ಮತ್ತೆ ಆ ದಿನ ನೆನೆದ ರಾಕಿಂಗ್ ಫ್ಯಾನ್ಸ್; ಅಂದು ಹೊತ್ತಿದ ಕಿಡಿ ಮುಂದೆ ಸೃಷ್ಟಿಸಿದ್ದು ಇತಿಹಾಸ
ರಾಕಿಂಗ್ ಸ್ಟಾರ್ ಯಶ್. ಇವತ್ತು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೇಶ ವಿದೇಶಗಳಲ್ಲಿ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಕೂಡ ರಾಕಿ ಭಾಯ್ ಅಂದ್ರೆ ಯಾರು ಅನ್ನೋದು ಗೊತ್ತು. ಅಷ್ಟೆಲ್ಲಾ ಯಾಕೆ ಮಲೇಷಿಯಾದಲ್ಲಿ ಯಶ್ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ.
ಬಹಳ ದೂರದೃಷ್ಟಿ ಇರುವ ನಟ ಯಶ್. ಮುಂದಿನ 5 ವರ್ಷದಲ್ಲಿ ನಾನು ಯಾವ ಸ್ಥಾನದಲ್ಲಿ ಇರಬೇಕು ಎಂದು ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮ ಪಡುತ್ತಲೇ ಇರುತ್ತಾರೆ. ಮೈಸೂರಿನಿಂದ ಸಿನಿಮಾ ಕನಸು ಕಂಡು ಬೆಂಗಳೂರಿಗೆ ಬಂದ ನವೀನ್ ಕುಮಾರ್ ಅದನ್ನು ಸಾಧಿಸಿ ತೋರಿಸಿದರು. ಗಾಂಧಿನಗರದಲ್ಲಿ ಒಂದು ಕಟೌಟ್ ನಿಲ್ಲಿಸಬೇಕು ಎಂದುಕೊಂಡವರು ದೇಶಾದ್ಯಂತ ಚಿತ್ರಮಂದಿರಗಳ ಮುಂದೆ ಕಟೌಟ್ ನಿಲ್ಲಿಸುವಂತೆ ಬೆಳೆದರು.

ಚಿಕ್ಕ ಸಿನಿಮಾಗಳ ಮೂಲಕವೇ ಕರಿಯರ್ ಆರಂಭಿಸಿದ ಯಶ್ ಮುಂದೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಚಿತ್ರದಿಂದ ಚಿತ್ರಕ್ಕೆ ಸಕ್ಸಸ್ ರೇಟ್ ಹೆಚ್ಚಿಸಿಕೊಂಡು ಬಂದರು. ಅದೊಂದು ದಿನ ಪ್ರಶಾಂತ್ ನೀಲ್ ಜೊತೆ ಸೇರಿ 'KGF' ಕನಸು ಕಂಡರು. ಅದಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬೆನ್ನುಲುಬಾಗಿ ನಿಂತಿತ್ತು. ಬೇರೆ ಎಲ್ಲಾ ಸಿನಿಮಾಗಳನ್ನು ಪಕ್ಕಕ್ಕಿಟ್ಟು ರಾಕಿಭಾಯ್ ಆಗಿ ಅಬ್ಬರಿಸೋಕೆ ಹೊರಟರು. ಆರಂಭದಲ್ಲಿ ಇವರ ಪ್ರಯತ್ನ ನೋಡಿ ಕೆಲವರು ನಕ್ಕಿದ್ದರು. ಆದರೆ ಆಡಿಕೊಂಡವರ ಮುಂದೆಯೇ ಸಾಧಿಸಿ ತೋರಿಸಿದರು.
