'ಯುಐ' ಚಿತ್ರದಲ್ಲಿ ಸನ್ನಿ ಮಿಸ್ ಆಗಿದ್ದೇಕೆ? ಇನ್ನೆರಡು ದಿನದಲ್ಲಿ ಸೇಸಮ್ಮ ಫ್ಯಾನ್ಸ್‌ಗೆ ಸರ್‌ಪ್ರೈಸ್ ಕಾದಿದ್ಯಾ?
'ಯುಐ' ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿದೆ. ಸಿನಿಮಾ ಚೆನ್ನಾಗಿದ್ಯಾ? ಚೆನ್ನಾಗಿಲ್ವಾ? ಅರ್ಥ ಆಯ್ತಾ? ಅರ್ಥ ಆಗಲಿಲ್ವಾ? ಎನ್ನುವ ಚರ್ಚೆ ಮಧ್ಯೆ ಸನ್ನಿ ಲಿಯೋನ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಚಿತ್ರದಲ್ಲಿ ಮಾಜಿ ನೀಲಿರಾಣಿ ನಟಿಸಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ ಯಾವುದೇ ದೃಶ್ಯದಲ್ಲಿ ಆಕೆ ಕಾಣಿಸುತ್ತಿಲ್ಲ.
ಇತ್ತೀಚೆಗೆ ಸಿನಿಮಾಗಳಲ್ಲಿ ಸ್ಟಾರ್ ಕಲಾವಿದರನ್ನು, ಪರಭಾಷಾ ಕಲಾವಿದರನ್ನು ಕಾಸ್ಟ್ ಮಾಡುವುದು ಹೆಚ್ಚಾಗುತ್ತಿದೆ. ಆದರೆ ಉಪೇಂದ್ರ ಮಾತ್ರ ಅದಕ್ಕೆ ಭಿನ್ನ. ತಮ್ಮ ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಹೆಚ್ಚು ಅವಕಾಶ ಕೊಡುವುದಿಲ್ಲ. ಮುಖ ಪರಿಚಯವೇ ಇಲ್ಲದ ಹೊಸಬರನ್ನು ಹೆಚ್ಚು ತೋರಿಸುತ್ತಾರೆ. 'ಯುಐ' ಚಿತ್ರದಲ್ಲಿ ಕೂಡ ಸ್ಟಾರ್ ಕಲಾವಿದರು ಯಾರು ಇಲ್ಲ.

ಆರ್ಮುಗ ರವಿಶಂಕರ್, ಅಚ್ಯುತ್ ಕುಮಾರ್ ಹಾಗೂ ಸಾಧುಕೋಕಿಲ ಬಿಟ್ಟರೆ ಜನಪ್ರಿಯ ಕಲಾವಿದರು 'ಯುಐ' ಚಿತ್ರದಲ್ಲಿಲ್ಲ. ನಿಧಿ ಸುಬ್ಬಯ್ಯ ಎರಡು ಸನ್ನಿವೇಶಗಳಲ್ಲಿ ಕೆಲವೇ ಸೆಕೆಂಡ್‌ಗಳಿಗೆ ಸೀಮಿತ ಆಗಿಬಿಟ್ಟಿದ್ದಾರೆ. ನಾಯಕಿ ರೀಷ್ಮಾಗೂ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಭೂತ ಕನ್ನಡಿ ಹಿಡಿದು ಹುಡುಕಿದರೂ ಸನ್ನಿ ಲಿಯೋನ್ ಸುಳಿವೇ ಸಿಗುತ್ತಿಲ್ಲ.
ಮಾದಕ ನಟಿ ಸನ್ನಿ ಲಿಯೋನ್ ಕೂಡ 'ಯುಐ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹಿಂದೆ ಸುದ್ದಿ ಆಗಿತ್ತು. ಸನ್ನಿ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಮೊದಲಿಗೆ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಸೇಸಮ್ಮ ಕುಣಿದಿದ್ದಾರೆ ಎನ್ನಲಾಗಿತ್ತು. ಬಳಿಕ ಇಲ್ಲ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಸಿನಿಮಾ ನೋಡಿದ ಸನ್ನಿ ಅಭಿಮಾನಿಗಳು ಹ್ಯಾಪುಮೋರೆ ಹಾಕಿಕೊಂಡಿದ್ದಾರೆ.
