ಸುದೀಪ್ 'ಮಾರ್ಕ್' ವಿರುದ್ಧ ಅಪಪ್ರಚಾರ; ಕಿಚ್ಚ-ದಚ್ಚು ನಡುವೆ ಮತ್ತೆ ಬೆಂಕಿ ಹಚ್ಚುವ ಯತ್ನ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳಲ್ಲಿ ಯಾವುದನ್ನು ನಂಬಬೇಕೋ, ಯಾವುದನ್ನು ಬಿಡಬೇಕೋ ಗೊತ್ತಾಗಲ್ಲ. ಮುಂದಿನ ತಿಂಗಳು ಕನ್ನಡ 3 ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿವೆ. ಆದರೆ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ರಿಲೀಸ್ ತಡವಾಗುತ್ತದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆ ಆಗಲಿದೆ. 25ರಂದು ಸುದೀಪ್ ನಟನೆಯ ಮಾರ್ಕ್ ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದಾರೆ. ಕಳೆದ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಬಂದಿದ್ದ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

'ಮ್ಯಾಕ್ಸ್' ಸಿನಿಮಾ ಕಾಂಬಿನೇಷನ್‌ನಲ್ಲೇ 'ಮಾರ್ಕ್' ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಕಂಪ್ಲೀಟ್ ಆಗಿದೆ ಎಂದು ಸ್ವತಃ ಸುದೀಪ್ ಮಾಹಿತಿ ನೀಡಿದ್ದರು. ಮಾತು ಕೊಟ್ಟಂತೆ ಕ್ರಿಸ್‌ಮಸ್ ಸಂಭ್ರಮದಲ್ಲೇ ಸಿನಿಮಾ ಬಿಡುಗಡೆ ಎಂದು ಟ್ವೀಟ್ ಮಾಡಿದ್ದರು. ಆದರೆ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿ ಹರಡುತ್ತಿದ್ದಾರೆ.
'ಮಾರ್ಕ್' ಸಿನಿಮಾ ಬಿಡುಗಡೆಗೆ ಚಿತ್ರಮಂದಿರದ ಮಾಲೀಕರು ಒಪ್ಪುತ್ತಿಲ್ಲ. ಅದಕ್ಕೆ ರಿಲೀಸ್ ಡೇಟ್ ಮುಂದೂಡಲಾಗಿದೆ ಎಂದು ಚಿತ್ರತಂಡ ಪೋಸ್ಟ್ ಮಾಡಿದಂತೆ ಒಂದು ಫೋಟೊ ವೈರಲ್ ಆಗುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗುತ್ತಿದೆ. ದರ್ಶನ್ ನಟನೆಯ 'ಡೆವಿಲ್' ಚಿತ್ರಕ್ಕೆ ಹೆಚ್ಚು ಸ್ಕ್ರೀನ್ಸ್ ಕೊಡ್ತಿದ್ದಾರೆ. ಹಾಗಾಗಿ 'ಮಾರ್ಕ್' ಚಿತ್ರಕ್ಕೆ ಥಿಯೇಟರ್ ಸಿಗಲ್ಲ, ಅದಕ್ಕೆ ನಮ್ಮ ಸಿನಿಮಾ ರಿಲೀಸ್ ಮುಂದೂಡುತ್ತಿದ್ದೇವೆ, 'ಡೆವಿಲ್' ಚಿತ್ರಕ್ಕೆ ಶುಭವಾಗಲಿ ಎಂದು ಚಿತ್ರತಂಡ ಹಾರೈಸಿದಂತೆ ಈ ಪೋಸ್ಟ್ ವೈರಲ್ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಹೊಸದೇನು ಅಲ್ಲ. ಆದರೆ ಸೋಶಿಯಲ್ ಮೀಡಿಯಾ ಬಂದಮೇಲೆ ಕೆಸರೆರಚಾಟ ಹೆಚ್ಚಾಗುತ್ತಿದೆ. ಅದರಲ್ಲೂ ಹೀಗೆ ಸುಳ್ಳು ಸುದ್ದಿ ಹಬ್ಬಿಸಿ ಕೆಲವರು ಹುಚ್ಚಾಟ ಮರೆಯುತ್ತಾರೆ. ಮೂರು ಕೂಡ ಕನ್ನಡ ಸಿನಿಮಾಗಳೇ, ಎಲ್ಲಾ ಚಿತ್ರವನ್ನು ಪ್ರೇಕ್ಷಕರು ನೋಡಿ ಹಾರೈಸುತ್ತಾರೆ. ಸುಖಾ ಸುಮ್ಮನೆ ಹೀಗೆ ಅಪಪ್ರಚಾರ ಮಾಡುವುದು ಸರಿಯಲ್ಲ.
ಕಳೆದ ವರ್ಷ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಸಿನಿಮಾ ಎದುರು 'ಮ್ಯಾಕ್ಸ್' ಸಿನಿಮಾ ಬಂದು ಗೆದ್ದಿತ್ತು. ಒಳ್ಳೆ ಸಿನಿಮಾ ಗೆಲುವನ್ನು ತಡೆಯೋಕೆ ಆಗಲ್ಲ, ಅದೇ ರೀತಿ ಪ್ರೇಕ್ಷಕರಿಗೆ ಇಷ್ಟವಾಗದ ಸಿನಿಮಾವನ್ನು ಏನೇ ಮಾಡಿದ್ರು ಗೆಲ್ಲಿಸೋಕೆ ಸಾಧ್ಯವಿಲ್ಲ. ಡಿಸೆಂಬರ್ 12ಕ್ಕೆ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಬಿಡುಗಡೆ ಆಗಲಿದೆ. 2 ವಾರಗಳ ಬಳಿಕ 'ಮಾರ್ಕ್' ಆಗಿ ಸುದೀಪ್ ಬರ್ತಿದ್ದಾರೆ.
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ನಿಜಕ್ಕೂ 'ಮಾರ್ಕ್' ಚಿತ್ರದ ಎದುರು ತೆರೆಗೆ ಬರುತ್ತಾ ಎಂದು ಕಾದು ನೋಡಬೇಕಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂದು ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಸಿನಿಮಾ. ರಮೇಶ್ ಬಾಬು ಹಣ ಹೂಡಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸಿನಿಮಾ ತೆರೆಗೆ ಬರಲಿದೆ.
ಈ 3 ಸಿನಿಮಾಗಳ ಬಳಿಕ ಸಂಕ್ರಾಂತಿಗೆ ಮ್ಯಾಂಗೊ ಪಚ್ಚ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಸಾಧ್ಯವಾದರೆ ಒಳ್ಳೆ ಸಿನಿಮಾವನ್ನು ಗೆಲ್ಲಿಸಬೇಕು, ಹೀಗೆ ಸುಳ್ಳು ವದಂತಿ ಹರಡಿ ತುಳಿಯುವುದು. ಅಭಿಮಾನಿಗಳ ನಡುವೆ ತಂದಿಡುವ ಪ್ರಯತ್ನ ಮಾಡಬಾರದು.


Click it and Unblock the Notifications











