'ಧೂಮಂ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್: ಮೇಲೆ, ಕೆಳಗೆ, ಹಿಂದು, ಮುಂದು ತಿರುಗಿಸಿ ನೋಡ್ತಿದ್ದಾರೆ ನೆಟ್ಟಿಗರು
ಲೂಸಿಯಾ ಪವನ್ ಕುಮಾರ್ ನಿರ್ದೇಶನದಲ್ಲಿ ಫಹಾದ್ ಫಾಸಿಲ್ ನಟನೆಯ 'ಧೂಮಂ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಬಹಳ ಇಂಟ್ರೆಸ್ಟಿಂಗ್ ಆಗಿರೋ ಪೋಸ್ಟರ್‌ನ ಚಿತ್ರತಂಡ ಪ್ರೇಕ್ಷಕರ ಮುಂದೆ ತಂದಿದ್ದು ಜೂನ್ ಕೊನೆಯಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ 'ಧೂಮಂ' ಸಿನಿಮಾ ತೆರೆಗಪ್ಪಳಿಸಲಿದೆ.
'ಲೂಸಿಯಾ', 'ಯುಟರ್ನ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕಟ್ಟಿಕೊಟ್ಟ ಪವನ್ ಕುಮಾರ್ ಜೊತೆ ಮಲಯಾಳಂನ ನಟ ಫಹಾದ್ ಫಾಸಿಲ್ ಕೈ ಜೋಡಿಸಿರೋದು ಕುತೂಹಲ ಮೂಡಿಸಿದೆ. ತಮ್ಮ ವಿಭಿನ್ನ ನಟನೆಯಿಂದ ಫಹಾದ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಪುನೀತ್ ರಾಜ್‌ಕುಮಾರ್- ಪವನ್ ಕಾಂಬಿನೇಷನ್‌ನಲ್ಲಿ 'ದ್ವಿತ್ವ' ಸಿನಿಮಾ ಬರಬೇಕಿತ್ತು. ಅದರ ಬದಲು 'ಧೂಮಂ' ಸಿನಿಮಾ ಈಗ ನಿರ್ಮಾಣವಾಗಿದೆ.

ಸಿಗರೇಟ್ ಸೇದುವುದರಿಂದ ಆಗುವ ಅನಾಹುತದ ಬಗ್ಗೆ 'ಧೂಮಂ' ಚಿತ್ರದಲ್ಲಿ ಚರ್ಚಿಸಲಾಗ್ತಿದೆಯಂತೆ. ಧೂಮಪಾನದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಎಂಥದ್ದು ಎಂದು ಈ ಸಿನಿಮಾದಲ್ಲಿ ಹೇಳ್ತಿದ್ದಾರೆ. ಈ ಮೂಲಕ ಒಂದೊಳ್ಳೆ ಸಂದೇಶವನ್ನು ಚಿತ್ರತಂಡ ಕೊಡಲು ಮುಂದಾಗಿದೆ. ಕೆಲವರು ಅಪ್ಪುಗಾಗಿ ಮಾಡಿದ್ದ 'ದ್ವಿತ್ವ' ಕಥೆಯೇ 'ಧೂಮಂ' ಹೆಸರಿನಲ್ಲಿ ಬರ್ತಿದೆ ಎನ್ನುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಫಹಾದ್ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ದರ್ಶನ ಕೊಟ್ಟಿದ್ದಾರೆ. ಹಿನ್ನೆಲೆಯಲ್ಲಿ ಅಪರ್ಣ ಬಾಲಮುರಳಿ, ರೋಷನ್ ಮ್ಯಾಥ್ಯು ಸೇರಿದಂತೆ ಹಲವರನ್ನು ನೋಡಬಹುದು.
'ಧೂಮಂ' ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಪೋಸ್ಟರ್‌ನ ಬಹಳ ವಿಭಿನ್ನವಾಗಿ ಕುತೂಹಲ ಕೆರಳಿಸುವಂತೆ ಡಿಸೈನ್ ಮಾಡಿದ್ದಾರೆ. ಟೈಟಲ್ ನೇರವಾಗಿದ್ದರೆ ಕಲಾವಿದರ ಲುಕ್‌ಗಳನ್ನು ಹಿಂದು ಮುಂದಾಗಿ ಮೇಲೆ ಕೆಳಗೆ ನೋಡುವಂತೆ ಹಾಕಲಾಗಿದೆ. ಪ್ರೇಕ್ಷಕರು ಪೋಸ್ಟರ್‌ನ ಹಿಂದು ಮುಂದು ಮಾಡಿ ನೋಡುವಂತಾಗಿದೆ. ಸದ್ಯ ಪೋಸ್ಟರ್‌ನಿಂದಲೇ ಪವನ್ ಕುಮಾರ್ ಸಿನಿಮಾ ಬಗ್ಗೆ ಕೂತುಹಲ ಕೆರಳುವಂತೆ ಮಾಡಿದ್ಧಾರೆ. ಅಚ್ಯುತ್ ಕುಮಾರ್, ಕಿರಣ್ ನಾಯಕ್ ಸೇರಿದಂತೆ ಕನ್ನಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲೂ ಸಿನಿಮಾ ಚಿತ್ರೀಕರಣ ಮಾಡಲಾಗಿದೆ.

