ಯಶ್ ಹಾಗೂ ಧನಂಜಯ್ ಫ್ಯಾನ್ಸ್ ನಡುವೆ ಕಿರಿಕ್ ಕಾರಣ ಏನು? ಹೆಚ್ಚಾಯ್ತು ಫ್ಯಾನ್ ವಾರ್!
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ಹೊಸದೇನಲ್ಲ. ದಶಕಗಳಿಂದ ಸ್ಟಾರ್ ವಾರ್, ಫ್ಯಾನ್ಸ್ ನಡೆಯುತ್ತಲೇ ಇದೆ. ಇತ್ತೀಚೆಗೆ ಫೇಸ್ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಅದಕ್ಕೆ ವೇದಿಕೆ ಆಗುತ್ತಿದೆ. ತಮ್ಮ ನಟ ಹೆಚ್ಚು ಎಂದು ಬಡಾಯಿ ಕೊಚ್ಚಿಕೊಳ್ಳಲು ಒಬ್ಬ ನಟನ ಬಗ್ಗೆ ಒಬ್ಬರು ಟ್ರೋಲ್ ಮಾಡಿ ಪೋಸ್ಟ್ ಹಾಕುವುದು. ಅದಕ್ಕೆ ಪರ ವಿರೋಧ ಚರ್ಚೆ ನಡೆಯುವುದು. ಇದು ಮುಂದೆ ಫ್ಯಾನ್ಸ್ ವಾರ್‌ಗೆ ಕಾರಣವಾಗುತ್ತದೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ಡಾಲಿ ಧನಂಜಯ್ ಇಬ್ಬರೂ ಕನ್ನಡದ ಪ್ರತಿಭಾನ್ವಿತ ಕಲಾವಿದರು. ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದು ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಧನು ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಹೊಸ ಪ್ರತಿಭೆಗಳಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಟ ಯಶ್ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ರೇಂಜ್ ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕರು ಆಗಿ ಬಡ್ತಿ ಪಡೆದಿದ್ದಾರೆ.

ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಕೂಡ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟಾಕ್ಕಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಡಾಲಿ ಧನಂಜಯ್ ನಟನೆಯ 'ಮದರ್ ಪ್ರಾಮಿಸ್' ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರದ ಹಾಡೊಂದು ಬಿಡುಗಡೆ ಆಗಿದೆ. ಆರ್‌ಸಿಬಿ ತಂಡವನ್ನು ಬೆಂಬಲಿಸಿ ಮಾಡಿರುವ ಡ್ಯಾನ್ಸಿಂಗ್ ನಂಬರ್ ಇದು. ಧನಂಜಯ್ ಕೂಡ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಇದೇ ಹಾಡಿನ ಸಣ್ಣದೊಂದು ಸಾಲು ವೈರಲ್ ಆಗ್ತಿದೆ.
ಹಾಡಿನ ಎರಡನೇ ಚರಣದಲ್ಲಿ "ಸರಿ ಫೈನಲ್ ಹೇಳ್ಬುಡು ಭೈ.. ಯಾರಪ್ಪಂದ್ ಏನೈತಿ ಪ್ಯಾನ್ ಇಂಡಿಯಾ ನಮ್ದೈತಿ" ಎನ್ನುವ ಸಾಲಿದೆ. ನಟ ಯಶ್ ಅವರಿಗೆ ಕೌಂಟರ್ ಕೊಡಲು ಈ ಸಾಲು ಬರೆದಿದ್ದಾರೆ ಎಂದು ಕೆಲವರು ವೈರಲ್ ಮಾಡಿದ್ದಾರೆ. ಇದಕ್ಕೆ ಯಶ್ ಹಾಗೂ ಧನಂಜಯ್ ಅಭಿಮಾನಿಗಳ ನಡುವೆ ಟ್ವೀಟ್ ವಾರ್ ನಡೀತಿದೆ. ಯಶ್ ಗ್ರೇಟಾ, ಧನಂಜಯ್ ಗ್ರೇಟಾ ಅಂತೆಲ್ಲಾ ಸುಖಾಸುಮ್ಮನೆ ಟ್ರೋಲ್ ಮಾಡುತ್ತಾ ಫ್ಯಾನ್ಸ್ ವಾರ್ ಕ್ರಿಯೇಟ್ ಮಾಡಿದ್ದಾರೆ. ಯಾರಿಗೋ ಟಾಂಗ್ ಕೊಡಲು ಈ ರೀತಿ ಸಾಹಿತ್ಯ ಬರೆದಿಲ್ಲ. ಆದರೆ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿ ಕಾಮೆಂಟ್ ಮಾಡಿದ್ದಾರೆ. ಅದು ಮುಂದೆ ವಿಕೋಪಕ್ಕೆ ತಿರುಗಿದೆ.

