ನನ್ನ ಬೆಳವಣಿಗೆ ಸಹಿಸದೇ ನನ್ನ ವಿರುದ್ದ ಷಡ್ಯಂತ್ರ ಮಾಡ್ತಿದ್ದಾರೆ - ದಿವ್ಯಾ ವಸಂತ..!
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಹೀಗಾಗಿಯೇ ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತದಲ್ಲಿ ಅನೇಕರು ಥರ ಥರಹದ ವೇಷವನ್ನು ಇಲ್ಲಿ ಹಾಕುತ್ತಾರೆ. ಮೋಸ ಮಾಡಲು ಹೊಸ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ.
ಇದರ ನಡುವೆ ಪ್ರಾಮಾಣಿಕವಾಗಿ ಬದುಕುವ ಹಲವಾರು ಜನ ತಮ್ಮ ಸಂಘರ್ಷವನ್ನು ಮುಂದುವರೆಸಿರುತ್ತಾರೆ. ಮೋಸ-ವಂಚನೆ-ನಂಬಿಕೆ ದ್ರೋಹ ಎಲ್ಲವನ್ನು ಎದುರಿಸಿ ಬದುಕು ದೂಡುವ ಪ್ರಯತ್ನ ಮಾಡುತ್ತಿರುತ್ತಾರೆ. ಮಾನ-ಮರ್ಯಾದೆಗೆ ಅಂಜಿ ಬಾಳುತ್ತಾರೆ.

ಕನ್ನಡದ ಖ್ಯಾತ ನಿರೂಪಕಿ ದಿವ್ಯಾ ವಸಂತ ಈ ಎರಡು ಸಾಲಿನಲ್ಲಿ ಯಾವ ಸಾಲಿನಲ್ಲಿ ನಿಲ್ಲುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ತಮ್ಮ ಮೇಲೆ ಬಂದಿರುವ ಆರೋಪದ ಕುರಿತು ದಿವ್ಯಾ ವಸಂತ ಮಾತನಾಡಿದ್ದಾರೆ. ನನ್ನ ಬೇಕು ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹೌದು, ಅಸಲಿಗೆ ಕಳೆದ ವರ್ಷ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ದಿವ್ಯಾ ವಸಂತ ವಿರುದ್ಧ ಈ ವರ್ಷ ಬ್ಲ್ಯಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಕರುನಾಡಿನ ಪ್ರಖ್ಯಾತ ಆನಂದ ಗುರೂಜಿ ಕಾರು ಅಡ್ಡಗಟ್ಟಿ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡಿರುವ ಆರೋಪವನ್ನು ಸದ್ಯ ದಿವ್ಯಾ ವಸಂತ ಅವರ ಮೇಲೆ ಹೊರಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆನಂದ ಗುರೂಜಿ ದೂರನ್ನು ಕೂಡ ದಾಖಲಿಸಿದ್ದು
ಕೋರ್ಟ್ನಿಂದ ತಡೆಯಾಜ್ಞೆ ತಂದರೂ ನಿಮ್ಮ ಸೆ*ಕ್ಸ್ ವಿಡಿಯೋ ಇದೆ ಎಂದು ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ.
ಆನಂದ್ ಗುರೂಜಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೃಷ್ಣ ಮೂರ್ತಿ { A1} ಮತ್ತು ದಿವ್ಯಾ ವಸಂತ {A2 } ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದಾರೆ. ಇದರ ನಡುವೆ ಇದೀಗ ನಿಮ್ಮ ಫಿಲ್ಮಿಬೀಟ್ ಕನ್ನಡಗೆ ದಿವ್ಯಾ ವಸಂತ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಮಾಡಲಾದ ಆರೋಪಗಳ ಕುರಿತು ಮಾತನಾಡಿದ್ದಾರೆ.
