"ಕಿತ್ತಾಕ್ತೀನಿ ಅಂದೋರೆಲ್ಲ ಊರಾಚೆ ಟೆಂಟ್ ಹಾಕೊಂಡು ಕೂತ್ರವ್ರೆ"; ಧ್ರುವ ಸರ್ಜಾ ಫ್ಯಾನ್ ವಿಡಿಯೋ ಮತ್ತೆ ವೈರಲ್
ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ಸ್ ವಾರ್ ಅನ್ನೋದು ಹೊಸದೇನು ಅಲ್ಲ. ಸ್ಟಾರ್‌ಗಳು ವೈಯಕ್ತಿಕವಾಗಿ ಚೆನ್ನಾಗಿದ್ದರೂ, ಅಭಿಮಾನಿಗಳು ಮಾತ್ರ ಕಿತ್ತಾಡುತ್ತಲೇ ಇರುತ್ತಾರೆ. ತಾವು ಮೆಚ್ಚಿದ ನಟನೇ ಗ್ರೇಟ್ ಎನ್ನುವಂತೆ ವರ್ತಿಸುತ್ತಿರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ, ಮನೆ ಮುಂದೆ ನೆಚ್ಚಿನ ನಟನನ್ನು ನೋಡುವುದಕ್ಕೆ ಎದುರು ನೋಡುತ್ತಿರುತ್ತಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡುವುದಕ್ಕೆ ಭಾನುವಾರದವರೆಗೂ ಕಾಯುತ್ತಾರೆ. ಪ್ರತಿ ಭಾನುವಾರ ಧ್ರುವ ಸರ್ಜಾ ತಮ್ಮ ಮನೆಯ ಮುಂದೆ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಈ ವೇಳೆ ಅವರ ಫ್ಯಾನ್ಸ್ ಡೈಲಾಗ್ ಬಿಟ್ಟು, ಹಾಡು ಹೇಳಿ ಎಂಜಾಯ್ ಮಾಡುತ್ತಾರೆ.

ಇತ್ತೀಚೆಗೆ ಧ್ರುವ ಸರ್ಜಾ ಅಭಿಮಾನಿಯೊಬ್ಬ ಹೇಳಿದ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗೇ ಎರಡು ತಿಂಗಳ ಹಿಂದೆ ಭೇಟಿ ಮಾಡಿದ್ದ ಅಭಿಮಾನಿಯೊಬ್ಬ ಧ್ರುವ ಮುಂದೆ ಮಾರುದ್ದದ ಡೈಲಾಗ್ ಬಿಟ್ಟಿದ್ದ. ಆ ಅಭಿಮಾನಿಯ ಡೈಲಾಗ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಸದ್ದು ಮಾಡುತ್ತಿತ್ತು. ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಧ್ರುವ ಅಭಿಮಾನಿ ಪರೋಕ್ಷವಾಗಿ ದರ್ಶನ್‌ಗೆ ಟಾಂಗ್ ಕೊಟ್ಟು ಡೈಲಾಗ್ ಬಿಟ್ಟಿದ್ದಾನೆ ಅಂತ ಸುದ್ದಿಯಾಗಿತ್ತು. ಅದೇ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.
ಧ್ರುವ ಸರ್ಜಾ ಸದ್ಯ 'ಮಾರ್ಟಿನ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿಜಾಂ ಭಾಗದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಈ ಮೂಲಕ 'ಮಾರ್ಟಿನ್' ತಂಡಕ್ಕೆ ಬಲ ಬಂದಂತೆ ಆಗಿದೆ.
ಒಂದ್ಕಡೆ ಪ್ರಮೋಷನ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾನೆ ಎನ್ನಲಾದ ಧ್ರುವ ಅಭಿಮಾನಿಯ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಮಾರುದ್ಧದ ಡೈಲಾಗ್ ಅನ್ನು ನಾನ್ ಸ್ಟಾಪ್ ಆಗಿ ಹೊಡೆಯುವ ಧ್ರುವ ಸರ್ಜಾ ಅಭಿಮಾನಿಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಹರಿದಾಡುವುದಕ್ಕೆ ಶುರು ಮಾಡಿದೆ.
