James Celebrations in Mysuru: ಅಪ್ಪು ಕಟೌಟ್‌ಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ಮೈಸೂರಲ್ಲಿ ಹಬ್ಬ ಮಾಡಿದ ಅಭಿಮಾನಿಗಳು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 70 ಅಡಿ ಎತ್ತರದ ಅಪ್ಪು ಕಟೌಟ್ ಅನ್ನು ಚಿತ್ರಮಂದಿರದ ಬಳಿ ನಿಲ್ಲಿಸಲಾಗಿದ್ದು, ಆ ಕಟೌಟ್‌ಗೆ ಹೆಲಿಕಾಪ್ಟರ್ ಮೂಲಕ ಪುಪ್ಪವೃಷ್ಟಿ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.
ಸಿನಿಮಾಮಂದಿರಗಳು ಇರುವ ಮೈಸೂರಿನ ರಸ್ತೆಗಳು ಅಪ್ಪು ಭಾವಚಿತ್ರದಿಂದ ಕಂಗೊಳಿಸುತ್ತಿವೆ. ಎಲ್ಲಿ ನೋಡಿದರೂ ಅಪ್ಪು ಕಟೌಟ್ ರಾರಾಜಿಸುತ್ತಿದೆ. ಚಿತ್ರಮಂದಿರದ ಸುತ್ತ ಅಪ್ಪು ಚಿತ್ರ ಹಾಗೂ ಅವರ ಸಿನಿಮಾ ಹೆಸರು ಇರುವ ಟಿ -ಶರ್ಟ್ ಗಳನ್ನು ಅಭಿಮಾನಿಗಳು ಧರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. 'ಜೇಮ್ಸ್' ಚಿತ್ರ ನೋಡಲು ಬೆಳಗ್ಗೆ 6 ಗಂಟೆಯಿಂದಲೇ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.
ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಜೇಮ್ಸ್' ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಮೈಸೂರಿನ ಗಾಯತ್ರಿ ಹಾಗೂ ಗಮ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅಭಿಮಾನಿಗಳ ಜೊತೆ ಕುಳಿತು ಚಿತ್ರ ವೀಕ್ಷಿಸಿದರು. ಚಿತ್ರದ ಡೈಲಾಗ್ ಹೊಡೆದು ಗಮನ ಸೆಳೆದರು.

ಈ ವೇಳೆ ಮಾಧ್ಯಮಗಳೊಡನೆ ಮಾತನಾಡಿದ ಶಿವರಾಜ್ ಕುಮಾರ್, ''ಡಬ್ಬಿಂಗ್ ಮಾಡುವ ವೇಳೆ ನನಗೆ ತುಂಬಾ ನೋವಾಗ್ತಾ ಇತ್ತು. ಅಪ್ಪು ಇಲ್ಲದ ಹುಟ್ಟು ಹಬ್ಬ ಆಚರಣೆ ತುಂಬಾ ದುಃಖದ ವಿಚಾರ. ಏನ್ ಇದೆ ಅದನ್ನ ನೋಡಿಕೊಂಡು ಮುಂದೆ ಹೋಗ್ತಾ ಇರಬೇಕು. ಹುಟ್ಟು ಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನ ಶೇರ್ ಮಾಡ್ತಾ ಇದ್ವಿ. ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ ಸಾಕಷ್ಟು ಕೊಟ್ಟಿದ್ದೇನೆ. ಅವನಿಗೆ ಬ್ರಾಂಡ್ ಅಂದ್ರೆ ಇಷ್ಟ. ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ. ಅವನ ಸಿನಿಮಾ ಬಿಡುಗಡೆ ಆಗಿದೆ. ಅವನಿಲ್ಲದ ವೇಳೆ ಸಿನಿಮಾ ಬಿಡುಗಡೆ ಹೆಚ್ಚು ದುಃಖ ತರ್ತಾ ಇದೆ.
ಫಿಲ್ಮ್ ಸಿಟಿಗೆ ಪುನೀತ್ ರಾಜ್ ಕುಮಾರ್ ಹೆಸರಿಡೋ ವಿಚಾರ. ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತೋಷನೆ ಆಗುತ್ತೆ. ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡಲ್ಲ. ಅಭಿಮಾನಿಗಳು ಅಭಿಮಾನದಿಂದ ಹೇಳ್ತಿದ್ದಾರೆ. ಅದರಂತೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೂ ಸಂತೋಷ. ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಮಂದಿ ಇದ್ದಾರೆ ಅವ್ರ ಹೆಸ್ರನ್ನೂ ಇಡಬಹುದು'' ಎಂದರು.
ಮೈಸೂರಿನ ಹಲವೆಡೆ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಅನ್ನದಾನ ಮತ್ತು ರಕ್ತದಾನ ನಡೆಯಿತು. ಅಭಿಮಾನಿಗಳು ಸ್ವತಃ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಇನ್ನು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಚಾಮುಂಡಿ ಬೆಟ್ಟದಲ್ಲಿ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು. 'ಜೇಮ್ಸ್' ಸಿನಿಮಾ ರಾಜ್ಯದಾದ್ಯಂತ ಇಂದು ಬಿಡುಗಡೆ ಆಗಿದ್ದು ಮೈಸೂರಿನಲ್ಲಿ ಮಾತ್ರವೇ ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಬಳಿ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಬ್ಯಾನರ್ ಅನ್ನು ವಿಮಾನದ ಮೂಲಕ ಬಾನಿನಲ್ಲಿ ಹಾರಿಸಲಾಗಿದೆ. ಕಟೌಟ್‌ಗೆ ಪುಷ್ಪವೃಷ್ಟಿ, ಅನ್ನದಾನ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಹಲವೆಡೆ ರಕ್ತದಾನ, ನೇತ್ರದಾನ ಕಾರ್ಯಕ್ರಮಗಳು ಸಹ ನಡೆದಿವೆ.
ಇದೀಗ ಬಿಡುಗಡೆ ಆಗಿರುವ ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಶರತ್ ಕುಮಾರ್, ಶ್ರೀಕಾಂತ್, ಆದಿತ್ಯ ಮೆನನ್, ತಿಲಕ್, ಚಿಕ್ಕಣ್ಣ, ರಂಗಾಯಣ ರಘು, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್ ಇನ್ನೂ ಹಲವರು ನಟರು ನಟಿಸಿದ್ದಾರೆ. ಸಿನಿಮಾವು ಭಾರಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದು ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.


Click it and Unblock the Notifications