ಯಶ್ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ಕೊಂಡಿದ್ದೀರಾ? ಧನಂಜಯ್ ವರ್ಷಕ್ಕೆ 4 ಸಿನಿಮಾ ಮಾಡ್ತಾರೆ ಎನ್ನುವುದು ಡಾಲಿ ಅಭಿಮಾನಿಗಳ ವಾದ. ಯಶ್ 4 ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರು ಎಲ್ಲರೂ ತಿರುಗಿ ನೋಡುವಂತ ಸಿನಿಮಾ ಮಾಡ್ತಿದ್ದಾರೆ ಎಂದು ಅಭಿಮಾನಿಗಳು ತಿರುಗೇಟು ಕೊಡುತ್ತಿದ್ದಾರೆ. ಧನಂಜಯ್ ಹಾಗೂ ಯಶ್ ನಡುವೆ ಆತ್ಮೀಯ ಒಡನಾಟವಿದೆ. ಆದರೆ ಅಭಿಮಾನಿಗಳು ಮಾತ್ರ ಅವರಿಬ್ಬರ ಹೆಸರಿನಲ್ಲಿ ಹೀಗೆ ಟ್ರೋಲ್ ಮಾಡುತ್ತಾ ಹೀಗೆ ದೂಷಿಸುತ್ತಿದ್ದಾರೆ.
ಕನ್ನಡ ಸಿನಿಮಾಗಳು ಗೆಲ್ಲಬೇಕು, ಕನ್ನಡ ಚಿತ್ರರಂಗ ಬೆಳೆಯಬೇಕು. ಅದಕ್ಕಾಗಿ ಒಳ್ಳೆ ಸಿನಿಮಾಗಳನ್ನು ಎಲ್ಲರೂ ನೋಡಿ ಬೆಂಬಲಿಸಬೇಕಿದೆ. ಅಭಿಮಾನ ಅತಿಯಾಗಬಾರದು. ನೆಚ್ಚಿನ ನಟನ ಸಿನಿಮಾ ನೋಡಿ ಬೆಂಬಲಿಸುವ ಮೂಲಕ ಅಭಿಮಾನಿಗಳು ಜೊತೆ ನಿಲ್ಲಬೇಕು. ಅದು ಬಿಟ್ಟು ಬೇರೆ ನಟರನ್ನು ಟ್ರೋಲ್ ಮಾಡುವುದು ಸರಿಯಲ್ಲ. ಇದನ್ನು ಯಾರು ಒಪ್ಪುವುದಿಲ್ಲ.
ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹೀಗೆ ಸ್ಟಾರ್ ನಟರ ಫ್ಯಾನ್ಸ್ ನಡುವೆ ತಂದಿಕ್ಕುವ ಪ್ರಯತ್ನ ಮಾಡುತ್ತಾರೆ. ಅದು ಗೊತ್ತಿಲ್ಲದೇ ಫ್ಯಾನ್ಸ್ ಕೂಡ ಈ ಚರ್ಚೆಗೆ ಇಳಿಯುತ್ತಾರೆ. ಅದು ಕೆಲವೊಮ್ಮೆ ಎಲ್ಲೆ ಮೀರಿ ಸದ್ದು ಮಾಡುತ್ತದೆ. ಆವೇಷದಲ್ಲಿ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬೈಯ್ಯುವ ಹಂತಕ್ಕೆ ಹೋಗುತ್ತದೆ. ಇದು ನಿಜಕ್ಕೂ ಒಳ್ಳೆ ಬೆಳವಣಿಗೆ ಖಂಡಿತ ಅಲ್ಲ.


Click it and Unblock the Notifications