ಈ ಕುರಿತು ಫಿಲ್ಮಿಬೀಟ್ ಕನ್ನಡಗೆ ಮಾತನಾಡಿರುವ ದಿವ್ಯಾ ವಸಂತ ನನ್ನ ಬೆಳವಣಿಗೆಯನ್ನು ಸಹಿಸಲಾಗದೇ ಮಾಧ್ಯಮದವರೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆನಂದ್ ಗುರೂಜಿ ಅವರಿಗೆ ನಾನು ಬ್ಲ್ಯಾಕ್ ಮೇಲ್ ಮಾಡಿಲ್ಲ ಅವರನ್ನು ನಾನು ನಿಂದಿಸಿಯೂ ಇಲ್ಲ ಎಂದು ಹೇಳಿರುವ ದಿವ್ಯಾ ವಸಂತ ಈ ಪ್ರಕರಣದ ನಂತರ ನಾನು ಹಲವಾರು ಸಂದರ್ಶನಗಳಲ್ಲಿ ಆನಂದ್ ಗುರೂಜಿ ಅವರನ್ನು ನೇರವಾಗಿಯೇ ಈ ಕುರಿತು ಪ್ರಶ್ನೆ ಮಾಡಿದ್ದೇನೆ ಆದರೆ ಆ ಪ್ರಶ್ನೆಗೆ ಉತ್ತರ ನೀಡದ ಆನಂದ್ ಗುರೂಜಿ ವಿಚಾರವನ್ನು ಡೈವರ್ಟ್ ಮಾಡುತ್ತಿದ್ಧಾರೆ ಎಂದು ಹೇಳಿದ್ದಾರೆ. ಮಾಧ್ಯಮದವರು ತಮ್ಮ ಟಿಆರ್‌ಪಿಗಾಗಿ ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
2024ರಲ್ಲಿ ನನ್ನ ಬದುಕಿನಲ್ಲಿ ಏನೇನೋ ಆಯ್ತು ಇದರಿಂದ ನಾನು ನೊಂದು ಬೆಂದು ಹೋಗಿದ್ದೇ ಇದೆ ಸಮಯದಲ್ಲಿ ನನಗೆ ಸಾಮ್ರಾಟ್ ನ್ಯೂಸ್ ಕಡೆಯಿಂದ ಚೀಫ್ ಎಡಿಟರ್ ಹುದ್ದೆಯನ್ನು ಅಲಂಕರಿಸುವ ಅವಕಾಶ ಬಂತು ನಾನು ಕೂಡ ಒಪ್ಪಿಕೊಂಡೆ ಎಂದು ಹೇಳಿರುವ ದಿವ್ಯಾ ವಸಂತ ನಮ್ಮ ಚಾನೆಲ್ ಎಂಡಿಯಾಗಿರುವ ಕೃಷ್ಣಮೂರ್ತಿಯವರ ಬಳಿ ಆನಂದ್ ಗುರೂಜಿಯ ಜನ್ಮ ಕುಂಡಲಿ ಇದೆ ಎಂದು ಹೇಳಿದ್ದಾರೆ. ಅವರ ಬಳಿ ಆನಂದ್ ಗುರೂಜಿಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳಿವೆ, ಫೈಲ್‌ಗಳಿವೆ, ವಿಡಿಯೋಗಳಿವೆ, ಆಡಿಯೋಗಳಿವೆ ಎಂದು ಹೇಳಿದ್ದಾರೆ.
ಸಾಮ್ರಾಟ್ ಟಿವಿಯಲ್ಲಿ ನಾನು ಸುದ್ದಿ ನಿರೂಪಕಿ ಹೀಗಾಗಿ ಆನಂದ್ ಗುರೂಜಿ ಅವರ ಕುರಿತು ಸುದ್ದಿಯನ್ನು ಓದಲು ಹೇಳಿದಾಗ ನಾನು ನನ್ನ ಕೆಲಸ ಮಾಡಿದ್ದೇನೆ ಎಂದು ಹೇಳಿರುವ ದಿವ್ಯಾ ವಸಂತ ಆನಂದ್ ಗುರೂಜಿ ಅವರಿಗೆ ಮೂರು ವರ್ಷ ಜೈಲು ಫಿಕ್ಸ್ ಎಂದು ನಾನು ಹೇಳಿದ್ದೇನೆ ಆದರೆ ನಾನು ಎಲ್ಲಿಯೂ ಅವರು ಜೈಲಿಗೆ ಹೋಗಿದ್ದಾರೆ, ಮುದ್ದೆ ಮುರಿತಿದ್ದಾರೆ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ. ಭೂಕಬಳಕೆ ಮಾಡಿದ್ದು ನಿಜವೇ ಆದಲ್ಲಿ ಮೂರು ವರ್ಷ ಜೈಲಾಗುತ್ತೆ ಅದು ಕಾನೂನಿನಲ್ಲಿಯೇ ಇದೆ ನಾನು ಹೇಳಿರುವುದು ಕೂಡ ಅದನ್ನೇ ಎಂದು ಹೇಳಿದ್ದಾರೆ.