'ಸಂತು ಸ್ಟ್ರೈಟ್ ಫಾರ್ವಡ್' ರಿಲೀಸ್ ಬಳಿಕ ರಾಧಿಕಾ ಪಂಡಿತ್ ಜೊತೆ ಯಶ್ ಹಸೆಮಣೆ ಏರಿದರು. ಅಷ್ಟರಲ್ಲಾಗಲೇ 'KGF' ಕನಸು ಮೊಳಕೆ ಒಡೆದಿತ್ತು. ಪಾತ್ರಕ್ಕಾಗಿ ಗಡ್ಡಬಿಟ್ಟು ತಯಾರಿ ಆರಂಭಿಸಿದ್ದರು. 2016ರ ಜೂನ್ 9ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಅಂದು ಯಾರೂ ಕೂಡ 'KGF' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸುತ್ತದೆ ಎಂದು ಭಾವಿಸಿರಲಿಲ್ಲ.
ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ, ಉಗ್ರಂ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಾರೆ, ಯಶ್ ಹೀರೊ ಆಗಿ ನಟಿಸ್ತಾರೆ ಎನ್ನುವುದು ಮಾತ್ರ ಗೊತ್ತಿತ್ತು. ಬಳಿಕ ಚಿತ್ರದ ಪ್ರೀ ಪ್ರೊಡಕ್ಷನ್ಸ್ ವರ್ಕ್ ಶುರುವಾಗಿತ್ತು. 2017 ಮಾರ್ಚ್ 15 ಅಂದರೆ ಸರಿಯಾಗಿ 8 ವರ್ಷಗಳ ಹಿಂದೆ ಯಶ್ ಒಂದು ಟ್ವೀಟ್ ಮಾಡಿದ್ದರು. ಕ್ಲೋಸ್‌ಅಪ್‌ನಲ್ಲಿ ತಮ್ಮ ಸೆಲ್ಫಿ ಫೋಟೊ ಕ್ಲಿಕ್ಕಿಸಿ "KGF ಶುರು" ಎಂದು ಬರೆದುಕೊಂಡಿದ್ದರು. ಮುಂದೆ ಆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು ಸೀಕ್ವೆಲ್ ಕೂಡ ಬಂದು ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ.
ಕೋಲಾರದ KGF ಗಣಿಗಳಲ್ಲೇ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿತ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದ ಯಶ್ 'ಸಂತು ಸ್ಟ್ರೈಟ್ ಫಾರ್ವಡ್' ಬಳಿಕ ಸೈಲೆಂಟ್ ಆಗಿದ್ದರು. ಮುಹೂರ್ತ ನಡೆದು 8 ತಿಂಗಳು ಕಳೆದರೂ 'KGF' ಸಿನಿಮಾ ಚಿತ್ರೀಕರಣ ಆರಂಭವಾಗಿರಲಿಲ್ಲ. ಅದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತಂದಿತ್ತು. ಅಂದು ಆ ದಿನ ಚಿತ್ರೀಕರಣ ಶುರು ಎಂದು ಯಶ್ ಪೋಸ್ಟ್ ಮಾಡಿದ್ದು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು.
ಅದೇ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ 'KGF' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅದು ನಿಜವಾಗಲಿಲ್ಲ. ಮರುವರ್ಷ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಣ್ಣ ಟೀಸರ್ ಬಿಟ್ಟಿದ್ದರು. ಯಶ್ ಗನ್ ಹಿಡಿದು ಅಬ್ಬರಿಸುವ ಝಲಕ್ ಅದು. ಅದನ್ನು ನೋಡಿದ ಬಳಿಕ ಕೂಡ ಅಷ್ಟೇನು ಸಿನಿಮಾ ಬಗ್ಗೆ ನಿರೀಕ್ಷೆ ಇರಲಿಲ್ಲ. ಮತ್ತೊಂದು ಆಕ್ಷನ್ ಸಿನಿಮಾ ಎಂದೇ ಬಹುತೇಕರು ಭಾವಿಸಿದ್ದರು. ಆದರೆ 2018ರ ನವೆಂಬರ್ 9ರಂದು ಬಂದಿದ್ದ ಟ್ರೈಲರ್ ಸೂಪರ್ ಹಿಟ್ ಆಗಿತ್ತು.
