ಕಿಚ್ಚ46 ಡಿಸ್ಟ್ರಿಬ್ಯೂಷನ್, ಆಡಿಯೋ ರೈಟ್ಸ್ ಮಾರಾಟ? ಕಿಚ್ಚ ಕ್ರಿಯೇಷನ್ಸ್ ಚಾನಲ್‌ನಲ್ಲಿ ಬರಲ್ವಾ ಟೀಸರ್?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಕಿಚ್ಚ46' ಸಿನಿಮಾ ಟೀಸರ್ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. 'ವಿಕ್ರಾಂತ್ ರೋಣ' ನಂತರ ಬಾದ್‌ದಾ ತಮಿಳು ಬ್ಯಾನರ್‌ನಲ್ಲಿ ಮುಂದಿನ ಸಿನಿಮಾ ಮಾಡೋದು ಪಕ್ಕಾ ಆಗಿದೆ. ನಿರ್ದೇಶಕರು ಯಾರು? ಕಥೆ ಏನು? ಯಾವಾಗ ಶೂಟಿಂಗ್? ಎನ್ನುವ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ. ಸುದೀಪಿಯನ್ಸ್ 'ಕಿಚ್ಚ46' ಟೀಸರ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ದೊಡ್ಡ ಬ್ರೇಕ್‌ನ ನಂತರ ಸುದೀಪ್ ಮುಂದಿನ ಚಿತ್ರಕ್ಕೆ ಕೈ ಹಾಕಿದ್ದಾರೆ. ಆದರೆ ಈ ಗ್ಯಾಪ್‌ನಲ್ಲಿ 3 ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಅದರಲ್ಲಿ ಕಲೈಪುಲಿ ಎಸ್ ತನು ನಿರ್ಮಾಣದ ಚಿತ್ರವನ್ನು ಮೊದಲಿಗೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಟೀಸರ್ ಶೂಟ್ ಕೂಡ ಮುಕ್ತಾಯವಾಗಿದೆ. ಇದು ಸುದೀಪ್ ನಟನೆಯ 46ನೇ ಸಿನಿಮಾ. ಹಾಗಾಗಿ 'ಕಿಚ್ಚ46' ಹೆಸರಿನಲ್ಲಿ ಸಿನಿಮಾ ಶುರುವಾಗಿದೆ. ಟೀಸರ್‌ನಲ್ಲೇ ಸಿನಿಮಾ ಟೈಟಲ್ ಕೂಡ ರಿವೀಲ್ ಆಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಟೀಸರ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

ತಮಿಳಿನ ವಿಜಯ್ ಕಾರ್ತಿಕೇಯ 'ಕಿಚ್ಚ46' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಇನ್ನು ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಶಿವಕುಮಾರ್ ಕಲಾನಿರ್ದೇಶನ ಚಿತ್ರಕ್ಕಿರುತ್ತೆ ಎನ್ನುವ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ನಾಯಕಿಯಾಗಿ ಸಿಮ್ರತ್ ಕೌರ್ ನಟಿಸುವ ಬಗ್ಗೆ ಕೂಡ ಗುಸುಗುಸು ಕೇಳಿಬರ್ತಿದೆ.
ಸಾರೆಗಮ ಚಾನಲ್‌ನಲ್ಲಿ ಟೀಸರ್
ದಕ್ಷಿಣ ಭಾರತದ ದೊಡ್ಡ ಆಡಿಯೋ ಸಂಸ್ಥೆ ಸಾರೆಗಮ 'ಕಿಚ್ಚ46' ಆಡಿಯೋ ರೈಟ್ಸ್ ಕೊಂಡುಕೊಂಡಿರುವ ಸುಳಿವು ಸಿಕ್ತಿದೆ. ಇದೇ ಸಂಸ್ಥೆಯ ಯೂಟ್ಯೂಬ್ ಚಾನಲ್‌ಗಳಲ್ಲಿ ಸಿನಿಮಾ ಟೀಸರ್ ಕೂಡ ರಿಲೀಸ್ ಆಗೋದು ಪಕ್ಕಾ ಆಗೋಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಲಭ್ಯವಾಗಿದೆ. 'ವಿಕ್ರಾಂತ್ ರೋಣ' ಸೂಪರ್ ಹಿಟ್ ಬಳಿಕ ಈ ಸಿನಿಮಾ ಬರ್ತಿರೋದ್ರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.