ನಾನು ಆಂಕರಿಂಗ್ ಮಾಡಿದೆ, ಅವರ ಸುದ್ದಿ ಓದಿದೆ ಎನ್ನುವ ಕಾರಣಕ್ಕೆ ಆನಂದ್ ಗುರೂಜಿ 2024ರಲ್ಲಿ ಆದ ಘಟನೆಗೆ ನನ್ನ ಹೆಸರನ್ನು ಲಿಂಕ್ ಮಾಡಿದರೇ ಹೇಗೆ ಎಂದು ಪ್ರಶ್ನೆ ಕೇಳಿರುವ ದಿವ್ಯಾ ವಸಂತ, 2024ರಲ್ಲಿ ಆನಂದ್ ಗುರೂಜಿ ದಾಖಲಿಸಿರುವ ದೂರಿನಲ್ಲಿ ಎಲ್ಲಿಯೂ ಕೂಡ ನನ್ನ ಹೆಸರಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು 2025ರಲ್ಲಿ ಅಂದರೆ ಇತ್ತೀಚೆಗೆ ತಡೆಯಾಜ್ಞೆ ಇದ್ದರೂ ಕೂಡ ಆ ಸುದ್ದಿಯನ್ನು ನಾವು ಪ್ರಸಾರ ಮಾಡಿದಾಗ ನನಗೆ ಮನಸಿಗೆ ನೋವಾಗ್ತಿದೆ, ಅದಾಗ್ತಿದೆ, ಇದಾಗ್ತಿದೆ ಎಂದು ಹೇಳಿ ಆನಂದ್ ಗುರೂಜಿ ಮತ್ತೆ ಕಂಪ್ಲೇಟ್ ಕೊಟ್ಟಿದ್ದಾರೆ, ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ ಎಂದಿರುವ ದಿವ್ಯಾ ವಸಂತ ಇದೇ ಸಮಯದಲ್ಲಿ ತಮಗೆ ಅವಕಾಶ ನೀಡಿದ್ದ ಮಾಧ್ಯಮದವರ ಮೇಲೆ ಕೂಡ ಕೆಂಡ ಕಾರಿದ್ದಾರೆ.
2024ರಲ್ಲಿ ಆದ ಘಟನೆಗೆ ನನ್ನ ಹೆಸರು ಸೇರಿಸಿದ ಮಾಧ್ಯಮದವರು, ದಿವ್ಯಾ ವಸಂತ ಹೊಸ ಗ್ಯಾಂಗ್, ಹಳೆ ಗ್ಯಾಂಗ್ ಎಂದೆಲ್ಲ ವರದಿ ಮಾಡಿದರು,ಇದಕ್ಕೆಲ್ಲ ಆ ಗ್ಯಾಂಗ್ ಕಾರಣ ಎಂದು ವರದಿಗಳನ್ನು ಮಾಡಿದರು ಎಂದಿರುವ ದಿವ್ಯಾ ವಸಂತ ನನ್ನ ಗ್ಯಾಂಗ್ ಸೇರಿಕೊಳ್ಳೋಕೆ ಜನ ಏನು ಕ್ಯೂ ನಲ್ಲಿ ಕಾಯುತ್ತಿದ್ದಾರಾ ಎಂದು ಕೂಡ ಕಿಡಿ ಕಾರಿದ್ದಾರೆ. ನನ್ನ ಮೇಲೆ ಸುಖಾ ಸುಮ್ಮನೆ ಆರೋಫ ಮಾಡಿ ನನ್ನ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಬೆಳವಣಿಗೆಯನ್ನು ಸಹಿಸದೇ ಬೇರೆ ಯಾರು ಅಲ್ಲ ಬದಲಿಗೆ ಮೀಡಿಯಾದವರೇ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿರುವ ದಿವ್ಯಾ ವಸಂತ, ಆನಂದ್ ಗುರೂಜಿ ನನ್ನನ್ನು ಟಾರ್ಗೆಟ್ ಮಾಡಿದ್ದರೆ 2024ರಲ್ಲಿ ನೀಡಿದ ದೂರಿನಲ್ಲಿಯೇ ಅವರು ನನ್ನ ಹೆಸರು ಉಲ್ಲೇಖಿಸಬಹುದಿತ್ತು ಎಂದು ಹೇಳಿದ್ಧಾರೆ. ಅವರಿಗೆ ನಾನು ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಅವರ ಬಳಿ ಯಾವ ಸಾಕ್ಷಿಗಳು ಕೂಡ ಇಲ್ಲ ಹೀಗಾಗಿ ಅವರು ಸುಮ್ಮನೆ ಇರಬಹುದು ಎಂದು ಹೇಳಿದ್ದಾರೆ.