'KGF' ಚಾಪ್ಟರ್-1 ಮೊದಲ ಟ್ರೈಲರ್ ನೋಡಿದವರು ಹುಬ್ಬೇರಿಸಿದ್ದರು. ಪ್ರಶಾಂತ್ ನೀಲ್ ಟೇಕಿಂಗ್, ಯಶ್ ಆರ್ಭಟ, ರವಿ ಬಸ್ರೂರು ಮ್ಯೂಸಿಕ್, ಭುವನ್ ಗೌಡ ಛಾಯಾಗ್ರಹಣ ಎಲ್ಲವೂ ಅಬ್ಬಬ್ಬಾ ಎನ್ನುವಂತಿತ್ತು. ಅಷ್ಟರಲ್ಲಿ ರಾಕಿಭಾಯ್ ತಾಖತ್ತು ಎಂಥದ್ದು ಎಂದು ಬಾಲಿವುಡ್ ಮಂದಿಗೂ ಗೊತ್ತಾಗಿ ಹೋಗಿತ್ತು. ರಾಜಮೌಳಿ ಕೂಡ ಚಿತ್ರದ ಶೋ ರೀಲ್ ನೋಡಿ ಥ್ರಿಲ್ಲಾಗಿದ್ದರು. ಅನಿಲ್ ತದಾನಿ ಚಿತ್ರವನ್ನು ಹಿಂದಿಯಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದರು. ನೋಡ ನೋಡುತ್ತಲೇ ಸಿನಿಮಾ ಪ್ಯಾನ್ ಇಂಡಿಯಾ ಸ್ವರೂಪ ಪಡೆದುಕೊಂಡಿತ್ತು.
5 ಭಾಷೆಗಳಲ್ಲಿ ಡಬ್ ಮಾಡಿ ಏಕಕಾಲಕ್ಕೆ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಯಿತು. ಎಲ್ಲಾ ಭಾಷೆಗಳಲ್ಲಿ ದೊಡ್ಡ ವಿತರಕರೇ 'KGF' ಚಾಪ್ಟರ್-1 ಸಿನಿಮಾ ಬಿಡುಗಡೆಗೆ ಮುಂದೆ ಬಂದರು. ಯಶ್ ಕೂಡ ಚಿತ್ರವನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಪಣ ತೊಟ್ಟರು. ತಾವೇ ಮುಂದೆ ನಿಂತು ಸಿನಿಮಾ ಮಾರ್ಕೆಟಿಂಗ್, ಪ್ರಮೋಷನ್ ಕೆಲಸಗಳನ್ನು ನೋಡಿಕೊಂಡರು. ಅದಕ್ಕೆ ವಿಜಯ್ ಕಿರಗಂದೂರ್ ಜೊತೆಯಾದರು. ಇಬ್ಬರೂ ಸೇರಿ ಚಿತ್ರವನ್ನು ದೊಡ್ಡಮಟ್ಟದಲ್ಲಿ ತೆರೆಗೆ ತಂದರು. ಅಷ್ಟರಲ್ಲೇ ಮತ್ತೊಂದು ಟ್ರೈಲರ್ ರಿಲೀಸ್ ಆಗಿ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿತ್ತು.
'KGF' ಚಾಪ್ಟರ್-1 ಆಲ್ಬಮ್ ಹಿಟ್ ಆಗಿ ದೊಡ್ಡ ಬಲ ತುಂಬಿತು. 2018ರ ಡಿಸೆಂಬರ್ 21ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿತು. ರಾಕಿಭಾಯ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ಮಾಸ್ ಪ್ರೇಕ್ಷಕರಂತೂ ಸಿನಿಮಾ ನೋಡಿ ಪದೇ ಪದೇ ಮುಗಿಬಿದ್ದರು. ರಾಕಿಭಾಯ್ ಆಗಿ ಚಿನ್ನದ ಗಣಿಯಲ್ಲಿ ಯಶ್ ದರ್ಬಾರ್ ನೋಡಿ ಥ್ರಿಲ್ಲಾಗಿದ್ದರು. ಚಿತ್ರದ ಪ್ರತಿಫ್ರೇಮ್ ಮಾತನಾಡುತ್ತಿತ್ತು. ಎರಡು ವರ್ಷಗಳ ಚಿತ್ರತಂಡದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಾ ಪ್ರೇಕ್ಷಕರು ಸಿನಿಮಾ ಅಪ್ಪಿಕೊಂಡಾಡಿದರು.
