ಇವತ್ತು ಬರಲಿಲ್ಲ 'ರಿಚರ್ಡ್ ಆಂಟನಿ' ಅಪ್‌ಡೇಟ್: ಈ ಚಿತ್ರದಲ್ಲಿ ನಟಿಸಲು 26 ಕೆಜಿ ತೂಕ ಇಳಿಸಿ ಕಾಯ್ತಿದ್ದಾರೆ ಆ ನಟ!
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಪ್ತರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ. ಇನ್ನು 'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಬಂದಿಲ್ಲ.
ಎರಡು ವರ್ಷಗಳ ಹಿಂದೆಯೇ 'ಉಳಿದವರು ಕಂಡಂತೆ' ಪ್ರೀಕ್ವೆಲ್ 'ರಿಚರ್ಡ್ ಆಂಟನಿ' ಘೋಷಣೆ ಆಗಿತ್ತು. ಆದರೆ ಬಳಿಕ ಯಾಕೋ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ 'ಉಳಿದವರು ಕಂಡಂತೆ' ಸಿನಿಮಾ 10 ವರ್ಷ ಪೂರೈಸಿದ ಸಮಯದಲ್ಲಿ ಪ್ರೀಕ್ವೆಲ್ ಅಪ್‌ಡೇಟ್ ಸಿಗುತ್ತೆ ಎಂದು ಕೆಲವರು ಕಾದಿದ್ದರು. ಆದರೆ ಸಿಗಲೇಯಿಲ್ಲ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿ 'ರಿಚರ್ಡ್ ಆಂಟನಿ' ಬಗ್ಗೆ ಏನಾದರೂ ಮಾಹಿತಿ ಸಿಗುತ್ತೆ ಎಂದು ಕಾದವರಿಗೂ ನಿರಾಸೆಯಾಗಿದೆ. ಸಿಂಪಲ್ ಸ್ಟಾರ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ರಕ್ಷಿತ್ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಮಾಡಿದೆ. "ಅದ್ಭುತ ಪ್ರತಿಭೆ ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ. ನಿಮ್ಮ ಅನನ್ಯ ಕಲಾತ್ಮಕತೆ ಮತ್ತು ಸಿನಿಮಾದ ಮೇಲಿನ ಮಿತಿಯಿಲ್ಲದ ಉತ್ಸಾಹ ನಿಜವಾಗಿಯೂ ಗಮನಾರ್ಹ. ನಿಮೊಟ್ಟಿಗೆ 'ರಿಚರ್ಡ್ ಆಂಟನಿ' ಜರ್ನಿ ಆರಂಭಿಸಲು ಉತ್ಸುಕರಾಗಿದ್ದೇವೆ" ಎಂದು ಪೋಸ್ಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಬರಲ್ಲ. ಕೆಲ ಭಿನ್ನಾಭಿಪ್ರಾಯಗಳಿಂದ ಖುದ್ದು ರಕ್ಷಿತ್ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಇದೀಗ ಅಧಿಕೃತವಾಗಿ ಅದಕ್ಕೆ ತೆರೆ ಬಿದ್ದಿದೆ. ಇದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋದು ಖಚಿತವಾಗಿದೆ. ಇನ್ನು ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಕುತೂಹಲವೂ ಇದೆ.

2014ರಲ್ಲಿ ಬಂದಿದ್ದ 'ಉಳಿದವರು ಕಂಡಂತೆ' ಚಿತ್ರದಲ್ಲಿ ಕಿಶೋರ್, ತಾರಾ, ರಿಷಬ್ ಶೆಟ್ಟಿ, ಯಜ್ಞಾ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದರು. ದಿನೇಶನ ಪಾತ್ರದಲ್ಲಿ ಪ್ರಮೋದ್ ನಟನೆ ಇಷ್ಟವಾಗಿತ್ತು. ಪ್ರೀಕ್ವೆಲ್‌ನಲ್ಲಿ ಕೂಡ ಅವರು ನಟಿಸಲಿದ್ದಾರೆ. ಖಡಕ್ ಸಿನಿಮಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 'ಲಾಫಿಂಗ್ ಬುದ್ದ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೆ. 'ರಿಚರ್ಡ್ ಆಂಟನಿ' ಚಿತ್ರಕ್ಕೆ ತೂಕ ಇಳಿಸಬೇಕು ಎಂದು ರಕ್ಷಿತ್ ಹೇಳಿದ್ದ, ಹಾಗಾಗಿ 26 ಕೆಜಿ ಸಣ್ಣ ಆಗಿದ್ದೀನಿ" ಎಂದಿದ್ದಾರೆ.
ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ನನಗೆ ಸಿನಿಮಾ ಇಷ್ಟವಿರಲಿಲ್ಲ. ಆದರೆ 'ಉಳಿದವರು ಕಂಡಂತೆ' ಚಿತ್ರಕ್ಕೂ ಮುನ್ನ ರಕ್ಷಿತ್- ರಿಷಬ್ ನನ್ನನ್ನು ನಟಿಸುವಂತೆ ಕೇಳಿದರು. ನಾನು ಆಗಲ್ಲ ಎಂದೆ. ಅದಕ್ಕೆ ರಿಷಬ್ ಶೆಟ್ಟಿ ಚೆನ್ನಾಗಿ ಬೈದ. ಮದುವೆ ಆಗಿದೆ, ಕಮೀಟ್‌ಮೆಂಟ್‌ಗಳಿವೆ. ರಂಗಭೂಮಿ ಜೊತೆಗೆ ಸಿನಿಮಾ ಮಾಡು ಎಂದ. ಬಳಿಕ ಇದೊಂದು ಚಿತ್ರದಲ್ಲಿ ಮಾತ್ರ ನಟಿಸುತ್ತೇನೆ ಎಂದು ಷರತ್ತು ಹಾಕಿ 'ಉಳಿದವರು ಕಂಡಂತೆ' ಚಿತ್ರದಲ್ಲಿ ಬಣ್ಣ ಹಚ್ಚಿದೆ. ಬಳಿಕ ಏನಾಯಿತು ಎನ್ನುವುದು ಗೊತ್ತೇಯಿದೆ" ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
2014ರಲ್ಲಿ ಬಂದಿದ್ದ 'ಉಳಿದವರು ಕಂಡಂತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ. ಆದರೆ ಕೆಲವರಿಗೆ ಸಿನಿಮಾ ಬಹಳ ಇಷ್ಟವಾಗಿತ್ತು. ತಮಿಳಿಗೂ ರೀಮೆಕ್ ಆಯಿತು. ಕಲ್ಟ್ ಸಿನಿಮಾ ಸ್ಟೇಟಸ್ ಪಡೆದುಕೊಂಡಿತ್ತು. ಬಳಿಕ ಪ್ರೀಕ್ವೆಲ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದರು. 2 ವರ್ಷಗಳ ಹಿಂದೆ ಟೀಸರ್ ಸಮೇತ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಯಿತು.


Click it and Unblock the Notifications











