'ಎಕ್ಕ' ಕಥೆಗೂ 'ಬಂಧನ' ಹಾಗೂ 'ಮುಂಗಾರುಮಳೆ'ಗೂ ಇಂದೆಂಥಾ ಲಿಂಕ್; ಛೇ.. ಹೀಗಾಗಬಾರದಿತ್ತು!
ರೋಹಿತ್ ಪದಕಿ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ಶೀಘ್ರದಲ್ಲೇ 10 ಕೋಟಿ ರೂ. ಕಲೆಕ್ಷನ್ ಗಡಿ ದಾಟಲಿದೆ. ಈ ವರ್ಷದ ಕನ್ನಡದ ಮೊದಲ ಹಿಟ್ ಸಿನಿಮಾ ಎನಿಸಿಕೊಂಡಿದೆ.
'ಎಕ್ಕ' ಚಿತ್ರಕ್ಕೆ ಕಿರೀಟಿ ಹಾಗೂ ಶ್ರೀಲೀಲಾ ನಟನೆಯ 'ಜ್ಯೂನಿಯರ್' ಸಿನಿಮಾ ಪೈಪೋಟಿ ಕೊಡುತ್ತಿದೆ. ಬಾಕ್ಸಾಫೀಸ್‌ನಲ್ಲಿ 'ಸಯಾರಾ' ದರ್ಬಾರ್ ಕೂಡ ಜೋರಾಗಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಮಿಂಚಿದ್ದಾರೆ. ಅಂದಹಾಗೆ 'ಎಕ್ಕ' ಚಿತ್ರದ ಕಥೆಗೂ ಸೂಪರ್ ಹಿಟ್ 'ಬಂಧನ' ಹಾಗೂ 'ಮುಂಗಾರು ಮಳೆ' ಸಿನಿಮಾ ಕಥೆಗಳಿಗೂ ಒಂದು ಲಿಂಕ್ ಇದೆ. ಈ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಪಾರ್ವತಿಪುರದ ಯುವಕ ಮುತ್ತು ಬೆಂಗಳೂರಿಗೆ ಬಂದು ಭೂಗತಲೋಕ ಪ್ರವೇಶಿಸುವ ಕಥೆ 'ಎಕ್ಕ' ಚಿತ್ರದಲ್ಲಿದೆ. ತನ್ನವರಿಗಾಗಿ ನಿಲ್ಲುವ ನಾಯಕ ತನ್ನ ಅರಿವಿಲ್ಲದೇ ಪಾತಕಲೋಕಕ್ಕೆ ಇಳಿದು ಬಳಿಕ ಅದರಿಂದ ಹೊರಬರಲು ಹೋರಾಟ ನಡೆಸುತ್ತಾನೆ. ಈ ಹಾದಿಯಲ್ಲಿ ಅವನ ಬಾಳಿಗೆ ಇಬ್ಬರು ಹುಡುಗಿಯರ ಪ್ರವೇಶವಾಗುತ್ತದೆ. ಒಬ್ಬಳು ನಂದಿನಿ(ಸಂಜನಾ ಆನಂದ್) ಹಾಗೂ ಮತ್ತೊಬ್ಬಳು ಮಲ್ಲಿಕಾ(ಸಂಪದಾ). ನಂದಿನಿಯನ್ನೇ ಮುತ್ತು ಮೊದಲು ಪ್ರೀತಿಸುತ್ತಾನೆ. ಆದರೆ ಪಾತಕಲೋಕಕ್ಕೆ ಬರುವ ಆತನಿಗೆ ಬಾರ್ ಡ್ಯಾನ್ಸರ್ ಮಲ್ಲಿಕಾ ಹತ್ತಿರವಾಗಿಬಿಡುತ್ತಾಳೆ.
ನಂದಿನಿ ಬಳಿ ಒಂದು ಸತ್ಯ ಹೇಳಲು ಸಾಧ್ಯವಾಗದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಮುತ್ತು ನಿಧಾನವಾಗಿ ಆಕೆಯಿಂದ ದೂರಾಗುವಂತಾಗುತ್ತದೆ. ಫಸ್ಟ್ ಹಾಫ್‌ನಲ್ಲಿ ಇಬ್ಬರ ಲವ್‌ಸ್ಟೋರಿ ಚೆನ್ನಾಗಿಯೇ ಸಾಗುತ್ತದೆ. 'ಬ್ಯಾಂಗಲ್ ಬಂಗಾರಿ' ಎಂದು ಬಿಂದಾಸ್ ಆಗಿ ಕುಣಿದು ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಸುತ್ತಾರೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ಇದ್ದಕ್ಕಿದಂತೆ ನಂದಿನಿ ಪಾತ್ರ ಕಣ್ಮರೆ ಆಗಿಬಿಡುತ್ತದೆ. 'ಎಕ್ಕ' ಚಿತ್ರದಲ್ಲಿ ನಂದಿನಿ ನಾಯಕ ಮುತ್ತುಗೆ ಸಿಗುವುದೇ ಇಲ್ಲ.
ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ 'ಬಂಧನ' ಹಾಗೂ 'ಮುಂಗಾರುಮಳೆ' ಚಿತ್ರಗಳಲ್ಲಿ ನಾಯಕಿಯರ ಹೆಸರು ಕೂಡ ನಂದಿನಿ ಆಗಿತ್ತು. ಆ ಸಿನಿಮಾಗಳಲ್ಲಿ ಕೂಡ ನಾಯಕ-ನಾಯಕಿ ಕೊನೆಗೆ ಒಂದಾಗುವುದೇ ಇಲ್ಲ. 'ಎಕ್ಕ' ಚಿತ್ರದಲ್ಲೂ ಅದೇ ಪುನರಾವರ್ತನೆ ಆಗಿದೆ ಎಂದು ಕೆಲವರು ಲಿಂಕ್ ಮಾಡಿ ಚರ್ಚೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಾಮೆಂಟ್ಸ್ ಬರುತ್ತಿದೆ. ಇದು ನಿರ್ಮಾಪಕ ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡವರೆಗೂ ಹೋಗಿ ತಲುಪಿದೆ.

1984ರಲ್ಲಿ ಬಂದಿದ್ದ 'ಬಂಧನ' ಸಿನಿಮಾದಲ್ಲಿ ಡಾ. ಹರೀಶ್ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ್ದರು. ಡಾ. ನಂದಿನಿ ಆಗಿ ಸುಹಾಸಿನಿ ಮೋಡಿ ಮಾಡಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ಡಾ. ಹರೀಶ್ ತಮ್ಮ ಪ್ರೀತಿ ವಿಚಾರವನ್ನು ಡಾ. ನಂದಿನಿ ಬಳಿ ಹೇಳಿಕೊಳ್ಳುವ ಮುನ್ನ ಬಾಲು(ಜೈ ಜಗದೀಶ್) ಜೊತೆ ನಂದಿನಿ ಮದುವೆ ಫಿಕ್ಸ್ ಆಗಿಬಿಡುತ್ತದೆ.
'ಮುಂಗಾರು ಮಳೆ' ಚಿತ್ರದಲ್ಲಿ ಪ್ರೀತಂ ಆಗಿ ಗಣೇಶ್, ನಂದಿನಿ ಆಗಿ ಪೂಜಾ ಗಾಂಧಿ ಜೋಡಿ ಕಮಾಲ್ ಮಾಡಿತ್ತು. ಅದಾಗಲೇ ಬೇರೊಬ್ಬರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಹುಡುಗಿಯ ಪ್ರೀತಿಯಲ್ಲಿ ಪ್ರೀತಮ್ ಬೀಳುತ್ತಾನೆ. ಕೊನೆಗೆ ಆಕೆ ಕೂಡ ಒಪ್ಪಿಕೊಳ್ಳುತ್ತಾಳೆ. ಪ್ರೀತಂ ಮಾತ್ರ ತ್ಯಾಗ ಮಾಡಿ ದೇವದಾಸನಾಗಿಬಿಡುತ್ತಾನೆ. ಈ ಸಿನಿಮಾ ಕೂಡ ಬ್ಲಾಕ್‌ಬಸ್ಟರ್ ಆಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು.
ಥೇಟ್ 'ಬಂಧನ' ಹಾಗೂ 'ಮುಂಗಾರಮಳೆ' ಸಿನಿಮಾಗಳ ರೀತಿಯ ಇದೀಗ 'ಎಕ್ಕ' ಚಿತ್ರದಲ್ಲಿ ಕೂಡ ಮುತ್ತುಗೆ ನಂದಿನಿ ಸಿಗಲೇ ಇಲ್ಲ ಎಂದು ಅಭಿಮಾನಿಗಳು ಒಂದಕ್ಕೊಂದು ಲಿಂಕ್ ಮಾಡಿ ಮಾತನಾಡುತ್ತಿದ್ದಾರೆ. ಈ ಸಿನಿಮಾ ಕೂಡ ಅದೇ ರೀತಿ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಮುತ್ತು ತನ್ನ ಹುಡುಗಿ ನಂದಿನಿ ಹೆಸರನ್ನು ಫೋನ್‌ನಲ್ಲಿ ನಂದಿನಿ ತುಪ್ಪ ಎಂದು ಸೇವ್ ಮಾಡಿಕೊಂಡಿರುತ್ತಾನೆ. ಇದನ್ನು ನೋಡಿ "ನಂದಿನಿ ತುಪ್ಪ ಕೆಎಂಎಫ್ ಸ್ವಂತ. ಅದು ಯಾವ ಹೀರೊಗೂ ಸಿಗಲ್ಲ" ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಮಾಡಿರುವ ಕಾಮೆಂಟ್ ವೈರಲ್ ಆಗ್ತಿದೆ.


Click it and Unblock the Notifications