ಅಂದಾಜು 60 ಕೋಟಿ ರೂ. ಬಜೆಟ್ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಷ್ಟೇ ಅಲ್ಲ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚಿಸಿತು. ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರು, ತಂತ್ರಜ್ಞರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಯಶ್ ನ್ಯಾಷನಲ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ಆಗಬಿಟ್ಟರು. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಒಮ್ಮೆ ತಿರುಗಿ ನೋಡಿತು. ನಾಲ್ಕೈದು ಭಾಷೆಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವುದು ಹೊಸದೇನು ಅಲ್ಲ. ಆದರೆ 'ಬಾಹುಬಲಿ' ಸರಣಿ ಮೂಲಕ ರಾಜಮೌಳಿ ಅದಕ್ಕೆ ಹೊಸ ರೂಪ ಕೊಟ್ಟರು. ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು 'KGF' ಚಾಪ್ಟರ್-1.
ಮೊದಲ ಭಾಗ ಹಿಟ್ ಆಗುತ್ತಿದ್ದಂತೆ ಸಹಜವಾಗಿ 2ನೇ ಭಾಗದತ್ತ ನಿರೀಕ್ಷೆ ಮೂಡಿತ್ತು. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುತ್ತಾರೆ ಎಂದಾಗ ನಿರೀಕ್ಷೆ ದುಪ್ಪಟ್ಟಾಗಿತ್ತು. ನಡುವೆ ಕೊರೋನ ಹಾವಳಿ ಶುರುವಾಗಿ ಸಿನಿಮಾ ತಡವಾಗುತ್ತಾ ಹೋಯಿತು. ಅಭಿಮಾನಿಗಳು ಕಾದು ಕಾದು ಸುಸ್ತಾದರು. ಮೊದಲ ಭಾಗಕ್ಕಿಂತ ಹಲವು ಭಾಗ ದೊಡ್ಡದಾಗಿ ಚಾಪ್ಟರ್-2 ನಿರ್ಮಾಣವಾಗಿತ್ತು. ಅಷ್ಟರಲ್ಲಾಗಲೇ ಆರಂಭಿಸಿದ್ದ 'ಕಿರಾತಕ'-2 ಸಿನಿಮಾ ಬಿಟ್ಟು ಯಶ್ 'KGF'-2 ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಮೊದಲ ಭಾಗದ ಯಶಸ್ಸು 2ನೇ ಭಾಗಕ್ಕೆ ಸಹಕಾರಿಯಾಯಿತು.
ಚಾಪ್ಟರ್-2 ಪ್ರಮೋಷನ್, ರಿಲೀಸ್ ಬಗ್ಗೆ ಚಿತ್ರತಂಡ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಕಾರಣ ಚಿತ್ರಕ್ಕಿದ್ದ ಕ್ರೇಜ್ ಆ ಮಟ್ಟಿಗಿತ್ತು. ಪದೇ ಪದೆ ರಿಲೀಸ್ ಡೇಟ್ ಬದಲಾಗಿ ಅಂತಿಮವಾಗಿ 2022ರ ಏಪ್ರಿಲ್ 14ರಂದು 'KGF'-2 ರಿಲೀಸ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೀತು. 'KGF' ಚಾಪ್ಟರ್-3 ಮಾಡುವುದಾಗಿಯೂ ಚಿತ್ರತಂಡ ಹೇಳಿದೆ. ಆದರೆ ಯಾವಾಗ ಎನ್ನುವುದು ಮಾತ್ರ ಗೊತ್ತಿಲ್ಲ. ಸದ್ಯ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











