'ರಾಬರ್ಟ್' ಬೆನ್ನಲ್ಲೇ ದರ್ಶನ್ ನಟನೆಯ ಆ ಸಿನಿಮಾ ಮರುಬಿಡುಗಡೆಗೆ ಫ್ಯಾನ್ಸ್ ಪಟ್ಟು
ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಸೂಪರ್ ಹಿಟ್ ಸಿನಿಮಾಗಳ ರೀ- ರಿಲೀಸ್ ಟ್ರೆಂಡ್ ನಡೀತಿದೆ. ಇತ್ತೀಚೆ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಮತ್ತೆ ತೆರೆಗೆ ಬಂದು ಸದ್ದು ಮಾಡ್ತಿದೆ. ಐಪಿಎಲ್, ಎಲೆಕ್ಷನ್ ಅಂತ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕಿದರು. ಈ ಸಮಯದಲ್ಲಿ ಕೆಲ ಹಳೇ ಸಿನಿಮಾಗಳನ್ನು ಹೊಸ ರೂಪದಲ್ಲಿ ತೆರೆಗೆ ತರಲಾಯಿತು.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಜಾಕಿ' ಸಿನಿಮಾ ರೀ-ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ಕೆಆರ್‌ಜಿ ಸ್ಟುಡಿಸೋಸ್ ಸಂಸ್ಥೆ ಮುಂದಿನ ವರ್ಷಗಳಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಇದೇ ರೀತಿ ಅವರ ಹಿಟ್ ಸಿನಿಮಾಗಳನ್ನು ಸಿನಿಮಾಗಳನ್ನು ಮತ್ತೆ ತೆರೆಗೆ ತರಲು ಮುಂದಾಗಿದೆ. ಮುಂದಿನ ವರ್ಷವೇ ಪುನೀತ್ ಹೀರೊ ಆಗಿ ನಟಿಸಿದ 'ಅಪ್ಪು' ಚಿತ್ರವನ್ನು ಮರುಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ 'A' ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಕೆಲವೆಡೆ 2 ವಾರ ಯಶಸ್ವಿ ಪ್ರದರ್ಶನ ಕಂಡಿದೆ. ಇದನ್ನೆಲ್ಲಾ ನೋಡಿ ದರ್ಶನ್ ಅಭಿಮಾನಿಗಳು 'ನವಗ್ರಹ' ಸಿನಿಮಾ ರೀ ರಿಲೀಸ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. #WeWantNavagrahaReRelease ಹ್ಯಾಶ್‌ಟ್ಯಾಗ್ ವೈರಲ್ ಆಗುತ್ತಿದೆ. ದಿನಕರ್ ನಿರ್ದೇಶನದ 'ನವಗ್ರಹ' ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನವಾಗಿತ್ತು.
ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳು ಲೀಡ್ ರೋಲ್‌ಗಳಲ್ಲಿ ನಟಿಸಿದ್ದ ಸಿನಿಮಾ ಇದು. ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರವನ್ನು ನಿರ್ಮಿಸಿ ಜಗ್ಗು ಆಗಿ ಲೀಡ್ ರೋಲ್ ಪ್ಲೇ ಮಾಡಿದ್ದರು. ಮೈಸೂರು ಅಂಬಾರಿ ಕದಿಯುವ ಕದೀಮರ ಪಾತ್ರಗಳಲ್ಲಿ ಎಲ್ಲರೂ ಕಾಣಿಸಿಕೊಂಡಿದ್ದರು. ಬಹಳ ಶ್ರೇಷ್ಠವಾದ, ತಾಯಿ ಚಾಮುಂಡಿಯನ್ನು ಹೊತ್ತು ತಿರುಗುವ ಚಿನ್ನದ ಅಂಬಾರಿಯ ಮೇಲೆ ದುಷ್ಟರ ಕಣ್ಣು ಬಿದ್ದರೆ ಏನಾಗುತ್ತದೆ ಎನ್ನುವ ಕಾನ್ಸೆಪ್ಟ್ ಚಿತ್ರದಲ್ಲಿತ್ತು.

ತೂಗುದೀಪ ಶ್ರೀನಿವಾಸ್ ಮಗ ದರ್ಶನ್, ಸುಧೀರ್ ಪುತ್ರ ತರುಣ್, ಪ್ರಭಾಕರ್ ಪುತ್ರ ವಿನೋದ್, ಲೋಕೇಶ್ ಪುತ್ರ ಸೃಜನ್, ಸುಂದರ್ ಕೃಷ್ಣ ಅರಸ್ ಪುತ್ರ ನಾಗೇಂದ್ರ, ದಿನೇಶ್ ಪುತ್ರ ಗಿರಿ ಹಾಗೂ ಕೀರ್ತಿರಾಜ್ ಪುತ್ರ ಧರ್ಮ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದರು. ವಿ. ಹರಿಕೃಷ್ಣ ಸಂಗೀತದ ಎಲ್ಲಾ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ಶಕ್ತಿ ತುಂಬಿತ್ತು. 2008ರಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ತಕ್ಕಮಟ್ಟಿಗೆ ಸಕ್ಸಸ್ ಕಂಡಿತ್ತು.
'ನವಗ್ರಹ' ಸೀಕ್ವೆಲ್ ಬರುತ್ತದೆ ಎಂದು ಕೂಡ ಹೇಳಲಾಗಿತ್ತು. ಆದರೆ ಬರಲೇಯಿಲ್ಲ. ದರ್ಶನ್ ಸೀಕ್ವೆಲ್ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ ಎಂದುಬಿಟ್ಟಿದ್ದಾರೆ. ಸಾಕಷ್ಟು ಜನ ದರ್ಶನ್ ಅಭಿಮಾನಿಗಳಿಗೆ 'ನವಗ್ರಹ' ಆಲ್‌ಟೈಮ್ ಫೇವರಿಟ್. ಅದರಲ್ಲೂ ಜಗ್ಗು ಪಾತ್ರ ಬಹಳ ಇಷ್ಟ. ಹಾಗಾಗಿ ಆ ಚಿತ್ರವನ್ನು ಮತ್ತೆ ತೆರೆಮೇಲೆ ನೋಡುವ ಉತ್ಸಾಹದಲ್ಲಿದ್ದಾರೆ. ಈ ಹಿಂದೆ ದರ್ಶನ್ ನಟಿಸಿದ 'ಮೆಜೆಸ್ಟಿಕ್' ಸಿನಿಮಾ ಹೊಸ ರೂಪದಲ್ಲಿ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿತ್ತು.
ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲೇ 'ನವಗ್ರಹ' ಸಿನಿಮಾ ನಿರ್ಮಾಣವಾಗಿತ್ತು. ಹಾಗಾಗಿ ಅವರೇ ರೀ ರಿಲೀಸ್‌ಗೆ ಮನಸ್ಸು ಮಾಡಬೇಕು. ಅಥವಾ ಯಾರಾದರೂ ವಿತರಕರು ಮುಂದೆ ಬಂದರೆ ಅಭಿಮಾನಿಗಳ ಆಸೆ ಈಡೇರಬಹುದು. ಈ ವಿಷಯ ಪಕ್ಕಕ್ಕಿಟ್ಟರೆ ಸದ್ಯ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











