'ಜೋಡೆತ್ತು'ಗಳು ಎಲ್ಲಿವೆ? ದರ್ಶನ್-ಯಶ್ ವಿರುದ್ಧ ಗುಡುಗಿದ ಮಾಜಿ ಸಂಸದ
Recommended Video
ಮಂಡ್ಯ ಅಖಾಡದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಜೋಡೆತ್ತುಗಳ ವಿರುದ್ಧ ಮಂಡ್ಯ ಮಾಜಿ ಸಂಸದ ಶಿವರಾಮೇ ಗೌಡ ಅವರು ಮತ್ತೆ ಗುಡುಗಿದ್ದಾರೆ.
ಕಳೆದ ಲೋಕಸಭೆಯ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸ್ಪರ್ಧಿಗಳಿಂತ ಹೆಚ್ಚು ಸದ್ದು ಮಾಡಿದ್ದು ಜೋಡೆತ್ತು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಪರ ಪ್ರಚಾರದ ಜವಾಬ್ದಾರಿ ವಹಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್, ಅಂಬಿ ಪತ್ನಿಯನ್ನ ಗೆಲ್ಲಿಸಿದ್ದರು.
ಜೋಡೆತ್ತುಗಳ ಅಬ್ಬರದ ಪ್ರಚಾರ ಮತ್ತು ಸುಮಲತಾ ಅಂಬರೀಶ್ ಮೊಳಗಿಸಿದ ಸ್ವಾಭಿಮಾನದ ಕೂಗಿಗೆ ಜನ ಮತ ನೀಡಿದ್ದರು. ಇದರ ಪರಿಣಾಮ ನಿಖಿಲ್ ಕುಮಾರ್ ವಿರುದ್ಧ ಸುಮಲತಾ ಭರ್ಜರಿ ಜಯ ದಾಖಲಿಸಿದರು.
ಸುಮಲತಾ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಜೋಡೆತ್ತುಗಳು ರಾಜಕೀಯವಾಗಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಕೋಪ ಇನ್ನು ಕಮ್ಮಿ ಆಗಿಲ್ಲ. ಅಷ್ಟಕ್ಕೂ, ಶಿವರಾಮೇ ಗೌಡರು ಈಗ್ಯಾಕೆ ಜೋಡತ್ತುಗಳ ವಿರುದ್ಧ ಕಿಡಿಕಾರಿದರು. ಮುಂದೆ ಓದಿ....

ಎಲ್ಲಿದ್ದಾರೆ ಸಂಸದರು?
''ಕಳೆದ ಚುನಾವಣೆಯಲ್ಲಿ ಜನರನ್ನ ಕೇಳಿಕೊಂಡೆವು. ಮಣ್ಣಿನ ಮಗ, ನಮಗೆ ಒತ್ತಾಸೆಯಾಗಿರುವ ಕುಮಾರಸ್ವಾಮಿ ಅವರ ಕೈ ಬಿಡಬೇಡಿ ಅಂತ. ಆದರೆ ಒಂದು ವರ್ಗದ ಜನರು ಸ್ವಾಭಿಮಾನಕ್ಕೆ ಮತ ಕೊಡಿ ಎಂದು ಹೋರಾಟ ಮಾಡಿ ಸಂಸದರನ್ನ ಗೆಲ್ಲಿಸಿಕೊಟ್ಟರು. ಈಗ ರೈತರು ಕಣ್ಣಿರು ಹಾಕುತ್ತಿದ್ದಾರೆ'' ಎಂದು ಸುಮಲತಾ ವಿರುದ್ಧ ಮಾಜಿ ಸಂಸದ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಿ ಆ ಜೋಡೆತ್ತು?
''ರೈತರು ಬೆಳೆದಿರುವ ಕಬ್ಬಿಗೆ ಸರಿಯಾದ ಬೆಲೆ ಕೊಟ್ಟಿಲ್ಲ ಅಂದ್ರೆ, ಬೆವರು ಸುರಿಸಿ ಬೆಳೆದ ಎಲ್ಲ ಬೆಳೆಯನ್ನು ಬೆಂಕಿಗೆ ಆಹುತಿ ನೀಡಬೇಕಾಗುತ್ತೆ ಅಷ್ಟೇ. ಇಡೀ ಮಂಡ್ಯ ಉದ್ದಗಲಕ್ಕೂ ಎರಡು ಜೋಡಿ ಎತ್ತುಗಳು ನಾವಿದ್ದೀವಿ ಎಂದು ಪ್ರಚಾರ ಮಾಡಿದ್ವು. ಈಗ ಎಲ್ಲಿವೆ ಅವು. ಕರೆದುಕೊಂಡು ಬನ್ನಿ ನಿಮ್ಮ ಸಂಸದರನ್ನ, ಸಭೆ ಮಾಡಿ ರೈತರ ಸಮಸ್ಯೆಗೆ ಪರಿಹಾರ ಕೊಡಿಸಿ'' ಎಂದು ಪ್ರಶ್ನಿಸಿದ್ದಾರೆ.

ಆಗಲೂ ಜೋಡೆತ್ತು ಟಾರ್ಗೆಟ್
ಚುನಾವಣೆ ವೇಳೆಯಲ್ಲೂ ಜೋಡೆತ್ತುಗಳು ಟಾರ್ಗೆಟ್ ಆಗಿದ್ದರು. ನಟ ಯಶ್ ಮತ್ತು ದರ್ಶನ್ ಇಬ್ಬರ ವೈಯಕ್ತಿಕ ವಿಷಯಗಳ ಬಗ್ಗೆ ಟೀಕೆ, ನಿಂದನೆ ಎದುರಾಗಿದ್ದವು. ಸ್ವತಃ ಶಿವರಾಮೇಗೌಡರೇ ಯಶ್ ಮತ್ತು ದರ್ಶನ್ ವಿರುದ್ಧ ಹಲವು ರೀತಿ ದಾಳಿ ಮಾಡಿದ್ದರು.

ಜೋಡೆತ್ತುಗಳು ಗಮನ ಕೊಡಬೇಕಿದೆ
ಶಿವರಾಮೇಗೌಡರ ಆರೋಪ ಮತ್ತು ಆಕ್ರೋಶವನ್ನ ಒಂದು ಕಡೆ ಇಟ್ಟು ನೋಡಿದ್ರೆ, ದರ್ಶನ್ ಮತ್ತು ಯಶ್ ಇಬ್ಬರು ಮಂಡ್ಯ ರೈತರ ಸಮಸ್ಯೆ ಬಗ್ಗೆ ಗಮನ ಕೊಡಬೇಕಿದೆ. ಮಂಡ್ಯದಲ್ಲಿ ಯಾವುದೇ ವಿಚಾರದಲ್ಲೂ ಸಮಸ್ಯೆಗಳು ಉಂಟಾದರೂ ''ಚುನಾವಣೆ ವೇಳೆಯಲ್ಲಿ ತಾವು ಕೊಟ್ಟ ಮಾತಿನಂತೆ ಸಂಸದರಿಂದ ಕೆಲಸ ಮಾಡಿಸಬೇಕಾದ ಅನಿವಾರ್ಯತೆ ಮತ್ತು ಜವಾಬ್ದಾರಿ'' ಇದೆ ಎನ್ನುವುದನ್ನ ಅಲ್ಲೆಗಳೆಯುವಂತಿಲ್ಲ.


Click it and Unblock the Notifications











