"ಬೂಟು ನೆಕ್ಕುವುದು ನಿಲ್ಲಿಸಿ.. ನಿಮಗೆ ಅಸಲಿ ವಿಚಾರ ಗೊತ್ತಾ?" ರಶ್ಮಿಕಾಗೆ ಅಂಜಲಿ ನಿಂಬಾಳ್ಕರ್, ಆದಿತ್ಯ ಠಾಕ್ರೆ ಗುದ್ದು
ಲೋಕಸಭೆ ಚುನಾವಣೆ ಸಮಯದಲ್ಲಿ ನಟಿ ರಶ್ಮಿಕಾ ಮಂದಣ್ಣ ಮುಂಬೈನ ಅಟಲ್ ಸೇತು ಹಾಗೂ ದೇಶದ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಆಕೆ ಮಾತನಾಡಿರುವ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ವಿರುದ್ಧ ಹಲವರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಮಾಜಿ ಸಚಿವೆ ಡಾ. ಅಂಜಲಿ ನಿಂಬಾಳ್ಕರ್ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ. "ಬೂಟು ನೆಕ್ಕುವುದನ್ನು ನಿಲ್ಲಿಸಿ, ಇದು ನಿಮ್ಮನ್ನು ಮೆಗಾಸ್ಟಾರ್ ಮಾಡಲು ಸಹಾಯ ಮಾಡಲ್ಲ" ಎಂದು ಆಕ್ರೋಶ ಹೊರ ಹಾಕಿದ್ದಾರೆ. "ಬುಲೆಟ್ ರೈಲಿನ ಬಗ್ಗೆ ನಿಮಗೆ ಏನಾದರೂ ಹೇಳಲು ಇದೆಯೇ? ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್: ತಯಾರಿಕೆಯಲ್ಲಿ ಏನೆಲ್ಲಾ ಆಯ್ತು ಹೇಳ್ತೀರಾ?" ಎಂದು ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ಕೂಡ ರಶ್ಮಿಕಾ ಮಂದಣ್ಣ ಪೋಸ್ಟ್ ಬಗ್ಗೆ ಕಿಡಿಕಾರಿದ್ದಾರೆ. ಮಹಾರಾಷ್ಟ್ರದ ಮಾಜಿ ಸಚಿತ ಆದಿತ್ಯಾ ಠಾಕ್ರೆ ಕೂಡ ರಶ್ಮಿಕಾ ಮಂದಣ್ಣ ವಿರುದ್ದ ಹರಿಹಾಯ್ದಿದ್ದಾರೆ. ಆಕೆಯ ಹೆಸರು ಪ್ರಸ್ತಾಪಿಸದೇ ಟ್ವೀಟ್ ಮಾಡಿದ್ದಾರೆ. "ಪ್ರಸ್ತುತ ಸರ್ಕಾರದ ಆಡಳಿತದಿಂದ ಅಟಲ್ ಸೇತು ಎಂದು ಬ್ರಾಂಡ್ ಮಾಡಲಾದ MTHL ನಲ್ಲಿ ನಟರೊಬ್ಬರು ಇದ್ದಕ್ಕಿದ್ದಂತೆ ಜಾಹೀರಾತನ್ನು (ಇದಕ್ಕೆ ಹಣ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ) ಮಾಡುವುದನ್ನು ನಾನು ನೋಡಿದೆ" ಎಂದು ಆದಿತ್ಯಾ ಟ್ವೀಟ್ ಆರಂಭಿಸಿದ್ದಾರೆ.
ಅಟಲ್ ಸೇತು ಬಗ್ಗೆ ಕೆಲವು ಸತ್ಯಗಳು ಗೊತ್ತಿಲ್ಲ. ಅದನ್ನು ಹೇಳಬೇಕು.
1. ಅಟಲ್ ಸೇತು- MTHLನ 85% ಕೆಲಸವು ಜೂನ್ 2022 ರವರೆಗೆ ಪೂರ್ಣಗೊಂಡಿತು, ಆಗ ನಮ್ಮ ಸರ್ಕಾರವನ್ನು ಪತನಗೊಳಿಸಲಾಯಿತು. ಎಂವಿಎ ಸರ್ಕಾರದ ಅವಧಿಯಲ್ಲಿ ಈ ಕೆಲಸ ನಡೆದಿದೆ.