"ಧ್ರುವ ಸರ್ಜಾ ಅಣ್ಣನ ಎದುರು ಹಾಕಿಕೊಳ್ಳುವುದಕ್ಕಿಂತ ಮೊದಲ ಕೆಣಬೇಕಿರುವುದು ಈ ವಿಐಪಿ ಅಭಿಮಾನಿಯನ್ನ. ಒಳ್ಳೆ ಸಿನಿಮಾ ಬರುತ್ತಿಲ್ಲ. ಥಿಯೇಟರ್ ಮುಚ್ಚಿ ಹೋಗುತ್ತವೆ ಅಂತ ಬೇಜಾರ್ ಆಗಬೇಡ. ಮಾರ್ಟಿನ್ ರಿಲೀಸ್ ಆಗುವುದಕ್ಕಿಂತ ಮುಂಚೆ ಥಿಯೇಟರ್ ಪಿಲ್ಲರ್ ಅನ್ನು ಬಿಗಿ ಮಾಡಿಕೋ. ಮಾರ್ಟಿನ್ ಬಂದ್ಮೇಲೆ ಥಿಯೇಟರ್ ಒಳಗೆ ದೀಪಾವಳಿ, ಥಿಯೇಟರ್ ಹೊರಗೆ ಮಾರಿ ಹಬ್ಬ ನಡೆಯುತ್ತೆ" ಎಂದು ಅಭಿಮಾನಿ ಧ್ರುವ ಸರ್ಜಾ ಮುಂದೆ ಡೈಲಾಗ್ ಬಿಟ್ಟಿದ್ದ.
ಹಾಗೇ ಕಿತ್ತಾಕುತ್ತೇನೆ ಅಂದವರೆಲ್ಲ ಊರಾಚೆ ಟೆಂಟ್ ಹಾಕೊಂಡಿದ್ದಾರೆ ಅಂತ ಡೈಲಾಗ್ ಬಿಟ್ಟಿದ್ದ. ಇದು ದರ್ಶನ್‌ಗೆ ಜೈಲ್‌ಗೆ ಹೋಗಿದ್ದ ಸಂದರ್ಭದಲ್ಲಿ ಹರಿದಾಡಿದ ವಿಡಿಯೋ ಆಗಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಚರ್ಚೆಯಾಗಿತ್ತು.
"ಕಿರುಚಾಡಿಕೊಳ್ಳುವವರೆಲ್ಲ ಹಾರಾಡಿಕೊಂಡು ಲೈನ್‌ಗೆ ಬನ್ನಿ. ಕಿತ್ತಾಕುತ್ತೇನೆ ಅಂದೊರೆಲ್ಲ ಊರಾಚೆ ಟೆಂಟ್ ಹಾಕೊಂಡು ಕೂತವ್ರೆ. ನಾವು ಯಾರಿಗೂ ಹೊಡೆಯೋದಿಲ್ಲ. ಹೊಡೆದರೆ, ಯಾರೂ ಉಳಿಯುವುದಿಲ್ಲ. ಜೀವ ಉಳಿಸಿಕೊಳ್ಳಬೇಕು ಅಂದರೆ, ಊರಾಚೆನೇ ಇದ್ದು ಬಿಡು. ಅಪ್ಪಿ ತಪ್ಪಿ ಬಂದರೂ ಸ್ಮಶಾನ. ಏನು ಹೇಳು ಸುಡುಗಾರು ಊರು ಹೊರಗಿದೆಯೋ, ಒಳಗಿದೆಯೋ ಅಂತ ಕನ್ಪ್ಯೂಸ್ ಆಗಿ ಹೋಗ್ತಿಯ." ಎಂದು ವೀರಾವೇಷದಿಂದ ಡೈಲಾಗ್ ಬಿಟ್ಟಿದ್ದ ಅಭಿಮಾನಿ.
ಧ್ರುವ ಸರ್ಜಾ ಅಭಿಮಾನಿಯ ಆ ವಿಡಿಯೋಗೆ ಇಂದಿಗೂ ಕಾಮೆಂಟ್‌ಗಳು ಬರುತ್ತಲೇ ಇವೆ. "ಪಾಪ ಎಷ್ಟು ದಿನ ಬೈಪಾಟ ಮಾಡಿದಾನೊ ಏನೋ" ಅಂತ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ" ಅಂತ ಲೈಟ್ ಆಗಿ ಕಾಮೆಂಟ್ ಮಾಡಿದ್ದಾರೆ. "ಈ ತರ ಹಿಂಸೆ ಕೊಟ್ರೆ ಯಾರ್ ಬದ್ಕತ್ತಾರೆ ಸರ್" ಅಂತ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಧ್ರುವ ಸರ್ಜಾ ತಾಳ್ಮೆಗೆ ಮೆಚ್ಚಬೇಕು ಅಂತಾನೂ ಹೇಳುತ್ತಿದ್ದಾರೆ.


Click it and Unblock the Notifications