ಸನ್ನಿ ಲಿಯೋನ್ 'ಯುಐ' ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳನ್ನು ವೈರಲ್ ಮಾಡಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ಚಿತ್ರದಲ್ಲಿ ಯಾಕೆ ಇಲ್ಲ? ಆಕೆ ನಟಿಸಿದ್ದ ಸನ್ನಿವೇಶ ಅಥವಾ ಕುಣಿದಿದ್ದ ಸಾಂಗ್ ಏನಾಯ್ತು? ಎಂದು ಕೇಳುತ್ತಿದ್ದಾರೆ. ಎಡಿಟಿಂಗ್‌ನಲ್ಲಿ ಉಪ್ಪಿ ಎಲ್ಲದಕ್ಕೂ ಕತ್ತರಿ ಹಾಡಿಬಿಟ್ಟರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈಗಾಗಲೇ ಕನ್ನಡದ ಕೆಲ ಚಿತ್ರಗಳಲ್ಲಿ ಸನ್ನಿ ಲಿಯೋನ್ ಬಿಂದಾಸ್ ಆಗಿ ಕುಣಿದು ಹೋಗಿದ್ದಾರೆ. ಕರ್ನಾಟಕದ ಹುಲ್ಲೂರು ಗ್ರಾಮದಲ್ಲಿ ಆಕೆಯ ಅಭಿಮಾನಿ ಸಂಘ ಕೂಡ ಇದೆ. ಸನ್ನಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೇಕ್ ಕತ್ತರಿಸಿ ಖುಷಿ ಪಟ್ಟಿರುವ ಫೋಟೊ, ವೀಡಿಯೋ ವೈರಲ್ ಆಗಿತ್ತು. ಅಷ್ಟರಮಟ್ಟಿಗೆ ಆಕೆಗೆ ಅಭಿಮಾನಿ ಬಳಗ ಇದೆ. ಉಪ್ಪಿ ಸಿನಿಮಾ ಅಂದಮೇಲೆ ಏನಾದರೂ ವಿಶೇಷ ಪಾತ್ರ ಆಕೆ ಸಿಕ್ಕಿರುತ್ತದೆ ಎಂದು ಕೆಲವರು ಭಾವಿಸಿದ್ದರು.
ಎರಡು ಗಂಟೆ 12 ನಿಮಿಷದ ಚಿಕ್ಕ ಸಿನಿಮಾ 'ಯುಐ'. ಹಾಗಾಗಿ ಉಪೇಂದ್ರ ಸಾಕಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿಬಿಟ್ಟರಾ? ಅದರಲ್ಲಿ ಸನ್ನಿ ಲಿಯೋನ್ ಇದ್ದ ಸನ್ನಿವೇಶ ಅಥವಾ ಹಾಡು ಇತ್ತಾ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಇನ್ನೆರಡು ದಿನಗಳಲ್ಲಿ ಉಪೇಂದ್ರ ಸೇಸಮ್ಮನ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಟ್ಟರೂ ಕೊಡಬಹುದು ಎಂದು ಹೇಳಲಾಗುತ್ತಿದೆ.
ಉಪೇಂದ್ರ ಭಿನ್ನ ವಿಭಿನ್ನ ಆಲೋಚನೆಗಳ ಬಗ್ಗೆ ಗೊತ್ತೇಯಿದೆ. ಈಗಾಗಲೇ 'ಯುಐ' ಸಿನಿಮಾ ನೋಡಿದ ಕೆಲವರು ಮತ್ತೊಮ್ಮೆ ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ಸನ್ನಿ ಲಿಯೋನ್ ಇರುವ ಸನ್ನಿವೇಶಗಳನ್ನು ಚಿತ್ರಕ್ಕೆ ಸೇರಿಸಿದರೂ ಸೇರಿಸಬಹುದು, ಈ ವಿಚಾರದಲ್ಲಿ ಉಪೇಂದ್ರ ಅವರನ್ನು ನಂಬೋಕೆ ಆಗುವುದಿಲ್ಲ ಎಂದು ಚಿತ್ರತಂಡದ ಆಪ್ತರೇ ಹೇಳುತ್ತಿದ್ದಾರೆ.
ಹಾಗ್ ನೋಡಿದರೆ ಸನ್ನಿ ಲಿಯೋನ್ ಕ್ರೇಜ್ ಕಮ್ಮಿ ಆಗಿದೆ. ಇತ್ತೀಚೆಗೆ ಆಕೆಗೆ ಬಾಲಿವುಡ್‌ನಲ್ಲಿ ಕೂಡ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ದಕ್ಷಿಣದ ಸಿನಿಮಾಗಳಲ್ಲಿ ಕೂಡ ಬಿಂದಾಸ್ ಪಾತ್ರಗಳೇ ಹುಡುಕಿ ಬರುತ್ತಿವೆ. ಇದೆಲ್ಲದರ ನಡುವೆ 'ಯುಐ' ಚಿತ್ರಕ್ಕೆ ಕೆಲಸ ಮಾಡಿದ್ದು ವಿಫಲವಾಯ್ತಾ? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.


Click it and Unblock the Notifications











