ದೂರು ದಾಖಲಿಸಿದ ನಟ ದೊಡ್ಡಣ್ಣ; ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಶುರುವಾಯ್ತು ಭೀತಿ
'ನಟ ದೊಡ್ಡಣ್ಣ ಇನ್ನಿಲ್ಲ' ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದವರಿಗೆ ಈಗ ನಡುಕ ಶುರುವಾಗಿದೆ. ಕಿಡಿಗೇಡಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದು ತಪ್ಪಿತಸ್ಥರ ಹುಡುಕಾಟ ನಡೆಸಿದ್ದಾರೆ. ಜೂನ್ 12ರಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಪೋಸ್ಟ್ ಭಾರೀ ಸದ್ದು ಮಾಡುತ್ತಿದ್ದಂತೆ ಸ್ವತಃ ದೊಡ್ಡಣ್ಣ ವೀಡಿಯೋ ಮಾಡಿ ತಾವು ಆರೋಗ್ಯವಾಗಿರುವುದಾಗಿ ಸ್ಪಷ್ಟನೆ ನೀಡಿದ್ದರು.
ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರ ವಿರುದ್ಧ ಜೂನ್ 15ರಂದು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ನಟ ದೊಡ್ಡಣ್ಣ ದೂರು ನೀಡಿದ್ದಾರೆ. 'ಪಬ್ಲಿಕ್ ಫ್ರೆಂಡ್' (Public Friend) ಎಂಬ ಫೇಸ್ಬುಕ್ ಖಾತೆಯಲ್ಲಿ ಇಂತಾದೊಂದು ಪೋಸ್ಟ್ ಮಾಡಲಾಗಿತ್ತು. ವೀವ್ಸ್, ಲೈಕ್ಸ್‌ಗಾಗಿ ಈ ಪೇಜ್‌ನಲ್ಲಿ ಪದೇ ಪದೆ ಇಂತಹ ಪೋಸ್ಟ್ ಪ್ರಕಟವಾಗುತ್ತಿತ್ತು. ಈಗಾಗಲೇ ನಿಧನರಾಗಿರುವ ಕಲಾವಿದರ ಬಗ್ಗೆ "ಇಂದು ನಿಧನರಾಗಿದ್ದಾರೆ" ಎನ್ನುವಂತೆ ಪೋಸ್ಟ್ ಮಾಡುತ್ತಲೇ ಇದ್ದರು. ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆರೋಗ್ಯವಾಗಿರುವ ದೊಡ್ಡಣ್ಣ ಅವರ ಬಗ್ಗೆ ಸುಳ್ಳು ಸುದ್ದಿ ಹರಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಈ ಹಿಂದೆ ಕೂಡ ದೊಡ್ಡಣ್ಣ ಬಗ್ಗೆ ಇದೇ ರೀತಿ ಸುಳ್ಳು ಪೋಸ್ಟ್ ಮಾಡಿ ವಿಕೃತ ಮರೆಯುತ್ತಿದ್ದರು. ಆದರೆ ದೊಡ್ಡಣ್ಣ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಈ ಬಾರಿ ಫೇಕ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಕರೆ ಮಾಡಿ ಹಿರಿಯ ನಟನ ಆರೋಗ್ಯ ವಿಚಾರಿಸಿದ್ದರು. ಕಿಡಿಗೇಡಿಗಳ ಹುಚ್ಚಾಟಕ್ಕೆ ತಕ್ಕಪಾಠ ಕಲಿಸಬೇಕು ಎಂದು ಸೈಬರ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದೊಡ್ಡಣ್ಣ ಸ್ಪಷ್ಟನೆ
ಫೇಕ್ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ದೊಡ್ಡಣ್ಣ ವೀಡಿಯೋ ಮಾಡಿ ಮಾತನಾಡಿದ್ದರು. "ಇವತ್ತು ಬೆಳಗ್ಗೆ ನಾನು ಏಳುವುದಕ್ಕೂ ಮುನ್ನ ಯಾರೋ ಅವಿವೇಕಿಗಳು ನಾನು ನಿಧನವಾಗಿದ್ದೀನಿ ಎಂದು ಫೇಕ್ ನ್ಯೂಸ್ ಹಾಕಿದ್ದಾರೆ. ಅದು ಶುದ್ಧ ಸುಳ್ಳು. ನಾನು ಆರೋಗ್ಯವಾಗಿದ್ದೀನಿ, ನೆಮ್ಮದಿಯಾಗಿ ಇದ್ದೀನಿ. ಬೆಳಗ್ಗೆಯಿಂದ ಪ್ರೀತಿಪಾತ್ರರು, ಅಭಿಮಾನಿಗಳು, ಬಂಧು ಬಳಗ, ಮಕ್ಕಳು, ಮೊಮ್ಮಕ್ಕಳು ಫೋನ್ ಮಾಡಿ ವಿಚಾರಿಸಿದರು. ಎಲ್ಲರಿಗೂ ಧನ್ಯವಾದ.. ನಾನು ಆರೋಗ್ಯವಾಗಿದ್ದೀನಿ. ನಿಮ್ಮ ಆಶೀರ್ವಾದ ಇರುವವರೆಗೂ ನೂರ್ಕಾಲ ಚೆನ್ನಾಗಿ ಇರ್ತೀನಿ. ಆ ಕಿಡಿಗೇಡಿಗಳನ್ನು ಸುಮ್ಮನೆ ಬಿಡಲ್ಲ.. ಬೆನ್ನತ್ತಿ ಶಿಕ್ಷೆ ಕೊಡಿಸ್ತೀನಿ" ಎಂದಿದ್ದರು.
ಹೇಳಿದಂತೆ ನಟ ದೊಡ್ಡಣ್ಣ ದೂರು ನೀಡಿದ್ದಾರೆ. ಸೈಬರ್ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಹಿಂದೆ ಕೂಡ ಹಿರಿಯ ನಟಿ ಉಮಾಶ್ರೀ ಸೇರಿದಂತೆ ಕೆಲವರ ಬಗ್ಗೆ ಇದೇ ರೀತಿ ಸುಳ್ಳು ವದಂತಿ ಹರಡಲಾಗಿತ್ತು. ಬಳಿಕ ಅದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗಿತ್ತು.
ಹಿರಿಯ ನಟ ದೊಡ್ಡಣ್ಣ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಕೊನೆಯದಾಗಿ 'ಕೆಡಿ' ಚಿತ್ರದ ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ರಂಗಭೂಮಿ ಹಿನ್ನೆಲೆಯಿಂದ ದೊಡ್ಡಣ್ಣ ಚಿತ್ರರಂಗ ಪ್ರವೇಶಿಸಿದ್ದರು. 'ಕೂಡಿ ಬಲಿದರೆ ಸ್ವರ್ಗ ಸುಖ' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಹಾಸ್ಯನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಮಿಂಚಿದರು. 800ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ತರಹೇವಾರಿ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದರು. 'ಕೆಂಡ ಸಂಪಿಗೆ' ಎಂಬ ಕಿರುತೆರೆ ಧಾರಾವಾಹಿಯಲ್ಲಿ ಸಹ ಮಿಂಚಿದ್ದರು.


Click it and Unblock the Notifications