ಕೆಆರ್‌ಜಿಗೆ ಕರ್ನಾಟಕ ರೈಟ್ಸ್?
ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಸಂಸ್ಥೆ ಕೆಆರ್‌ಜಿ 'ಕಿಚ್ಚ46' ಚಿತ್ರಕ್ಕೆ ಕೈಜೋಡಿಸಿದೆ. ಸಿನಿಮಾ ಮಾರ್ಕೆಟಿಂಗ್ ಜವಾಬ್ದಾರಿ ವಹಿಸಿಕೊಂಡಿರುವ ಬಗ್ಗೆ ಸುಳಿವು ಸಿಗುತ್ತಿದೆ. ಕರ್ನಾಟಕದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಕೆಆರ್‌ಜಿ ಸಂಸ್ಥೆ ವಿತರಣೆ ಮಾಡುತ್ತಿದೆ. ಕಲೈಪುಲಿ ಎಸ್. ತನು ಸಿನಿಮಾ ನಿರ್ಮಿಸುತ್ತಿದ್ದು ಕರ್ನಾಟಕದಲ್ಲಿ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ವಿತರಣೆ ಮಾಡುವ ಸಾಧ್ಯತೆಯಿದೆ. ಕಿಚ್ಚನಿಗೂ ಕೂಡ ಕೆಆರ್‌ಜಿ ಜೊತೆ ಒಳ್ಳೆ ಒಡನಾಟವಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಿಚ್ಚ46'
ಕಲೈಪುಲಿ ಎಸ್. ತನು 'ಕಿಚ್ಚ46' ಸಿನಿಮಾ ನಿರ್ಮಾಣ ಮಾಡ್ತಾರೆ ಅನ್ನೋದು ಮಾತ್ರ ಪಕ್ಕಾ ಆಗಿದೆ. ಇನ್ನುಳಿದಂತೆ ಚಿತ್ರದ ಬಗ್ಗೆ ಮತ್ಯಾವುದೇ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ತಮಿಳು ನಿರ್ಮಾಣ ಸಂಸ್ಥೆ ಆಗಿರುವುದರಿಂದ 'ಕೋಟಿಗೊಬ್ಬ- 2' ರೀತಿ 2 ಭಾಷೆಗಳಲ್ಲಿ ಸಿನಿಮಾ ಬರುತ್ತದೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ 5 ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡ್ತಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಪಕ್ಕಾ ಆಗ್ತಿದೆ.
ಮುಂದಿನ ವರ್ಷ ಸಿನಿಮಾ ತೆರೆಗೆ
ದಶಕಗಳಿಂದಲೂ ಸುದೀಪ್ ಬೇರೆ ಭಾಷೆಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. 'ಪೈಲ್ವಾನ್' ಹಾಗೂ 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದರು. 'ಪೈಲ್ವಾನ್' ಅಷ್ಟಾಗಿ ಸದ್ದು ಮಾಡ್ಲಿಲ್ಲ. ಆದರೆ 'ವಿಕ್ರಾಂತ್ ರೋಣ' ಹೊರ ರಾಜ್ಯಗಳಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಟೀಸರ್ ಮಾತ್ರ ಶೂಟ್ ಆಗಿದೆ. ಸಿನಿಮಾ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ. ಇದನ್ನೆಲ್ಲಾ ನೋಡ್ತಿದ್ರೆ ಈ ವರ್ಷ ಸಿನಿಮಾ ರಿಲೀಸ್ ಆಗೋದು ಕಷ್ಟ ಅನ್ನೋದು ಅರ್ಥವಾಗ್ತಿದೆ.


Click it and Unblock the Notifications











