ರದ ಶೋಗಳು 100, 200 ಶೋಗಳು ಆಗಬೇಕು. ನೀವೆಲ್ಲಾ ಹೋಗಿ ಸಿನಿಮಾ ನೋಡಲೇಬೇಕು. 'ಒಂದು ಸರಳ ಪ್ರೇಮಕಥೆ' ನೋಡದೇ ಇದ್ದರೂ ಪರವಾಗಿಲ್ಲ ಈ ಸಿನಿಮಾ ನೋಡಿ" ಎಂದು ನಿರ್ದೇಶಕ ಸುನಿ ಮನವಿ ಮಾಡಿದ್ದಾರೆ.
ಸದ್ಯ ಸುನಿ ಹೇಳಿಕೆ ವೈರಲ್ ಆಗುತ್ತಿದೆ. ತನ್ನದೇ 'ಒಂದು ಸರಳ ಪ್ರೇಮಕಥೆ' ನೋಡದೇ ಇದ್ದರೂ ಪರವಾಗಿಲ್ಲ, 'ಬ್ಲಿಂಕ್' ನೋಡಿ ಎಂದಿದ್ದು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸುನಿ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದೆ. 4 ವಾರದ ಹಿಂದೆ 'ಒಂದು ಸರಳ ಪ್ರೇಮಕಥೆ' ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ವಿನಯ್ ರಾಜ್‌ಕುಮಾರ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ.


Click it and Unblock the Notifications