2. ಬಿಜೆಪಿ ನೇತೃತ್ವದ ಖೋಕ್ ಸರ್ಕಾರ್ 2022 ರಿಂದ 2024 ರವರೆಗೆ ಉಳಿದ 15% ಕೆಲಸ ಅನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಂಡಿತು. ನಂತರ ಉದ್ದೇಶಪೂರ್ವಕವಾಗಿ ಉದ್ಘಾಟನೆಯನ್ನು ವಿಳಂಬಗೊಳಿಸಿತು.
3. ಬಜೆಪಿ ನೇತೃತ್ವದ ಆಡಳಿತಾವಧಿಯಲ್ಲಿ MTHL ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಿದ 3 ತಿಂಗಳ ನಂತರ ಉದ್ಘಾಟಿಸಿತು. ಏಕೆಂದರೆ ಅವರಿಗೆ ವಿಐಪಿ ಉದ್ಘಾಟನಾ ದಿನಾಂಕಗಳು ಸಿಗಲಿಲ್ಲ ಈ ಮೂಲಕ ಮುಂಬೈನ ಪ್ರಗತಿಯನ್ನು ತಡೆಹಿಡಿಯಿತು.
ಕೊನೆಯಲ್ಲಿ ಆಕೆ ಎಚ್ಚೆತ್ತುಕೊಂಡು ಅಭಿವೃದ್ಧಿಗೆ ಮತ ಹಾಕಿ ಎಂದು ಹೇಳಿದ್ದಾರೆ. ಅದು ಒಳ್ಳೆಯದು, ಏಕೆಂದರೆ ಬಿಜೆಪಿಗೆ ಮತ ಹಾಕಬೇಡಿ ಎಂದರ್ಥ.
ಅಂತಹ ಪ್ರಚಾರಗಳನ್ನು ಮಾಡುತ್ತಿರುವ ಎಲ್ಲರಿಗೂ ಒಂದು ವಿನಮ್ರ ವಿನಂತಿ. ದಯವಿಟ್ಟು ಶೂಟಿಂಗ್‌ಗೆ ಮೊದಲು ವಾಸ್ತವವನ್ನು ಪರಿಶೀಲಿಸಿ. ಕೆಲವು ಪಕ್ಷಗಳು ಕಲಾವಿದರನ್ನು "ವಾರ್ ರುಖ್ವಾ ದಿ" ಮಾದರಿಯ ಜಾಹೀರಾತುಗಳನ್ನು ಮಾಡುವಂತೆ ಮಾಡುತ್ತಿವೆ" ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯಾ ಠಾಕ್ರೆ ಬರೆದುಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಟಲ್ ಸೇತುವೆ ಬಗ್ಗೆ ಪ್ರಯಾಣಿಸುತ್ತಾ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದರು. ರಶ್ಮಿಕಾ ಅವರು ಕಾರಿನಲ್ಲಿ ಹೋಗುವಾಗ ಅಟಲ್ ಸೇತು ಬಗ್ಗೆ ಮಾತನಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. "ಈ ಪ್ರಯಾಣ ಉತ್ತಮ ಅನುಭವ ನೀಡುತ್ತದೆ. 2 ಗಂಟೆಗಳ ಪ್ರಯಾಣವನ್ನು ಈ ಸೇತುವೆ 2 ನಿಮಿಷಕ್ಕೆ ಇಳಿಸಿದೆ. ವಿಕಸಿತ ಭಾರತಕ್ಕೆ ಈ ಸೇತುವೆ ಕನ್ನಡಿ ಹಿಡಿದಂತಿದೆ ಎಂದಿದ್ದರು.
ರಶ್ಮಿಕಾ ವಿಡಿಯೋವನ್ನು ಪ್ರಧಾನಿ ಮೋದಿ ಶೇರ್ ಮಾಡಿ "ಜನರ ಜೀವನವನ್ನು ಸಂಪರ್ಕಿಸುವುದು ಮತ್ತು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಯಾವುದು?" ಎಂದು ಬರೆದುಕೊಂಡಿದ್ದರು. ಇದನ್ನು ನೋಡಿ ಇದು ಸಂಪೂರ್ಣವಾಗಿ ಬಿಜೆಪಿ ಪ್ರಚಾರದಂತೆ ಕಾಣುತ್ತದೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು.


Click it and Unblock the Notifications











