ದರ್ಶನ್ 'ಡೆವಿಲ್' ಅಖಾಡಕ್ಕೆ ಮತ್ತೊಬ್ಬ ಬಿಂದಾಸ್ ನಟಿ ಎಂಟ್ರಿ; ಯಾವ ಪಾತ್ರ ಅಂದ್ರೆ?
ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಪುನರಾರಂಭವಾಗಿದೆ. ದರ್ಶನ್ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಸದ್ಯಕ್ಕೆ ಮಾತಿನ ಭಾಗದ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ಈಗಾಗಲೇ ಚಿತ್ರಕ್ಕೆ ನಾಯಕಿಯಾಗಿ ರಚನಾ ರೈ ಆಯ್ಕೆ ಆಗಿದ್ದಾರೆ. ಇದೀಗ ಮತ್ತೊಬ್ಬ ನಟಿ ತಂಡ ಸೇರಿದ್ದಾರೆ.
ಮೈಸೂರಿನ ಲಲಿತ್ ಮಹಲ್‌ನಲ್ಲಿ ಚಿತ್ರೀಕರಣ ನಡೀತಿದೆ. ಸೆಟ್‌ನಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬಹುಕೋಟಿ ವೆಚ್ಚದಲ್ಲಿ 'ಡೆವಿಲ್' ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶನದ ಜೊತೆಗೆ ಮಿಲನಾ ಪ್ರಕಾಶ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಮಹೇಶ್ ಮಂಜ್ರೇಕರ್, ಜಿಶು ಸೆಂಗುಪ್ತ, ಮುಖೇಶ್ ರಿಷಿ, ಫರ್ದೀನ್ ಖಾನ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನಿಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

ಈಗಾಗಲೇ 'ಡೆವಿಲ್' ಚಿತ್ರದ ಎರಡು ಟೀಸರ್‌ಗಳು ಬಂದು ಹಿಟ್ ಆಗಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿ ಚಿತ್ರೀಕರಣ ನಿಂತಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಮೋಹನ್ ಬಿ ಕೆ ಸ್ಟುಡಿಯೋದಲ್ಲಿ ಆಕ್ಷನ್ ಸನ್ನಿವೇಶವೊಂದರ ಚಿತ್ರೀಕರಣ ನಡೆದಿತ್ತು.
ಆಕ್ಷನ್ ಸನ್ನಿವೇಶ ಚಿತ್ರೀಕರಣದ ವೇಳೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಮೈಸೂರಿನಲ್ಲಿ ಶಸ್ತ್ರ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಬಳಿಕ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು. ನಂತರ 2ನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಆರಂಭಿಸಲು ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ ರೇಣುಕಾಸ್ವಾಮಿ ಪ್ರಕರಣದ ಬೆಳಕಿಗೆ ಬಂದಿತ್ತು. ದರ್ಶನ್ ನಾಲ್ಕೈದು ತಿಂಗಳು ಜೈಲಿನಲ್ಲಿ ಇರುವಂತಾಯಿತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು.
ಜೈಲಿನಿಂದ ಹೊರ ಬಂದರೂ ಬೆನ್ನು ನೋವಿನ ಸಮಸ್ಯೆ ಅವರನ್ನು ಬಹಳ ಕಾಡಿತ್ತು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೋವಿನ ನಡುವೆಯೇ ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಇದೀಗ ನಟಿ ಶರ್ಮಿಳಾ ಮಾಂಡ್ರೆ ಕೂಡ 'ಡೆವಿಲ್' ತಂಡ ಸೇರಿಕೊಂಡಿದ್ದಾರೆ. ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಖಚಿತಪಡಿಸಿದ್ದಾರೆ. ತಮ್ಮ ಕ್ಯಾರವಾನ್ ಫೋಟೊವನ್ನು ಶರ್ಮಿಳಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.
ಈ ಹಿಂದೆ 'ನವಗ್ರಹ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಶರ್ಮಿಳಾ ನಟಿಸಿದ್ದರು. ಇದೀಗ 'ಡೆವಿಲ್' ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದಿನಕರ್ ತೂಗೂದೀಪ ನಿರ್ದೇಶನದ 'ನವಗ್ರಹ' ಚಿತ್ರದಲ್ಲಿ ಕಿರಣ್ ಎನ್ನುವ ಪಾತ್ರದಲ್ಲಿ ನಟಿಸಿದ್ದರು. 'ಕಣ್ ಕಣ್ಣ ಸಲುಗೆ' ಸಾಂಗ್ ಸೂಪರ್ ಹಿಟ್ ಆಗಿತ್ತು.

'ಗಾಳಿಪಟ'-2 ಬಳಿಕ ಕನ್ನಡದ ಯಾವುದೇ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ನಟಿಸಿರಲಿಲ್ಲ. 'ದಸರಾ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬಿಂದಾಸ್ ಫೋಟೊಶೂಟ್ ಮೂಲಕ ಮೋಡಿ ಮಾಡುತ್ತಿದ್ದಾರೆ. ಇದೀಗ 'ಡೆವಿಲ್' ಚಿತ್ರದಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಈ ವರ್ಷ ಡಿಸೆಂಬರ್ ವೇಳೆಗೆ ಆಕ್ಷನ್ ಥ್ರಿಲ್ಲರ್ 'ಡೆವಿಲ್' ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಈ ಹಿಂದೆ ದರ್ಶನ್ ನಟನೆಯ 'ತಾರಕ್' ಚಿತ್ರಕ್ಕೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಈ ಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬಹಳ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ದರ್ಶನ್‌ಗೆ ಬಹಳ ವಿಭಿನ್ನವಾದ ಪಾತ್ರವನ್ನು ಡಿಸೈನ್ ಮಾಡಿದ್ದಾರೆ. ಈಗಾಗಲೇ ಟೀಸರ್‌ನಲ್ಲಿ ಅದು ಗೊತ್ತಾಗುತ್ತಿದೆ. ಮೈಸೂರು, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ.


Click it and Unblock the Notifications