ಮಲಯಾಳಂನ ಪ್ರತಿಭಾನ್ವಿತ ನಟ ಫಹಾದ್ ಫಾಸಿಲ್‌ಗೆ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ಇನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣ ಬಾಲಮುರಳಿಗೂ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 'ಧೂಮಂ' ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ಪ್ರೀತಾ ಜಯರಾಮನ್ ಛಾಯಾಗ್ರಹಣವಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು.
ಹೊಂಬಾಳೆ ಸಂಸ್ಥೆ, ಪವನ್ ಕುಮಾರ್ ಹಾಗೂ ಫಹಾದ್ ಫಾಸಿಲ್ ಕಾಂಬಿನೇಷನ್ ಸಿನಿಮಾ ಅಂದಾಗಲೇ ಭಾರೀ ನಿರೀಕ್ಷೆ ಮೂಡಿತ್ತು. 4 ಭಾಷೆಗಳಲ್ಲಿ ಬರ್ತಿರೋ ಸಿನಿಮಾ ಆಗಿರುವುದರಿಂದ ಚಿತ್ರಕರಣಕ್ಕೆ ಜಾಸ್ತಿ ಸಮಯ ಹಿಡಿಸುತ್ತೆ ಎನ್ನಲಾಗಿತ್ತು. ಆದರೆ ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿ 3 ತಿಂಗಳಲ್ಲಿ ಕಂಪ್ಲೀಟ್ ಮಾಡಿ ಈ ಪೋಸ್ಟರ್ ಪ್ರೊಡಕ್ಷನ್ ವರ್ಕ್ ಶುರುಮಾಡಲಾಗಿದೆ. ಪವನ್ ಅಂಡ್ ಟೀಂ ಬಹಳ ಬೇಗ 'ಧೂಮಂ' ಸಿನಿಮಾ ಮಾಡಿ ಮುಗಿಸಿದೆ. ಪ್ರೇಕ್ಷಕರ ಬಹಳ ಕಾತರದಿಂದ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಕಾಯ್ತಿದ್ದಾರೆ.

ಫಹಾದ್ ಈಗಾಗಲೇ ಮಲಯಾಳಂ ಮಾತ್ರವಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇನ್ನು ಹೊಂಬಾಳೆ ಸಂಸ್ಥೆ ಸಿನಿಮಾ ಆಗಿರುವುದರಿಂದ ಪರಭಾಷೆಗಳಲ್ಲಿ ಕೂಡ 'ಧೂಮಂ' ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ತಂಡ ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡಿ ಪ್ರಮೋಷನ್ ಆರಂಭಿಸಿಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











