"ನಾದಬ್ರಹ್ಮ ಅನ್ನೋ ಶಬ್ಧಕ್ಕೆ ಅರ್ಥವೇ ಇಲ್ಲ, ನಾದ ಬ್ರಹ್ಮ ವಿಠ್ಠಲ ಒಬ್ಬನೇ"; ಹಂಸಲೇಖ ವಿರುದ್ಧ ಶಂಕರ್ ಶಾನುಭಾಗ್ ಕಿಡಿ
ಸಿನಿಮಾ ರಂಗ ಕೆಲವರಿಗೆ ಬದುಕು ಕೊಟ್ಟಿದೆ. ಅದೇ ಮತ್ತೆ ಕೆಲವರಿಗೆ ನರಕ ತೋರಿಸಿದೆ. ಹಾಗಂತ ಕೇವಲ ಬಣ್ಣ ಹಚ್ಚಿ ಬದುಕು ಕಂಡುಕೊಳ್ಳಬೇಕು ಅನ್ನುವವರಿಗೆ ಮಾತ್ರ ಇಂತಹ ಅನುಭವ ಆಗಿಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಕೆಲವರಿಗೆ ಅನುಕೂಲವಾಗಿದೆ. ಅದೇ ಮತ್ತೆ ಕೆಲವರಿಗೆ ನೋವಾಗಿದೆ. ಇಂತಹದ್ದೇ ಒಂದು ಘಟನೆಯನ್ನು ಗಾಯಕ ಶಂಕರ್ ಶಾನುಭಾಗ್ ಕೂಡ ಹಂಚಿಕೊಂಡಿದ್ದಾರೆ.
ಆರಂಭದ ದಿನಗಳಲ್ಲಿ ಶಂಕರ್ ಶಾನುಭಾಗ್ ಟ್ರ್ಯಾಕ್ ಸಿಂಗರ್ ಆಗಿ ಗುರುತಿಸಿಕೊಂಡಿದ್ದರು. ಒಂದ್ಕಡೆ ಸಿನಿಮಾರಂಗದಲ್ಲಿ ಗಾಯಕನಾಗಿ ಗುರುತಿಸಿಕೊಳ್ಳಬೇಕಿತ್ತು. ಇನ್ನೊಂದು ಕಡೆ ಸಂಸಾರದ ಜವಾಬ್ದಾರಿ ಇವರ ಮೇಲೆ ಇತ್ತು. ಹೀಗಾಗಿ ಹಣದ ಅವಶ್ಯಕತೆ ಇತ್ತು. ಆದರೆ, ಕನ್ನಡ ಚಿತ್ರರಂಗದಲ್ಲಿ ಕೆಲವರು ಸಂಗೀತ ನಿರ್ದೇಶಕರು ತಮ್ಮ ಕೆಲಸಕ್ಕೆ ಹಣವನ್ನೇ ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ.

ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ದೇಶ-ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟು ಜನಪ್ರಿಯರಾಗಿದ್ದಾರೆ. ಆದರೆ, ಆರಂಭದ ದಿನಗಳಲ್ಲಿ ಸಿನಿಮಾದ ಸಂಗೀತ ನಿರ್ದೇಶಕರೊಂದಿಗೂ ಕೆಲಸ ಮಾಡಿದ್ದರು. ಆ ವೇಳೆ ತಮಗೆ ಮೋಸ ಆಗಿದೆ ಎಂದು ಹಿರಿಯ ಪತ್ರಕರ್ತ ಬಿ ಗಣಪತಿ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.
ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶಿಸಿದ ಕೆಲವು ಸಿನಿಮಾಗಳಿಗೆ ಶಂಕರ್ ಶಾನುಭಾಗ್ ಕೆಲಸ ಮಾಡಿದ್ದರು. ಈ ವೇಳೆ ಹಂಸಲೇಖ ಬಳಿ ಮಾಡಿದ ಕೆಲಸಕ್ಕೆ ಹಣ ಕೇಳುವುದಕ್ಕೆ ಹೋದಾಗ ಅವರು ಕೊಡಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ನಾದಬ್ರಹ್ಮ ಸಿನಿಮಾಗಳಿಗೆ ಕೋರಸ್ ಎಲ್ಲಾ ಹಾಡಿದ್ದೇನೆ. ಕಷ್ಟವಿದ್ದ ದಿನಗಲ್ಲೂ ಹಣವನ್ನು ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
"ನಮ್ಮ ಮಹಾನ್ ನಾದಬ್ರಹ್ಮ ಹಂಸಲೇಖ ಅವರಿಗೆ ನಾನು 8 ರಿಂದ 10 ಹಾಡುಗಳನ್ನು ಹಾಡಿದ್ದೇನೆ. ಪೇಮೆಂಟ್ ಬರಲಿಲ್ಲ. ಆಗ ನಾನು ಅವರ ಹತ್ತಿರ ಶಂಕರಮಠ ಸಮೀಪದಲ್ಲಿಯೇ ಇದ್ದೆ. ಒಂದು ನಾಲ್ಕೈದು ಬಾರಿ ಹೋಗಿ ನಿಂತೆ. ನನಗೆ ತುಂಬಾ ತೊಂದರೆ ಆಗ, ಮೂರು ಜನ ತಂಗಿಯಂದಿರನ್ನು ಮದುವೆ ಮಾಡಬೇಕು. ಅವರ ಸಿನಿಮಾದ ಕೋರಸ್ ಎಲ್ಲಾ ಹಾಡಿದ್ದೇನೆ. ಸರ್ ಪೇಮೆಂಟ್ ಅಂತ ಕೇಳಿದಾಗ ಕೊಟ್ಟರೆ ಆಯ್ತು ಬಿಡೋ ಅನ್ನೋರು. ಐದನೇ ಸಾರಿ ಹೋದಾಗ, ಅವರ ಮೂಡು ಸರಿಯಿರಲಿಲ್ಲ ಅಂತ ಕಾಣುತ್ತೆ. ಎಷ್ಟು ಕೋಟಿ ಕೊಡಬೇಕೋ ನಿನಗೆ ಅಂತ ಕೇಳಿಬಿಡೋದಾ? ಸರಿ ಸರ್ ನಮಸ್ಕಾರ ಅಂತ ಅವತ್ತಿಂದ ನಾನು ಅವರ ಬಳಿ ಹೋಗಿಲ್ಲ." ಎಂದು ಬಿ.ಗಣಪತಿ ಯೂಟ್ಯೂಬ್ ಚಾನೆಲ್‌ನಲ್ಲಿ ಗಾಯಕ ಶಂಕರ್ ಶಾನುಭಾಗ್ ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ನಾದಬ್ರಹ್ಮ ಅನ್ನೋ ಪದಕ್ಕೆ ಅರ್ಧವೇ ಇಲ್ಲ. ನಾದಬ್ರಹ್ಮ ವಿಠ್ಠಲ ಒಬ್ಬನೇ ಎಂದೂ ಹೇಳಿಕೊಂಡಿದ್ದಾರೆ. ಹಾಗೇ ಮತ್ತೊಬ್ಬ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರ ಬಗ್ಗೆನೂ ಗಂಭೀರ ಆರೋಪ ಮಾಡಿದ್ದಾರೆ. ಅವಕಾಶಕ್ಕಾಗಿ ಅವರ ಕಾಲು ಹಿಡಿದು ಜಾಡಿಸಿ ಒದ್ದರು ನನಗೆ ಎಂದು ಇದೇ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೇ ಮತ್ತೊಬ್ಬ ಸಂಗೀತ ನಿರ್ದೇಶಕ ಮೈಸೂರು ಮೋಹನ್ ಅವರ ಕೂಡ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 'ನಂಜುಂಡ' ಸಿನಿಮಾಗಾಗಿ ಇವರೊಂದಿಗೆ ಒಂದು ತಿಂಗಳು ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆರು ಸಾಂಗ್‌ಗಳಿಗೆ ಟ್ರ್ಯಾಕ್ ಮತ್ತು ಕೋರಸ್ ಹಾಡಿದ್ದರೂ ಇದೂವರೆಗೂ ಒಂದು ರೂಪಾಯಿ ಪೇಮೆಂಟ್ ಕೂಡ ಬಂದಿಲ್ಲ ಎಂದಿದ್ದಾರೆ.
ಖ್ಯಾತ ಗಾಯಕ ಶಂಕರ್ ಶಾನುಭಾಗ್ ನೀಡಿದ ಈ ಸಂದರ್ಶನ ಸಂಚಲನ ಸೃಷ್ಟಿಸುತ್ತಿದೆ. ಈ ಗಂಭೀರ ಆರೋಪಗಳಿಗೆ ನಾದಬ್ರಹ್ಮ ಹಂಸಲೇಖ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ಎದುರು ನೋಡಬೇಕಿದೆ. ಸದ್ಯ ಈ ಯೂಟ್ಯೂಬ್ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಂತೂ ಸದ್ದು ಮಾಡುತ್ತಿದೆ.


Click it and Unblock the Notifications