ಇನ್ನು ನಾನು ಆನಂದ್ ಗುರೂಜಿ ಅವರದು ಇದೆ ಎನ್ನಲಾದ ಸೆ*ಕ್ಸ್ ವಿಡಿಯೋ ಬಗ್ಗೆ ನಾನು ಯಾವುದೇ ರೀತಿಯ ಸುದ್ದಿಗಳನ್ನು ಓದಿಲ್ಲ ಬದಲಿಗೆ ಕೇವಲ ಭೂಕಬಳಿಕೆ ಕುರಿತು ಮಾತ್ರ ನಾನು ಸುದ್ದಿಯನ್ನು ಓದಿದ್ದೇನೆ ಎಂದಿರುವ ದಿವ್ಯಾ ವಸಂತ ಸಾಮಾನ್ಯವಾಗಿ ತಪ್ಪು ಮಾಡದೇ ಇದ್ದರೆ ಯಾರು ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಿಲ್ಲ ಎಂದು ಹೇಳಿದ್ಧಾರೆ. ನಾನು ಈಗ ಕೇವಲ ಆಂಕರಿಂಗ್ ಮಾಡಿದ್ದಕ್ಕೆ ಗುರೂಜಿ ತಕಧಿಮಿತಾ ತಕಧಿಮಿತಾ ಅಂತ ಕುಣಿತಾವ್ರೇ ಇನ್ನೂ ನಾನು ಗುರೂಜಿ ತಪ್ಪು ಮಾಡಿರಬಹುದು ಎಂದು ಹೇಳಿ ಬಿಟ್ಟರೆ ರೂಫ್ ಕಿತ್ತು ಹೋಗಬೇಕು ಅಷ್ಟು ಹಾರಾಡುತ್ತಿದ್ದರೇನೋ ಎಂದು ಹೇಳಿದ್ದಾರೆ.
ಇಡೀ ಪ್ರಕರಣದಲ್ಲಿ ನಾನು ಯಾವ ತಪ್ಪನ್ನು ಕೂಡ ಮಾಡಿಲ್ಲ ಎಂದು ಪುನರುಚ್ಚಿಸಿರುವ ದಿವ್ಯಾ ವಸಂತ, ಆನಂದ್ ಗುರೂಜಿ ಅವರಿಗೆ ನಾನು ಹಲವು ಮಾಧ್ಯಮಗಳ ಮೂಲಕ, ಸಂದರ್ಶನಗಳ ಮೂಲಕ ಪ್ರಶ್ನೆ ಕೇಳಿದ್ದೇನೆ, ನಾನು ಬ್ಲ್ಯಾಕ್ ಮೇಲ್ ಮಾಡಿರುವುದು ನಿಜಾನಾ ಎಂದು ಕೇಳಿದ್ದೇನೆ ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ. 2024ರಲ್ಲಿ ಆದ ಘಟನೆಗೂ ನನಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ನನ್ನ ವಿರುದ್ದ ಸಾಕ್ಷಿಗಳಿದ್ದರೆ ಕೊಡಿ ಎಂದು ಹೇಳಿದ್ದಾರೆ.


Click it and Unblock the Notifications











