ಮನೆಯಲ್ಲಿ ಪತ್ನಿ ಮತ್ತು ಮಗನ ಜೊತೆ ನೆಮ್ಮದಿಯಿಂದ ಇರುವ ದರ್ಶನ್, ವಿಜಯ ಲಕ್ಷ್ಮಿ ಮುಖದಲ್ಲಿ ಅರಳಿದ ನಗು..!
ಯಶಸ್ವಿ ಪುರುಷರ ಹಿಂದೆ ಮಹಿಳೆಯ ಶಕ್ತಿ ಇರುತ್ತದೆ ಎಂಬ ಮಾತೊಂದಿದೆ. ಈ ಮಾತನ್ನು ಅಕ್ಷರಶಃ ರುಜುವಾತು ಮಾಡಿದವರು ವಿಜಯಲಕ್ಷ್ಮಿ ದರ್ಶನ್. ದರ್ಶನ್ ಕೈ ಬರಿದಾಗಿದ್ದ ದಿನಗಳಿಂದ ಹಿಡಿದು ದರ್ಶನ್ ಕೈತುಂಬಾ ಕಾಸು ಗಳಿಸುವರೆಗೂ ದರ್ಶನ್ ಹಿಂದೆ ಬಂಡೆಗಲ್ಲಿನಂತೆ ನಿಂತವರು ವಿಜಯ್ ಲಕ್ಷ್ಮಿ.
ನಿಜಾ. ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಮನಸ್ತಾಪ ಇಂದು ನಿನ್ನೆಯದಲ್ಲ. ಸಂಸಾರ ಅಂದಮೇಲೆ ಜಗಳ ರೊಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ದರ್ಶನ್ ವಿಚಾರದಲ್ಲಿಯೂ ಅದೇ ಆಗಿದ್ದು ಕೂಡ.

ಆದರೆ, ಎಷ್ಟೇ ಕಷ್ಟ ಎದುರಾದರು ವಿಜಯಲಕ್ಷ್ಮಿ ತಮ್ಮ ಪತಿದೇವರನ್ನು ಬಿಟ್ಟು ಕೊಟ್ಟಿಲ್ಲ. ಇದಕ್ಕೆ ದರ್ಶನ್ ಮೊನ್ನೆ ಜೈಲು ಪಾಲಾದಾಗ ವಿಜಯಲಕ್ಷ್ಮಿ ಮಾಡಿದ ಹೋರಾಟವೇ ಅತ್ಯುತ್ತಮ ಸಾಕ್ಷಿ. ಶತಾಯು ಗತಾಯು ತಮ್ಮ ಗಂಡನನ್ನು ಹೇಗಾದರೂ ಮಾಡಿ ಹೊರಗಡೆ ಕರೆತರಲೇಬೇಕೆಂದು ಶಪಥ ಮಾಡಿದ್ದ ವಿಜಯಲಕ್ಷ್ಮಿ ಮಾಡದ ಪ್ರಯತ್ನಗಳಿಲ್ಲ. ಕೈ ಮುಗಿಯದ ದೇವರಿಲ್ಲ. ಕೊಲ್ಲೂರಿಂದ ಹಿಡಿದು ಅಸ್ಸಾಂನ ಕಾಮಕ್ಯ ದೇವಸ್ಥಾನದವರೆಗೆ ಪ್ರಾರ್ಥನೆಯನ್ನು ಸಲ್ಲಿಸಿ ಹರಕೆಯನ್ನು ಹೊತ್ತ ವಿಜಯಲಕ್ಷ್ಮಿ ಮೊನ್ನೆಯಷ್ಟೇ ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟದಲ್ಲಿ ಹರಿಕೆಯನ್ನು ತೀರಿಸಿದ್ದರು.
ಇಂಥಾ ವಿಜಯಲಕ್ಷ್ಮಿ ಈಗ ದರ್ಶನ್ ಹೊರ ಬಂದ ನಂತರ ಮೊದಲ ಬಾರಿ ನಗುಮುಖದ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಈ ನಗು ನೋಡಿ ಎಷ್ಟು ದಿನವಾಗಿತ್ತು ತಾಯಿ ಎನ್ನುತ್ತಿರುವ ಅಭಿಮಾನಿಗಳು ಹೀಗೆ ಸದಾ ಕಾಲ ಖುಷಿಯಾಗಿರಿ ಎಂದು ಹರಸಿ ಹಾರೈಸುತ್ತಿದ್ದಾರೆ. ಅತ್ತಿಗೆ ನೀವು ನಿಜವಾಗ್ಲೂ ದೇವತೆ.....ನಿಮ್ಮ ತಾಳ್ಮೆ ಸಹನೆ...ಅಬ್ಬಬ್ಬಾ ಒಂದು ಸಲಾಂ...ಬಾಸ್ ನಿಮ್ಮನ್ನ ಪಡೆಯೋಕ್ ಪುಣ್ಯ ಮಾಡಿದ್ರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ ಡಿ ಬಾಸ್ ಅಭಿಮಾನಿಗಳ ನಗುವಿಗೆ ಕಾರಣವಾದ ನಮ್ಮ ನಿಮ್ಮೆಲ್ಲರ ಪ್ರೀತಿಯ ವಿಜಯಲಕ್ಷ್ಮಿ ಅತ್ತಿಗೆ ನಿಮ್ಮ ಈ ನಗು ಸದಾ ಕಾಲ ಇಗೆ ಇರಲಿ ಅತ್ತಿಗೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಮುಖದಲ್ಲಿ ಸದಾ ಈ ನಗು ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ ದರ್ಶನ್ ಅವರ ಅಭಿಮಾನಿಗಳು.
ಅಂದ್ಹಾಗೇ ದರ್ಶನ್ ಜೈಲಿಂದ ಆಚೆ ಬಂದ ನಂತರ ದೇವರಿಗೆ ಅರ್ಪಿಸುವ ರೀತಿಯಲ್ಲಿ ಕೈಯಲ್ಲಿ ಹೂ ಹಿಡಿದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.ಇನ್ನು ದರ್ಶನ್ ಜೈಲಿನಲ್ಲಿ ಇದ್ದ ಸಮಯದಲ್ಲಿ ಅಭಿಮಾನಿಗಳಿಗೆ ವಿಶೇಷವಾದ ಸಂದೇಶವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದರು. ನನಗೆ, ನಿಮಗೆ, ನಮ್ಮೆಲ್ಲರಿಗೆ ಇದೊಂದು ಪರೀಕ್ಷೆಯ ಸಮಯ. ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ನಮಗೆ ಹಾನಿಯಾಗುತ್ತೆ ಎಂದಿದ್ದ ವಿಜಯಲಕ್ಷ್ಮಿ ನಾವೆಲ್ಲರೂ ತಾಳ್ಮೆ ಮತ್ತು ಶಾಂತಿಯಿಂದ ಇರೋಣ ಎಂದು ಅಭಿಮಾನಿಗಳಿಗೆ ಹೇಳಿದ್ದರು. ನಿಮ್ಮೆಲ್ಲರ ಆತಂಕವನ್ನು ನಾನು ದರ್ಶನ್ ಅವರಿಗೆ ಹೇಳಿದ್ದೇನೆ ಅವರು ನಿಮ್ಮ ಪ್ರತಿ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ, ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗೆ ಇದೆ ಎಂದು ಕೂಡ ವಿಜಯಲಕ್ಷ್ಮಿ ದರ್ಶನ್ ಹೇಳಿದ್ದರು.


Click it and Unblock the Notifications











