ನಟಿ ರುಕ್ಮಿಣಿ ವಸಂತ್‌ಗೆ ಕಿಡಿಗೇಡಿಗಳ ಕಾಟ; ಅಭಿಮಾನಿಗಳ ಅಸಮಾಧಾನ
ಸೆಲೆಬ್ರೆಟಿಗಳಿಗೆ ಸೈಬರ್ ಕಿಡಿಗೇಡಿಗಳ ಕಾಟ ಹೆಚ್ಚಾಗುತ್ತಿದೆ. AI ತಂತ್ರಜ್ಞಾನವನ್ನು ಬಳಸಿ ನಟಿಯರನ್ನು ಕೆಟ್ಟದಾಗಿ ಚಿತ್ರಿಸಿ ವಿಕೃತ ಆನಂದ ಪಡುವ ಗುಂಪಿದೆ. ಸದ್ಯ ಕನ್ನಡ ನಟಿ ರುಕ್ಮಿಣಿ ವಸಂತ್ ಫೇಕ್ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇನ್‌ಸ್ಟಾಗ್ರಾಮ್ ಮಾತ್ರವಲ್ಲ, ಟ್ವಿಟರ್‌ನಲ್ಲಿ ಕೂಡ ಈಗ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈಗ AI ಫೇಕ್ ಫೋಟೊ, ವೀಡಿಯೋ ಆರ್ಭಟ ಜೋರಾಗಿದೆ. ನಟಿಯರನ್ನು ಅರೆಬೆತ್ತಲಾಗಿ, ಮಾದಕವಾಗಿ ಚಿತ್ರಿಸಿ ವೈರಲ್ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ವೀವ್ಸ್, ಲೈಕ್ಸ್ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಲಾಗ್ತಿದೆ. ಬಹುತೇಕ ಎಲ್ಲಾ ಜನಪ್ರಿಯ ನಟಿಯರ AI ಜನರೇಟೆಡ್ ಫೋಟೊ, ವೀಡಿಯೋಗಳು ಇನ್‌ಸ್ಟಾಗ್ರಾಮ್‌ನಲ್ಲಿದೆ. ಈಗ ಇದು 'X' (ಟ್ವಿಟರ್) ವೇದಿಕೆಗೂ ಎಂಟ್ರಿ ಕೊಟ್ಟಿದೆ.

ಸಿನಿಮಾ ಚಿತ್ರೀಕರಣಕ್ಕಾಗಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವಂತೆ ಫೇಕ್ ಫೋಟೊ, ವಿಡಿಯೋ ಹರಿದಾಡ್ತಿದೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇದು AI ಫೋಟೋ, ವೀಡಿಯೋ ಎಂದು ವಾಸ್ತವ ಸಂಗತಿ ತಿಳಿಸುತ್ತಿದ್ದಾರೆ. ಈ ಅವತಾರದಲ್ಲಿ ರುಕ್ಮಿಣಿ ನಟಿಸಲ್ಲ ಬಿಡಿ ಎನ್ನುತ್ತಿದ್ದಾರೆ. ಸೌತ್ ಸಿನಿದುನಿಯಾ ಮಾತ್ರವಲ್ಲ, ಬಾಲಿವುಡ್ ಅಂಗಳದಲ್ಲಿ ಕೂಡ ಕನ್ನಡ ನಟಿ ರುಕ್ಮಿಣಿ ಕ್ರೇಜ್ ಶುರುವಾಗಿದೆ. ಆದರೆ ಕಿಡಿಗೇಡಿಗಳ ಉಪಟಳದಿಂದ ಆಕೆಗೆ ಸಂಕಷ್ಟ ಎದುರಾಗಿದೆ.
7 ವರ್ಷಗಳ ಹಿಂದೆ 'ಬೀರ್‌ಬಲ್' ಸಿನಿಮಾ ಮೂಲಕ ರುಕ್ಮಿಣಿ ಚಂದನವನ ಪ್ರವೇಶಿಸಿದ್ದರು. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಒಳ್ಳೆ ಬ್ರೇಕ್ ಕೊಟ್ಟಿತ್ತು. ಬಳಿಕ ಆಕೆ ನಟಿಸಿದ್ದ 'ಬಘೀರ', 'ಭೈರತಿ ರಣಗಲ್' ಸಿನಿಮಾಗಳು ಹಿಟ್ ಆಗಿತ್ತು. 'ಅಪುಡೊ ಇಪುಡೊ ಎಪುಡೊ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. 'ಏಸ್' ಹಾಗೂ 'ಮದರಾಸಿ' ಎಂಬ ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್ ಸಿನಿಮಾ ಕಥೆಗಳನ್ನು ರುಕ್ಮಿಣಿ ಕೇಳುತ್ತಿದ್ದಾರೆ. ಶೀಘ್ರದಲ್ಲೇ ಆಕೆ ನಟಿಸುವ ಹಿಂದಿ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಸದ್ಯ 'ಡ್ರ್ಯಾಗನ್' ಹಾಗೂ 'ಟಾಕ್ಸಿಕ್' ಚಿತ್ರಗಳಲ್ಲಿ ಬೆಂಗಳೂರು ಬೆಡಗಿ ಬಣ್ಣ ಮಿಂಚುತ್ತಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ಮೆಲ್ಲಿಸ್ಸಾ ಎಂಬ ಪಾತ್ರ ನಿಭಾಯಿಸುತ್ತಿದ್ದಾರೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಜೋಡಿಯಾಗಿ ಮಿಂಚುತ್ತಿದ್ದಾರೆ.
ರುಕ್ಮಿಣಿ ವಸಂತ್ ಬಗ್ಗೆ ಪಡ್ಡೆ ಹುಡುಗರಲ್ಲಿ ಭಾರೀ ಕ್ರೇಜ್ ಇದೆ. ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಆಕೆಯನ್ನು ನೋಡಲು ಬಯಸುತ್ತಿದ್ದಾರೆ. 'ಕಾಂತಾರ'-1 ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಕೆಯ ಹವಾ ಶುರುವಾಗಿದೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳಲ್ಲಿ ನಟಿಸುವ ಸುಳಿವು ಸಿಕ್ಕಿದೆ. ಕನ್ನಡ ನಟಿ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆದರೆ ಇಂತಹ ಕಿಡಿಗೇಡಿಗಳಿಂದ ಎಲ್ಲಾ ನಟಿಯರಿಗೂ ಕಿರಿಕಿರಿ ಶುರುವಾಗಿದೆ.


Click it and Unblock the Notifications