ಹಲೋ ನಾನು ನಿಮ್ಮ ರುಕ್ಮಿಣಿ ವಸಂತ್ ; ಕಾಂತಾರದ ಕನಕವತಿಯಿಂದ ನಿಮಗೆ ಫೋನ್ ಬಂದಿದೆಯಾ ? ಬಂದರೆ ಎಚ್ಚರ
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಇನ್ನೂ ಇವರ ಕಣ್ಣು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ಇರುವುದಿಲ್ಲ. ಬದಲಿಗೆ ಚಿತ್ರರಂಗದವರ ಮೇಲೆ...
ಕೂಡ ಇರುತ್ತೆ. ಹೆಸರು..ಹಣ...ಕೀರ್ತಿ ಗಳಿಸಿದ ದೊಡ್ಡ ದೊಡ್ಡ ತಾರೆಯರ ಮೇಲೆಯೂ ಇರುತ್ತೆ. ಚೂರು ಯಾಮಾರಿದರೂ ಸಾಕು ಈ ಕಿರಾತಕರು ತಮ್ಮ ಖೆಡ್ಡಾಗೆ ಸೆಲೆಬ್ರೆಟಿಗಳನ್ನು ಕೆಡವಿಕೊಂಡು ಬಿಡುತ್ತಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದ ನಾಯಕ-ನಾಯಕಿಯರ ಹೆಸರಿನಲ್ಲಿ ದುಡ್ಡು ಪೀಕುತ್ತಾರೆ. ಸದ್ಯ ರುಕ್ಮಿಣಿ ವಸಂತ್ ಅವರ ವಿಚಾರದಲ್ಲಿಯೂ ಕೂಡ ಇದೇ ಆಗಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಇದು 5G ಯುಗ. ಈ ಯುಗದಲ್ಲಿ ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಹಲವರು ಹೈರಾಣಾಗಿದ್ದರೆ ಮತ್ತೊಂದು ಕಡೆ ಸೈಬರ್ ವಂಚಕರಿಂದ ಹಲವರು ಕಂಗಾಲಾಗುತ್ತಿದ್ಧಾರೆ.
ಬದಲಾದ ಈ ಕಾಲದಲ್ಲಿ ಹಣದಾಸೆಗೆ ಕಳ್ಳರು ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (NCRB) ವರದಿಯ ಪ್ರಕಾರ ಭಾರತದಲ್ಲಿ ದಿನಕ್ಕೆ ಸರಾಸರಿ 7,000 ಸೈಬರ್ ಅಪರಾಧ ದೂರುಗಳು ದಾಖಲಾಗುತ್ತಿವೆ. ಈ ಸಂಖ್ಯೆ 2021 ರಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಪ್ರಕರಣಗಳಲ್ಲಿ ಸುಮಾರು 85% ಕೇಸ್‌ಗಳು ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿವೆ.
ಇನ್ನು ಇದೇ ವರದಿಯ ಪ್ರಕಾರ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಹೆಚ್ಚಾಗುತ್ತಿದೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎನ್ನುವಂತೆ ಸದ್ಯ ''ಕಾಂತಾರ''ದ ಕನಕವತಿ ರುಕ್ಮಿಣಿ ವಸಂತ್ ಅವರ ಮೇಲೆ ಈ ಸೈಬರ್ ಕಳ್ಳರ ಕಣ್ಣು ಬಿದ್ದಿದ್ದು, ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಹಲವರಿಗೆ ನಕಲಿ ಫೋನ್ ನಂಬರ್ ಮೂಲಕ ಕರೆ ಹೋಗುತ್ತಿದೆ. ರುಕ್ಮಿಣಿ ವಸಂತ್ ಅವರ ಹೆಸರನ್ನು ಉಪಯೋಗಿಸಿಕೊಂಡು ಹಲವರನ್ನು ವಂಚಿಸುವ ಪ್ರಯತ್ನ ನಡೆಯುತ್ತಿದೆ.
ಅದೃಷ್ಟವಶಾತ್ ಈ ವಿಚಾರ ರುಕ್ಮಿಣಿ ವಸಂತ್ ಅವರ ಗಮನಕ್ಕೆ ಬೇಗನೇ ಬಂದಿದ್ದು ರುಕ್ಮಿಣಿ ವಸಂತ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತು ತಮ್ಮ ಹಿಂಬಾಲಕರಿಗೆ ಮನವಿಯನ್ನು ಮಾಡಿದ್ದಾರೆ. ಎಚ್ಚರ.. ಎಚ್ಚರ.. ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರುಕ್ಮಿಣಿ ವಸಂತ್,''ಯಾವುದೇ ಕಾರಣಕ್ಕೂ ನನ್ನ ಹೆಸರಿನಲ್ಲಿ 9445893273 ಎಂಬ ಈ ಸಂಖ್ಯೆಯಿಂದ ನಿಮಗೆ ಕರೆ ಬಂದರೆ ಸ್ವೀಕರಿಸಬೇಡಿ, ಮೆಸೇಜ್ ಬಂದರೆ ಪ್ರತಿಕ್ರಿಯಿಸಬೇಡಿ. ಇದು ನನ್ನ ವ್ಯೆಯಕ್ತಿಕ ಫೋನ್ ನಂಬರ್ ಅಲ್ಲ. ನನ್ನ ಹೆಸರಿನಲ್ಲಿ ಈ ನಂಬರ್‌ನ ಒಬ್ಬ ವ್ಯಕ್ತಿ ಉಪಯೋಗ ಮಾಡುತ್ತಿದ್ದು, ಹಲವಾರು ಜನರಿಗೆ ಈ ವ್ಯಕ್ತಿ ಸಂಪರ್ಕ ಮಾಡುತ್ತಿದ್ಧಾನೆ. ಈ ಫೋನ್ ನಂಬರ್ ನನ್ನದಲ್ಲ. ಇದರಿಂದ ಬರುವ ಫೋನ್ ಮತ್ತು ಮೆಸೇಜ್‌ಗಳು ಸಂಪೂರ್ಣ ನಕಲಿ ಎಂದು ನಾನು ಈ ಮೂಲಕ ಸ್ಪಷ್ಟ ಪಡಿಸಲು ಬಯಸುತ್ತೇನೆ. ಎಲ್ಲರೂ ದಯವಿಟ್ಟು ಎಚ್ಚರದಿಂದ ಇರಿ'' ಎಂದು ರುಕ್ಮಿಣಿ ವಸಂತ್ ಹೇಳಿದ್ಧಾರೆ.
ಮುಂದುವರೆದು ''ಈ ದುಷ್ಕೃತ್ಯ ಸೈಬರ್ ಅಪರಾಧವಾಗಿದ್ದು, ನನ್ನ ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವ.. ವಂಚನೆಯ ಪ್ರಯತ್ನ ಮಾಡುತ್ತಿರುವ.. ವ್ಯಕ್ತಿಯ ವಿರುದ್ದ ಈಗಾಗಲೇ ದೂರು ದಾಖಲಿಸಲಾಗಿದ್ದು ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ. ಯಾವುದೇ ಸ್ಪಷ್ಟೀಕರಣ ಬೇಕಿದ್ದರೆ ಅಥವಾ ಮಾಹಿತಿ ಬೇಕಿದ್ದಲ್ಲಿ ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕ ಮಾಡಬಹುದು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ.. ಸುರಕ್ಷಿತರಾಗಿರಿ..'' ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ಧಾರೆ.


Click it and Unblock the Notifications











